
ಕನ್ನಡಪ್ರಭ ವಾರ್ತೆ ಉಡುಪಿ (ಸೆ.5): ಕೃಷ್ಣನಗರಿ ಉಡುಪಿಯಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ದಿನವಿಡೀ ಉಪವಾಸ, ಜಪ, ಪಾರಾಯಣಗಳಲ್ಲಿ ಕಳೆದ ಕೃಷ್ಣಭಕ್ತರು ಸಾವಿರಾರು ಸಂಖ್ಯೆಯಲ್ಲಿ ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭೇಟಿ ನೀಡಿ, ಅಷ್ಟಮಿಯ ಕೃಷ್ಣನನ್ನು ವೀಕ್ಷಿಸಿದರು.
ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣಮಠವನ್ನು ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿದೆ. ಮಳೆ ಇಲ್ಲದ ಕಾರಣ ಕೃಷ್ಣಮಠ ಮತ್ತು ರಥಬೀದಿ ಶುಕ್ರವಾರ ದಿನವಿಡೀ ಭಕ್ತರಿಗೆ ಗಿಜಿಗುಡುತ್ತಿತ್ತು.
ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರಿಗೆ ಇದು ಪ್ರಥಮ ಜನ್ಮಾಷ್ಟಮಿಯಾಗಿದ್ದು, ಅವರು ಶುಕ್ರವಾರ ಕೃಷ್ಣನನ್ನು ಯಶೋಧಾ ಸ್ತನ್ಯಪಾನ ಅಲಂಕಾರ ಮಾಡಿ ಮಹಾಪೂಜೆ ಸಲ್ಲಿಸಿದರು.
ಶ್ರಾವಣ ಮಾಸದ ಅಷ್ಟಮಿಯ ದಿನ ಅಂದರೆ ಶುಕ್ರವಾರ ಶನಿವಾರದ ಮಧ್ಯರಾತ್ರಿಯ 12.12ಕ್ಕೆ ಚಂದ್ರೋದಯ ಕಾಲದಲ್ಲಿ, ರೋಹಣಿ ನಕ್ಷತ್ರ ಸಹಯೋಗದಲ್ಲಿ, ಶ್ರೀಗಳು ಪ್ರಧಾನ ಅರ್ಘ್ಯ ಪ್ರದಾನ ಮಾಡಿದರು. ನಂತರ ಶ್ರೀಮಠದ ಅಧಿಕಾರಿ ವರ್ಗ ಮತ್ತು ಗಣ್ಯರು ಮತ್ತು ಭಕ್ತರಿಗೂ ತುಳಸಿಕಟ್ಟೆಯಲ್ಲಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು.
ಶನಿವಾರ ಮಧ್ಯಾಹ್ನ 3ರ ನಂತರ ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ, ಮೊಸರುಕುಡಿಕೆ ನಡೆಯಲಿದೆ. ರಥಬೀದಿಯಲ್ಲಿ ಹಾಕಲಾಗಿರುವ ಗುಜ್ಜಿ (ಕಮಾನು)ಗಳಲ್ಲಿ ಕಟ್ಟಿರುವ ಪಂಚಕಜ್ಜಾಯ, ಮೊಸರು, ಓಕುಳಿ ನೀರು ಇತ್ಯಾದಿಗಳಿರುವ ಮಡಕೆಗಳನ್ನು ಗೊಲ್ಲವೇಷಧಾರಿಗಳು ಕೊಲಿನಿಂದ ಒಡೆದು ಬಾಯಿಬಡಿದುಕೊಂಡು ಕುಣಿಯುತ್ತಾ ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸುತ್ತಾರೆ.
ಅದೇ ಸಂದರ್ಭದಲ್ಲಿ ಅಬ್ಬದರ ಹುಲಿ ಕುಣಿತವೂ ಆಕರ್ಷಣೆಯಾಗಿರುತ್ತದೆ. ಜೊತೆಗೆ ಕೃಷ್ಣನ ಮಣ್ಣಿನ ವಿಗ್ರಹವನ್ನಿಟ್ಟು ಮಹಾಪೂಜೆ, ರಥೋತ್ಸವ ನೆರವೇರಿಸಲಾಗುತ್ತದೆ. ನಂತರ ಮೃಣ್ಮಯ ವಿಗ್ರಹವನ್ನು ಮಧ್ವಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಳ್ಳುತ್ತದೆ.