2019ರಲ್ಲಿ 6 ಸಾವಿರಕ್ಕೆ ಕೆಲಸ, ಕೆಪಿಎಸ್ಸಿ ಸದಸ್ಯನಾದ ಬಳಿಕ 100 ಎಕರೆ ಜಮೀನು: ಇದು 'ನುಂಗಪ್ಪ' ಸಾಹುಕಾರ್‌ ಸ್ಟೋರಿ

Published : Sep 05, 2026, 07:25 AM ISTUpdated : Sep 05, 2026, 07:30 AM IST
KPSC Chairman Shivashankarappa Sahukar

ಸಾರಾಂಶ

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಪಶುವೈದ್ಯ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಪಿಎಸ್‌ಸಿ ಸದಸ್ಯರಾದ ನಂತರ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೂರಾರು ಎಕರೆ ಜಮೀನು ಖರೀದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ (ಸೆ.5): ಕೆಪಿಎಸ್‌ಸಿ ಪಶುವೈದ್ಯ ಹುದ್ದೆಗಳ ನೇಮಕಾತಿ ಅಕ್ರಮ ಹಗರಣದಲ್ಲಿ ಆರೋಪ ಹೊತ್ತಿರುವ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಂಪತ್ತು ಬಗೆದಷ್ಟು ಬಯಲಾಗುತ್ತಿದೆ.

ಕೆಪಿಎಸ್‌ಸಿ ಸದಸ್ಯನಾಗಿ 2019ರಲ್ಲಿ ನೇಮಕವಾಗಿದ್ದ ಶಿವಶಂಕರಪ್ಪ ಸಾಹುಕಾರ್ 2019ವರೆಗೆ ಕಲಬುರಗಿ ಸರ್ಕಾರೆತರ ಸಂಸ್ಥೆಯಲ್ಲಿ ಮಾಸಿಕ ₹6 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಕೆಪಿಎಸ್‌ಸಿ ಸದಸ್ಯರಾಗಿ ನೇಮಕವಾದ ಬಳಿಕ ಕೋಟಿ ಕೋಟಿ ಆಸ್ತಿ ಖರೀದಿ ಮಾಡಿ ಶಿವಶಂಕರಪ್ಪ ಸಾಹುಕಾರ್ ಆಗಿದ್ದಾರೆ ಎಂದು ಶರಣ್ ಐಟಿ ದಾಖಲೆ ಬಿಡುಗಡೆ ಮಾಡಿದ್ದಾರೆ.

ಸಾಹುಕಾರ್‌ಗೆ ಇರುವ ಪಿತ್ರಾರ್ಜಿತ ಆಸ್ತಿ ಕೇವಲ 4 ಎಕರೆ ಮಾತ್ರ. ತಮ್ಮ ಹೆಸರಿಗೆ ಹೆಂಡತಿ ಮತ್ತು ಮಗನ ಹೆಸರಲ್ಲಿ ನೂರು ಎಕರೆಗೂ ಹೆಚ್ಚು ಜಮೀನು ಖರೀದಿ ಮಾಡಿದ್ದಾರೆಂದು ಆರೋಪಿಸಲಾಗಿದೆ. ಕೆಪಿಎಸ್‌ಸಿ ಸದಸ್ಯ ಮತ್ತು ಅಧ್ಯಕ್ಷ ಆದ ಮೇಲೆ ನೂರು ಎಕರೆಗೂ ಹೆಚ್ಚು ಎಕರೆ ಜಮೀನು ಖರೀದಿಸಿದ್ದಾರೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ವಿವಿಧೆಡೆ ಕೋಟ್ಯಾಂತರ ರು. ಮೌಲ್ಯದ ಜಮೀನು ಖರೀದಿಸಿದ್ದರು. ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಶರಣ್ ಐಟಿ ಸಾಹುಕಾರ್ ಅವರ ಜಮೀನಿನ ದಾಖಲೆಗಳ ಬಿಡುಗಡೆ ಮಾಡಿದ್ದಾರೆ.

ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ ಪಡೆದು ಕೋಟಿ ಕೋಟಿ ಆಸ್ತಿ ಮಾಡಿಕೊಂಡಿದ್ದಾರೆ. ನಿಷ್ಪಕ್ಷಪಾತ ತನಿಖೆ ಮಾಡಿದರೆ ಅವರ ಅಕ್ರಮ ಆಸ್ತಿ ಇನ್ನೂ ಹೊರಗೆ ಬರುತ್ತದೆ ಎಂದು ಶರಣು ಐಟಿ ಆಗ್ರಹಿಸಿದ್ದಾರೆ.

ಸಿಐಡಿ ಎದುರು ವಿಚಾರಣೆಗೆ ಸಾಹುಕಾರ್‌ ದಿಢೀರ್‌ ಹಾಜರ್‌

ಕನ್ನಡಪ್ರಭ ವಾರ್ತೆ ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ನೋಟಿಸ್ ನೀಡಿದ ಕೆಲವೇ ಕ್ಷಣಗಳಲ್ಲಿ ಸಿಐಡಿ ಮುಂದೆ ಗುರುವಾರ ರಾತ್ರಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ದಿಢೀರ್ ವಿಚಾರಣೆಗೆ ಹಾಜರಾಗಿದ್ದಾರೆ. ನಗರದ ಅರಮನೆ ರಸ್ತೆಯಲ್ಲಿ ಸಿಐಡಿ ಕೇಂದ್ರ ಕಚೇರಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ತನಿಖಾಧಿಕಾರಿ ಮುಂದೆ ಎರಡನೇ ಬಾರಿಗೆ ಶಿವಶಂಕರಪ್ಪ ಹಾಜರಾಗಿದ್ದಾರೆ. ಒಂದು ಗಂಟೆಗೂ ಅಧಿಕ ಹೊತ್ತು ಸಾಹುಕಾರ್‌ರನ್ನು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡ ಸಿಐಡಿ, ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಿದೆ ಎಂದು ತಿಳಿದು ಬಂದಿದೆ.

ಯಾವುದೇ ತಪ್ಪು ಮಾಡಿಲ್ಲ-ಸಾಹುಕಾರ್‌

ಇನ್ನು ವಿಚಾರಣೆ ವೇಳೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಪುನರುಚ್ಚರಿಸಿರುವ ಶಿವಶಂಕರಪ್ಪ ಅವರು, ಸಿಐಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಧಿಕಾರಿಗಳ ಮುಂದೆ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.

ಈ ವಿಚಾರಣೆ ಸಂದರ್ಭದಲ್ಲಿ ಹಗರಣದಲ್ಲಿ ಬಂಧಿತ ಆರೋಪಿಗಳಾದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಹಾಗೂ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಸ್ನೇಹ ಬಗ್ಗೆ ತನಿಖಾಧಿಕಾರಿ ಪ್ರಸ್ತಾಪಿಸಿದ್ದಾರೆ. ತನಗೆ ವೈಯಕ್ತಿಕವಾಗಿ ಬಸವರಾಜ್ ಪರಿಚಯಿವಿಲ್ಲ. ಆತ ಯಾರೆಂಬುದೂ ಗೊತ್ತಿಲ್ಲ. ಆದರೆ ಕೆಪಿಎಸ್‌ಸಿ ಅಧ್ಯಕ್ಷನಾಗಿರುವ ಕಾರಣ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರ ಜತೆ ಒಡನಾಟವಿತ್ತು. ಆಯೋಗದ ಕೆಲಸಗಳಿಗೆ ಸೀಮಿತವಾಗಿ ಅಧಿಕಾರಿ ಜತೆ ಸಂಪರ್ಕವಿತ್ತು. ನೇಮಕಾತಿ ಅಕ್ರಮದಲ್ಲಿ ಅವರ ಪಾತ್ರದ ಬಗ್ಗೆ ಗೊತ್ತಿಲ್ಲ ಎಂದು ಶಿವಶಂಕರಪ್ಪ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಶಿವಶಂಕರಪ್ಪ ಅವರಿಗೆ ಗುರುವಾರ ಮಧ್ಯಾಹ್ನ ಸಿಐಡಿ ಎರಡನೇ ಬಾರಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್ ಸ್ವೀಕರಿಸಿದ ಕೆಲವೇ ತಾಸುಗಳಲ್ಲಿ ತಮ್ಮ ವಕೀಲರನ್ನು ಸಂಪರ್ಕಿಸಿ ಸಮಾಲೋಚಿಸಿ ಅವರು ಅಭಿಪ್ರಾಯಪಡೆದರು. ಕೊನೆಗೆ ತಮ್ಮ ವಕೀಲರ ಸಲಹೆ ಮೇರೆಗೆ ರಾತ್ರಿಯೇ ಸಿಐಡಿ ಕಚೇರಿಗೆ ತೆರಳಿ ತನಿಖಾಧಿಕಾರಿ ಮುಂದೆ ಶಿವಶಂಕರಪ್ಪ ಹಾಜರಾಗಿದ್ದಾರೆ ಎನ್ನಲಾಗಿದೆ.

PREV
Read more Articles on
click me!

Recommended Stories

ಉಡುಪಿ ಕೃಷ್ಣಗೆ ಯಶೋಧಾ ಸ್ತನ್ಯಪಾನ ಅಲಂಕಾರ, ಇಂದು ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ
PM Kisan : ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?