ನಂದಿತಾ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಲು NSUI ಆಗ್ರಹ

By Kannadaprabha NewsFirst Published Jun 23, 2020, 9:00 AM IST
Highlights

2014ರ ಅಕ್ಟೋಬರ್‌ 31ರಂದು ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಗ್ರಾಮದ 9 ನೇ ತರಗತಿ ವಿದ್ಯಾರ್ಥಿನಿ ನಂದಿತಾ ನಿಗೂಢವಾಗಿ ಸಾವನ್ನಪ್ಪಿದ್ದಳು. ರಾಜ್ಯಾದ್ಯಂತ ವಿದ್ಯಾರ್ಥಿನಿ ಸಾವಿನ ವಿಷಯ ತೀವ್ರ ಸಂಚಲನ ಉಂಟು ಮಾಡಿತ್ತು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಎನ್‌ಎಸ್‌ಯುಐ ಆಗ್ರಹಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜೂ.23): ತೀರ್ಥಹಳ್ಳಿ ಪಟ್ಟಣದ ಕುಮಾರಿ ನಂದಿತಾ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಎನ್‌ಎಸ್‌ಯುಐ ಜಿಲ್ಲಾ ಘಟಕ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

2014ರ ಅಕ್ಟೋಬರ್‌ 31ರಂದು ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಗ್ರಾಮದ 9 ನೇ ತರಗತಿ ವಿದ್ಯಾರ್ಥಿನಿ ನಂದಿತಾ ನಿಗೂಢವಾಗಿ ಸಾವನ್ನಪ್ಪಿದ್ದಳು. ರಾಜ್ಯಾದ್ಯಂತ ವಿದ್ಯಾರ್ಥಿನಿ ಸಾವಿನ ವಿಷಯ ತೀವ್ರ ಸಂಚಲನ ಉಂಟು ಮಾಡಿತ್ತು ಎಂದು ತಿಳಿಸಿದರು.

2014 ಅಕ್ಟೋಬರ್‌ 29ರಂದು ತನ್ನ ಶಾಲೆಗೆ ತೆರಳಿದ್ದ ಕುಮಾರಿ ನಂದಿತಾ, ಅದೇ ದಿನ ಮಧ್ಯಾಹ್ನದ ವೇಳೆ ತೀರ್ಥಹಳ್ಳಿಯಿಂದ 1.5 ಕಿಲೋ ಮೀಟರ್ ದೂರದ ಆನಂದಗಿರಿ ಗುಡ್ಡದ ಸಮೀಪ ಒಂಟಿಯಾಗಿ ಪತ್ತೆಯಾಗಿದ್ದರು. ವಿದ್ಯಾರ್ಥಿನಿ ಮರುದಿನ ಅಸ್ವಸ್ಥಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ, ನಂತರ ಉಡುಪಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆಗೆ ಸ್ಪಂದಿಸದೇ ಅಕ್ಟೋಬರ್‌ 31ರಂದು ಮೃತಪಟ್ಟಿದ್ದಳು.

ತೀರ್ಥಹಳ್ಳಿ ಬಾಳೆಬೈಲಿನ ನಂದಿತಾ ಮನೆಗೆ ಅಂದು ಭೇಟಿ ಮಾಡಿದ್ದ ಈಗಿನ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಅಮಿತ್‌ ಶಾ ಅವರು ವಿದ್ಯಾರ್ಥಿನಿ ಸಾವಿನ ತನಿಖೆ ನಡೆಸುವ ಭರವಸೆ ನೀಡಿದ್ದರು. ಈಗಿನ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕೂಡಾ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಅದರಂತೆ ಕೂಡಲೇ ರಾಜ್ಯ ಸರ್ಕಾರ ನಂದಿತಾಳ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕು. ಮೃತ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರಲ್ಲಿ ಪತ್ನಿ, ಕೋಲ್ಕತಾದಲ್ಲಿ ಅತ್ತೆ ಕೊಂದು ಆತ್ಮಹತ್ಯೆ ಮಾಡಿಕೊಂಡ!

ಪ್ರಕರಣದ ಅಪರಾಧಿಗಳು ಎಷ್ಟೇ ಪ್ರಭಾವಿಗಳು ಆಗಿದ್ದರೂ, ಯಾವುದೇ ಪಕ್ಷ ಆಗಿದ್ದರೂ, ಯಾವುದೇ ಸಮುದಾಯಕ್ಕೆ ಸೇರಿದ್ದರೂ ಕಠಿಣ ಶಿಕ್ಷೆ ಆಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಂದಿತಾಳ ನಿಗೂಢ ಸಾವಿನ ಬಗ್ಗೆ ಸಿಬಿಐಗೆ ತನಿಖೆ ವಹಿಸಲು ವಿಳಂಬ ಮಾಡಿದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್‌, ಜಿಲ್ಲಾಧ್ಯಕ್ಷ ಎಚ್‌.ಎಸ್‌.ಬಾಲಾಜಿ, ಕಾರ್ಯಾಧ್ಯಕ್ಷ ವಿನಯ್‌, ನಗರಾಧ್ಯಕ್ಷ ವಿಜಯ್‌, ಗ್ರಾಮಾಂತರ ಅಧ್ಯಕ್ಷ ರವಿ, ಅಬ್ದುಲ್‌ ಸತ್ತಾರ್‌, ಗಿರೀಶ್‌, ಶಿವು, ಭರತ್‌, ಸಂದೀಪ್‌, ಪ್ರಮೋದ್‌, ಆಕಾಶ್‌, ಮಂಜು ಪುರಲೆ, ಪ್ರಮೋದ್‌, ಪ್ರಜ್ವಲ್‌, ಶಿವು, ಅಭಿ, ನರಸಿಂಹ ಇತರರು ಇದ್ದರು.
 

click me!