6-8 ವರ್ಷಗಳಿಂದ ಬಾಕಿ ಉಳಿದ ಶಿವಮೊಗ್ಗ ಹೆದ್ದಾರಿ ಕಾಮಗಾರಿ; ಅಧಿಕಾರಿಗಳಿಗೆ ರಾಘವೇಂದ್ರ ಖಡಕ್ ವಾರ್ನಿಂಗ್

Kannadaprabha News   | Kannada Prabha
Published : Aug 31, 2026, 10:51 AM IST
BY Raghavendra

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ, ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭೂಸ್ವಾಧೀನ, ಪರಿಹಾರ ವಿತರಣೆ ಮತ್ತು ಇಲಾಖೆಗಳ ಸಮನ್ವಯ ಕೊರತೆಯಂತಹ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ, ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 6-8 ವರ್ಷಗಳಿಂದ ಆರಂಭಗೊಂಡು ವಿವಿಧ ಕಾರಣಗಳಿಂದಾಗಿ ಈವರೆಗೂ ಪೂರ್ಣಗೊಳ್ಳದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕಾರಣ ಹೇಳದೆ ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಅನುಕೂಲವಾಗುವಂತೆ ಲೋಕಾರ್ಪಣೆಗೊಳಿಸಲು ಸಜ್ಜಾಗುವಂತೆ ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ತುಮಕೂರು-ಶಿವಮೊಗ್ಗ, ಚಿತ್ರದುರ್ಗ-ಶಿವಮೊಗ್ಗ, ಶಿಕಾರಿಪುರ-ರಾಣೇಬೆನ್ನೂರು, ಸಾಗರ ಟೌನ್‌ ಮತ್ತಿತರ ಸ್ಥಳಗಳಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಭೂ ದಾಖಲೆಗಳ ಸರ್ವೆ ಇಲಾಖೆ, ತೋಟಗಾರಿಕೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಅಲ್ಲಿನ ನಿವಾಸಿಗಳು, ಭೂಸ್ವಾದೀನ ಪ್ರಕ್ರಿಯೆಯ ನಂತರ ಪರಿಹಾರಧನ ವಿತರಣೆಯಲ್ಲಿ ವಿಳಂಬ ಮತ್ತಿತರ ಕಾರಣಗಳಿಂದಾಗಿ ಕೆಲವೆಡೆ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವುದು ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿಕೊಂಡು ಸಮಸ್ಯೆ-ಸವಾಲುಗಳಿಗೆ ತಕ್ಷಣದ ಪರಿಹಾರ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ರಾಘವೇಂದ್ರ ಖಡಕ್ ಸೂಚನೆ

ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ಪಾವತಿ, ಜಂಟಿ ಸರ್ವೆ ವರದಿ, ಅರಣ್ಯ ಭೂಮಿ ವರ್ಗಾವಣೆ ಹಾಗೂ ಅನುಮತಿ, ಮರಗಳ ತೆರವು, ಸ್ಥಳಾಂತರಿಸಬೇಕಾದ ಕಟ್ಟಡಗಳು ಮತ್ತು ಇತರೆ ಇಲಾಖೆಗಳ ಅನುಮತಿಗಳ ಕಾರಣದಿಂದ ಸ್ಥಗಿತಗೊಂಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಶಿವಮೊಗ್ಗ–ಮಂಗಳೂರು ರಾಷ್ಟ್ರೀಯ ಹೆದ್ದಾರಿ-169ರ ವಿವಿಧ ಭಾಗಗಳಲ್ಲಿಯೂ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳಿಗೆ ಪರಿಹಾರ ಪಾವತಿಸಿ ಕಾಮಗಾರಿ ಸ್ಥಳವನ್ನು ಹಸ್ತಾಂತರಿಸುವಂತೆ ತಿಳಿಸಿದರು.

ಶಿವಮೊಗ್ಗ ನಗರ ವ್ಯಾಪ್ತಿಯ ಹೆದ್ದಾರಿ ಕಾಮಗಾರಿಗೆ ಸಂಬಂಧ ಬಾಕಿ ಇರುವ ಫಲಾನುಭವಿಗಳ ಪರಿಹಾರ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ-766ಸಿ ಬೈಂದೂರು–ರಾಣೇಬೆನ್ನೂರು ರಸ್ತೆಯ ಶಿಕಾರಿಪುರ ಬೈಪಾಸ್ ಕಾಮಗಾರಿ ಸಂಬಂಧ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳು, ಜಂಟಿ ಸರ್ವೆ ಹಾಗೂ ಪರಿಹಾರ ಪಾವತಿ ಪ್ರಕ್ರಿಯೆ ತ್ವರಿತವ ಪೂರ್ಣಗೊಳಿಸಬೇಕು. ಗಬ್ಬೂರು ಗ್ರಾಮದ ಸರ್ವೆ ನಂ.58ಕ್ಕೆ ಸಂಬಂಧಿಸಿದ ಜಂಟಿ ಸರ್ವೆ ವರದಿ ಹಾಗೂ ಬಾಕಿ ಇರುವ ಪರಿಹಾರ ಪ್ರಕರಣಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೈಂದೂರು–ನಿಟ್ಟೂರು ಭಾಗದ 37.85 ಕಿ.ಮೀ.ವರೆಗೆ ದ್ವಿಪಥ ರಸ್ತೆ ಕಾಮಗಾರಿಗೆ ಅರಣ್ಯೇತರ ಪ್ರದೇಶದಲ್ಲಿರುವ ಮರಗಳನ್ನು ತೆರವುಗೊಳಿಸಲು ಅಗತ್ಯ ಅನುಮತಿ, Stage-1 ಅನುಮೋದನೆಗೆ ಸಂಬಂಧಿಸಿದ ಪ್ರಮಾಣಪತ್ರ ಹಾಗೂ ಭೂಮಿ ಹಸ್ತಾಂತರ ಪ್ರಕ್ರಿಯೆ ತ್ವರಿತ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ರಾ.ಹೆ -169ಎ ತೀರ್ಥಹಳ್ಳಿ–ಮಲ್ಪೆ ರಸ್ತೆಯ ಮೇಗರವಳ್ಳಿ–ಆಗುಂಬೆ ಭಾಗದ ಕಾಮಗಾರಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅನುಮೋದನೆ ದೊರೆತಿರುವ ಹಿನ್ನೆಲೆ, ಅರಣ್ಯ ಭೂಮಿಯಲ್ಲಿ ಮರ ತೆರವು ಸೇರಿದಂತೆ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಬೇಕು. ಸಂಬಂಧಪಟ್ಟ ಇಲಾಖೆಗಳು ಅಗತ್ಯ ಹಣ ಪಾವತಿ ಮತ್ತು ದಾಖಲೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ-206ರ ಶಿವಮೊಗ್ಗ–ಆನಂದಪುರ ಭಾಗದಲ್ಲಿ ಕಿ.ಮೀ. 111.50ರಿಂದ 148.088ರವರೆಗೆ ಚತುಷ್ಪಥ ರಸ್ತೆನಿರ್ಮಾಣ ಕಾಮಗಾರಿಗೆ ಸಂಬಂಧ ಸಾಗರ ಮತ್ತು ಶಿವಮೊಗ್ಗ ಉಪವಿಭಾಗಗಳಲ್ಲಿ ಬಾಕಿ ಇರುವ ಭೂಸ್ವಾಧೀನ ಪರಿಹಾರ ಪ್ರಕರಣ ತ್ವರಿತ ಇತ್ಯರ್ಥಪಡಿಸಬೇಕು. ಬಾಕಿ ಇರುವ ಪ್ರಕರಣಗಳಿಗೆ ಪರಿಹಾರ ಪಾವತಿ, ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಗತ್ಯ ಕ್ರಮ ಹಾಗೂ ಜಂಟಿ ಸರ್ವೆ ವರದಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಷ್ಟ್ರೀಯ ಹೆದ್ದಾರಿ-206ರ ತುಮಕೂರು–ಹೊನ್ನಾವರ ರಸ್ತೆಯ ಎಲ್.ಸಿ.110 (ಹೊಸೂರು) ಹಾಗೂ ಎಲ್.ಸಿ.152 (ತಾಳಗುಪ್ಪ) ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧ ಭೂಸ್ವಾಧೀನ ಪ್ರಕರಣಗಳ ಜಂಟಿ ಸರ್ವೆ ನಕ್ಷೆ, ಪರಿಹಾರ ಪಾವತಿ ಹಾಗೂ ಅರಣ್ಯ ಇಲಾಖೆಯ ಅನುಮೋದನೆ ದೊರೆತಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಸ್ಥಳವನ್ನು ಹಸ್ತಾಂತರಿಸುವಂತೆ ಖಡಕ್‌ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್‌ , ರಾಷ್ಟ್ರೀಯ ಹೆದ್ದಾರಿ ಚೀಫ್‌ ಇಂಜಿನಿಯರ್‌ ರಾಜೇಶ್‌, ಅರಣ್ಯಾಧಿಕಾರಿ ಅಜ್ಜಯ್ಯ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಮೆಸ್ಕಾಂ, ರಾ.ಹೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

PREV
Read more Articles on
click me!

Recommended Stories

ರಾಜ್ಯದಲ್ಲಿ ಅಡಕೆ ಇಳುವರಿಯಲ್ಲಿ 34% ಕುಸಿತ: ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ
ಕಬಿನಿ ಖಾಲಿಯಾದ ಬೆನ್ನಲ್ಲೇ ಕೆಆರ್‌ಎಸ್‌ನಿಂದಲೂ ತಮಿಳುನಾಡಿಗೆ ಕಾವೇರಿ ನೀರು! ರೈತರಿಂದ ಹೆಚ್ಚಾದ ಆಕ್ರೋಶ