ಮಧು ಬಂಗಾರಪ್ಪ ವಿರುದ್ಧ ಸುಂದರೇಶ್‌ ಬಹಿರಂಗ ಅಸಮಾಧಾನ; ‘ಆಪ್ತರು ಪಕ್ಷ ಹಾಳು ಮಾಡ್ತಿದ್ದಾರೆ’ ಆರೋಪ

Naveen Kodase   | Kannada Prabha
Published : Sep 24, 2026, 11:54 AM IST
Madhu Bangarappa

ಸಾರಾಂಶ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಹಿರಿಯ ಮುಖಂಡ ಎಚ್.ಎಸ್. ಸುಂದರೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೂಕ್ತ ನಾಯಕರಿಗೆ ಟಿಕೆಟ್ ಹಾಗೂ ಸಚಿವ ಸ್ಥಾನ ನೀಡದಿದ್ದರೆ ಪಕ್ಷ ತ್ಯಜಿಸುವ ಎಚ್ಚರಿಕೆ ನೀಡಿದ್ದಾರೆ.

Shivamogga Congress Rift: ಶಿವಮೊಗ್ಗ: ಬೂದಿಮುಚ್ಚಿದ ಕೆಂಡದಂತಿದ್ದ ಜಿಲ್ಲಾ ಕಾಂಗ್ರೆಸ್‌ನಲ್ಲಿದ್ದ ಅಸಮಾಧಾನ ಭುಗಿಲೆದ್ದಿದ್ದು. ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಹಾಲಿ ಸೂಡಾ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್ ಪಕ್ಷದ ಹಿರಿಯ ನಾಯಕರ ವಿರುದ್ಧ ಬಹಿರಂವಾಗಿಯೇ ಸಿಡಿದೆದ್ದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ರಾಜ್ಯ ನಾಯಕರ ವಿರುದ್ಧವೂ ಅಸಮಾಧಾನ ಹೊರಹಾಕಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅವರ ಆಪ್ತರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 40 ವರ್ಷ ಪಕ್ಷಕ್ಕಾಗಿ ದುಡಿದವರಿಗೆ ಬೆಲೆ ಇಲ್ಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲವು ಮುಖಂಡರು ಪಕ್ಷವನ್ನು ಹಾಳು ಮಾಡುತ್ತಿದ್ದಾರೆ. ಪಕ್ಷ ಸಂಘಟಿಸುವ ಬದಲು ಕಚೇರಿಯಲ್ಲಿ ಕುಳಿತು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಸಚಿವರು ಈ ಬಗ್ಗೆ ಗಮನಹರಿಸಬೇಕು. ಇಂಥವರಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದೆ ಪಕ್ಷಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ್ದೇನೆ. ವಿದ್ಯಾರ್ಥಿ ದೆಸೆಯಿಂದಲೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಪಕ್ಷ ನಮ್ಮಂತಹ ಹಿರಿಯರನ್ನು ಬಿಟ್ಟು ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕುತ್ತಿದೆ. ನನ್ನನ್ನು ಎಂಎಲ್‌ ಎ ಮಾಡಲಿಲ್ಲ, ಎಂಪಿ ಚುನಾವಣೆಗೆ ಅಭ್ಯರ್ಥಿಯಾಗಿ ನನ್ನ ಹೆಸರು ಫೈನಲ್ ಆಗಿದ್ದರೂ ಅದನ್ನು ತಪ್ಪಿಸಲಾಯಿತು. ಇಷ್ಟೆಲ್ಲಾ ಮಾಡಿದ ನನಗೆ ಯಾವುದೇ ಉನ್ನತ ಹುದ್ದೆ ನೀಡದೆ, 18 ತಿಂಗಳು ಕಾಡಾ, ಈಗ ಕಿತ್ತೋದ ಸೂಡಾ ನೀಡಿದ್ದಾರೆ. 40 ವರ್ಷಗಳಿಂದ ಪಕ್ಷ ಕಟ್ಟಿದ ನಾವು ಸಿಎಂ ಬಂದಾಗ ಕೊನೆಯಲ್ಲಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷ ಬಿಡುತ್ತೇವೆ:

ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೆ ಶಾಸಕ ಬೇಳೂರು ಗೋಪಾಲಕೃಷ್ಣ, ನಾನು ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ. ತೀರ್ಥಹಳ್ಳಿಯಲ್ಲಿ ಆರ್.ಎಂ. ಮಂಜುನಾಥ್ ಗೌಡರಿಗೆ ಟಿಕೆಟ್ ಕೊಡಬೇಕು, ಶಿವಮೊಗ್ಗದಲ್ಲಿ ನನಗೆ ಟಿಕೆಟ್ ಕೊಡಬೇಕು. ಸೊರಬದಲ್ಲಿ ಹೊಸ ಕ್ಯಾಂಡಿಡೇಟ್ ಹಾಕುತ್ತಿದ್ದೇವೆ. ಅವರಿಗೆ ಟಿಕೆಟ್ ಕೊಡಬೇಕು. ಶಿಕಾರಿಪುರದಲ್ಲಿ ಏನೂ ಇಲ್ಲದ ನಾಗರಾಜ್ ಗೌಡರಿಗೆ ಟಿಕೆಟ್ ಕೊಟ್ಟಿದ್ದರು. ನಾನು ಗ್ಯಾರಂಟಿ ಕಾರ್ಡ್ ಹಂಚಿ ಆತನಿಗೆ 70 ಸಾವಿರ ಮತ ಬರುವಂತೆ ಮಾಡಿದ್ದೆ. ಆದರೆ, ಮುಂದಿನ ಬಾರಿ ಅವರಿಗೆ ಟಿಕೆಟ್ ಕೊಡಬಾರದು. ಕಳೆದ ಬಾರಿ ನಾನು ಜಿಲ್ಲಾಧ್ಯಕ್ಷನಾಗಿದ್ದಾಗ ಇದೇ ನನ್ನ ಕೊನೆ ಚುನಾವಣೆ ಎಂದಿದ್ದ ಕಿಮ್ಮನೆ ರತ್ನಾಕರ್, ಈಗ ಮತ್ತೆ ಸ್ಪರ್ಧೆಸುತ್ತೇನೆ ಎನ್ನುತ್ತಿದ್ದಾರೆ. ಅವರಿಗೆ ಟಿಕೆಟ್ ನೀಡಬಾರದು. ನಾವು ಹೇಳಿದವರಿಗೆ ಟಿಕೆಟ್ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಜಿಲ್ಲೆಯಲ್ಲಿ 7 ಕ್ಕೆ 7 ಸ್ಥಾನಗಳನ್ನು ಗೆಲ್ಲುತ್ತದೆ. ಇಲ್ಲದಿದ್ದರೆ ನಾವೆಲ್ಲರೂ ಪಕ್ಷ ಬಿಡುತ್ತೇವೆ ಎಂದು ಎಚ್ಚರಿಸಿದರು.

ಶಿವಮೊಗ್ಗ ಜಿಲ್ಲೆಗೆ 2 ಮಂತ್ರಿ ಸ್ಥಾನ ಕೊಡಿ

ಜಿಲ್ಲೆಯಲ್ಲಿ ಯಾರಿಗ್ಯಾರಿಗೋ ಮಂತ್ರಿ ಸ್ಥಾನ ನೀಡಲಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಬೈದವರನ್ನು ಕರೆದು ಮಂತ್ರಿ ಮಾಡಿದ್ದಾರೆ. ಬದಲಿಗೆ ಸಾಗರದ ಬೇಳೂರು ಗೋಪಾಲಕೃಷ್ಣ ಹಾಗೂ ಭದ್ರಾವತಿಯ ಸಂಗಮೇಶ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು. ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಶಿವಮೊಗ್ಗ ಹಾಗೂ ಕಾರವಾರದಲ್ಲಿ ಪಕ್ಷ ಸಂಘಟನೆಯಾಗುತ್ತದೆ. ಸಂಗಮೇಶ್ ಅವರಿಗೆ ಮಂತ್ರಿ ಸ್ಥಾನ ನೀಡಿದರೆ ಹೊಳೆಹೊನ್ನೂರು ಮತ್ತು ಶಿಕಾರಿಪುರದಲ್ಲಿ ಸಂಘಟನೆಯಾಗಿ ಉತ್ತಮ ಕೆಲಸವಾಗುತ್ತದೆ ಎಂದರು.

ಜಿಲ್ಲಾ ಮಂತ್ರಿಗಳಿಗೆ ಕಾಂಗ್ರೆಸ್ಸಿನ ಗಂಧಗಾಳಿ ಗೊತ್ತಿಲ್ಲ

ಜಿಲ್ಲಾ ಮಂತ್ರಿಗಳಿಗೆ ಕಾಂಗ್ರೆಸ್ಸಿನ ಗಂಧಗಾಳಿ ಗೊತ್ತಿಲ್ಲ. ಇವರ ಮಾತು ಕೇಳಿಕೊಂಡು ನನ್ನ ವಿರುದ್ಧವಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅರ್ಜಿ ಸಲ್ಲಿಸುವಂತೆ ಮಾಡಿದರು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಶೇ.70 ರಷ್ಟು ನನ್ನ ಸಂಬಂಧಿಕರಿದ್ದಾರೆ. ನಾನು ಒಂದು ಮಾತು ಹೇಳಿದರೆ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥ ಗೌಡ ಇಬ್ಬರೂ ಗೆಲ್ಲುವುದಿಲ್ಲ. ಕೇರಳದಿಂದ ಬಂದ ವೀಕ್ಷಕರೊಬ್ಬರು ಎಚ್.ಸಿ. ಯೋಗೇಶ್ ನನ್ನು ಜಿಲ್ಲಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಪಕ್ಷಕ್ಕಾಗಿ ನಾನು ತ್ಯಾಗ ಮಾಡಿದ್ದೇನೆ. ನನಗೂ ನೋವಾಗಿದೆ. ಇನ್ನು ಯಾವ ನಾಯಕರಿಗೂ ಬೆಲೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು. ಜಿಲ್ಲಾ ಸಚಿವರ ವಿರುದ್ಧ ಜಿಲ್ಲೆಯ ನಾಯಕರಾದ ಶಾಸಕ ಬೇಳೂರು ಗೋಪಾಲಕೃಷ್ಣ, ಬಿ.ಕೆ ಸಂಗಮೇಶ್ ಹಾಗೂ ಮುಖಂಡ ಆರ್. ಎಂ. ಮಂಜುನಾಥ್ ಗೌಡ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಹಾಗೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ದೂರು ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ ಪಕ್ಷ ಬಹಳ ತಳಮಟ್ಟಕ್ಕೆ ಹೋಗುತ್ತಿದೆ. ಗತವೈಭವ ಕಂಡ ಪಕ್ಷ ಇಂದು ಸಂಘಟನೆಯಿಲ್ಲದೆ ಸೊರಗುತ್ತಿದೆ. ಪುನಃ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಜಿಲ್ಲೆಯ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಲಾಗುವುದು ಎಂದರು.

PREV
Read more Articles on
click me!

Recommended Stories

Bengaluru: ನಗರದಲ್ಲಿ ಹೊಸ ಸ್ಕ್ಯಾಮ್; ಅಜ್ಜನೊಬ್ಬನ ವಿಡಿಯೋ ಸೆರೆ ಹಿಡಿದ ಬೈಕ್ ರೈಡರ್
Bengaluru: ಲೋಕ ಅದಾಲತ್‌ 44.28 ಲಕ್ಷ ಕೇಸ್‌ ಇತ್ಯರ್ಥ, ಮುನಿಸು ಮರೆತು ಒಂದಾದ 287 ದಂಪತಿ