ಯಾದಗಿರಿ ಶ್ರೀಗಂಧ ಕಳವು: ಶಿವಮೊಗ್ಗ, ಕೇರಳದ ನಂಟು

By Kannadaprabha News  |  First Published Nov 18, 2023, 4:00 AM IST

ಯಾದಗಿರಿಯಲ್ಲಷ್ಟೇ ಅಲ್ಲ, ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ರಾಯಚೂರಿನಲ್ಲಿಯೂ ನಡೆದಿದ್ದ ಸುಮಾರು 600 ಕೆಜಿಗಳಷ್ಟು ಗಂಧದ ಕಳವು ಪ್ರಕರಣ ಹಾಗೂ ವಿಜಯಪುರ ಸಮೀಪ ಕಳವು ಸಂಚಿನ ಪ್ರಕರಣದಲ್ಲೂ ಶಿವಮೊಗ್ಗದ ಕೆಲವರು ಭಾಗಿಯಾಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.


ಯಾದಗಿರಿ(ನ.18):  ಅರಣ್ಯ ಇಲಾಖೆಯವರು ಜಪ್ತಿ ಮಾಡಿಟ್ಟಿದ್ದ 150 ಕೆ.ಜಿ. ಶ್ರೀಗಂಧವನ್ನು ಅರಣ್ಯಾಧಿಕಾರಿ ಕಚೇರಿಯಿಂದಲೇ ಕಳವು ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಯಾದಗಿರಿಯಲ್ಲಿ ಶ್ರೀಗಂಧ ಕಳ್ಳತನ ಮಾಡಿದವರು ಶಿವಮೊಗ್ಗ ಆಸುಪಾಸು ಇದ್ದಾರೆಂಬುದು ಹಾಗೂ ಮೈಸೂರು ಮತ್ತು ಕೇರಳಕ್ಕೆ ಶ್ರೀಗಂಧದ ದಾಸ್ತಾನು ಸಾಗಿಸಿರಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅದರಂತೆ ಈಗಾಗಲೇ ಶಿವಮೊಗ್ಗಕ್ಕೆ ತೆರಳಿರುವ ತನಿಖಾಧಿಕಾರಿಗಳ ತಂಡ, ಅಲ್ಲಿನ ಶಿರಾಳಕೊಪ್ಪ ಸಮೀಪದಲ್ಲಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಅಂತಾರಾಜ್ಯ ಕಳ್ಳರ ತಂಡದ ಕೈವಾಡ ಇದರಲ್ಲಡಗಿದ್ದು, ಶ್ರೀಗಂಧ ಕಳವು ತಡೆಯಲು ಹೋಗಿದ್ದ ಅರಣ್ಯರಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿಯೊಬ್ಬ ಸಹ ಈ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.

Tap to resize

Latest Videos

ಯಾದಗಿರಿ ಶ್ರೀಗಂಧ ಕಳವು: ಆರೋಪಿಗಳ ಸುಳಿವು?

ಯಾದಗಿರಿಯಲ್ಲಷ್ಟೇ ಅಲ್ಲ, ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ರಾಯಚೂರಿನಲ್ಲಿಯೂ ನಡೆದಿದ್ದ ಸುಮಾರು 600 ಕೆಜಿಗಳಷ್ಟು ಗಂಧದ ಕಳವು ಪ್ರಕರಣ ಹಾಗೂ ವಿಜಯಪುರ ಸಮೀಪ ಕಳವು ಸಂಚಿನ ಪ್ರಕರಣದಲ್ಲೂ ಶಿವಮೊಗ್ಗದ ಕೆಲವರು ಭಾಗಿಯಾಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು, ಅ.2 ರಂದು ಯಾದಗಿರಿಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಜಪ್ತಿ ಮಾಡಿಡಲಾಗಿದ್ದ 150 ಕೆ.ಜಿ.ಯಷ್ಟು ಶ್ರೀಗಂಧ ದಾಸ್ತಾನನ್ನು ಕಳವು ಮಾಡಲಾಗಿತ್ತು. ಈ ಪ್ರಕರಣ ಮುಚ್ಚಿಹಾಕುವ ಸಲುವಾಗಿ ಬೇರೆಡೆ ಮತ್ತೆ ಶ್ರೀಗಂಧ ಗಿಡಗಳನ್ನು ಕಡಿದು, ಇದಕ್ಕೆ ತೇಪೆ ಹಚ್ಚುವ ಯತ್ನ ನಡೆದಿತ್ತು ಎಂಬ ಆರೋಪಗಳಿದ್ದವು.

ಈ ಸಂಬಂಧ "ಶ್ರೀಗಂಧ ಕಳವು ಮರೆ ಮಾಚಲು ಹೊಸ ಮರಕಡಿದು ತಂದಿಟ್ಟರು" ಶೀರ್ಷಿಕೆಯಡಿ ಕನ್ನಡಪ್ರಭ ಅ.7 ರಂದು ವಿಶೇಷ ವರದಿ ಪ್ರಕಟಿಸಿತ್ತು. ಆ ನಂತರ ಕಳವು ಪ್ರಕರಣ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದರೆ, ಮತ್ತೊಂದೆಡೆ ಹೊಸ ಮರಕಡಿದ ಬಗ್ಗೆ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿತ್ತು.

click me!