
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಮೆಗ್ಗಾನ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು.
ರೋಗಿಗಳಿಗೆ ಗುಣಮಟ್ಟದ ಆಹಾರ ದೊರೆಯುತ್ತಿಲ್ಲ. ರೋಗಿಗಳನ್ನು ಕರೆದುಕೊಂಡು ಹೋಗಲು ಹಾಳಾದ ವಿಲ್ ಚೇರ್ ಬಳಸಲಾಗುತ್ತಿದೆ. ಕಿಡ್ನಿ ಮತು ಲೀವರ್ ಸಂಬಂಧಿತ ರೋಗಿಗಳಿಗೆ ವೈದ್ಯಕೀಯ ಪರೀಕ್ಷೆಗಳಿಗಾಗಿ ಖಾಸಗಿ ಲ್ಯಾಬ್ ಗಳಿಗೆ ಬರೆದುಕೊಡಲಾಗುತ್ತಿದೆ. ಹಾಗೂ ಔಷಧಿಗಳನ್ನು ಸಹ ಖಾಸಗಿ ಮೆಡಿಕಲ್ಗಳಿಗೆ ಚೀಟಿ ಬರೆದುಕೊಡಲಾಗುತ್ತಿದೆ.
ಪ್ರಸೂತಿ ವಿಭಾಗದಲ್ಲಿ ಜನಿಸಿದ ಹೆಣ್ಣು ಮಗುವಿಗೆ ₹1800 ಹಾಗೂ ಗಂಡು ಮಗುವಿಗೆ ₹2500 ಹಣ ಪಡೆದು ನೀಡಲಾಗುತ್ತಿದೆ. ಶೌಚಾಲಯದ ನಿರ್ವಹಣೆಯೂ ಸರಿಯಿಲ್ಲ. ಆಸ್ಪತ್ರೆಯ ಐಸಿಯು ಮತ್ತು ಎಂಐಸಿಯು ಗಳಲ್ಲಿ ಸರಿಯಾದ ಉಪಕರಣಗಳು ಮತ್ತು ರೋಗಿಗೆ ಬೇಕಾಗುವ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂದು ದೂರಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀಚೌಧರಿ ಭೇಟಿ ನೀಡದ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ಬಗ್ಗೆ ದೂರುಗಳನ್ನು ಆಲಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವ್ಯವಸ್ಥೆ ಸರಿಪಡಿಸುವಂತೆ ಆದೇಶಿಸಿ 6 ತಿಂಗಳು ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಆರೋಪಿಸಿದರು.
ಪತ್ರಿಭಟನೆಯಲ್ಲಿ ಕರವೇ ಸಿಂಹ ಸೇನೆ ರಾಜ್ಯಾಧ್ಯಕ್ಷ ಎಂ.ರವಿ ಪ್ರಸಾದ್, ಜಿಲ್ಲಾಧ್ಯಕ್ಷ ಮಧುಸೂದನ್ ಎಸ್.ಎಂ, ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವುಲೆ, ಉಪಾಧ್ಯಕ್ಷರಾದ ನೂರುಲ್ಲ, ನಯಾಜ್, ಕುಮಾರ್, ಜಿಲ್ಲಾ ವಕ್ತಾರ ಎಸ್. ಭರತ್, ಕಾರ್ಯದರ್ಶಿ ನಿಂಗಣ್ಣ, ಪ್ರಮುಖರಾದ ರಫೀಕ್, ಶಿವಕುಮಾರ್, ನಿಂಗರಾಜ್, ವರದರಾಜ್, ವೆಂಕಟೇಶ್, ಲೋಕೇಶ್, ಪ್ರಧ್ಯುಮ್ನ, ಅಜಯ್ ಗೌಡ ಇದ್ದರು.