ಗ್ರಾಮಸ್ಥರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಹೊಲದ ರಸ್ತೆ ಬಂದ್ ಸೇಡು, ಮನೆಗೆ ಮರದ ದಿಮ್ಮಿಗಳಿಟ್ಟು ದಿಗ್ಪಂಧನ!

Published : Nov 19, 2026, 10:20 AM IST
Davanagere

ಸಾರಾಂಶ

ದಾವಣಗೆರೆ ತಾಲೂಕಿನ ಕುರುಡಿ ಗ್ರಾಮದಲ್ಲಿ ಸಂಬಂಧಿಗಳ ಕೌಟುಂಬಿಕ ಕಲಹ. ಗ್ರಾಮಸ್ಥರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಸಂಬಂಧಿಗಳು. ಮೊದ್ಲು ಜಮೀನಿಗೆ ರಸ್ತೆ ಬಿಡಲೆಂದು ಚಂದ್ರಪ್ಪ, ಮಹೇಶ್ವರಪ್ಪ ಕುಟುಂಬ. ಮನೆ ಪ್ರವೇಶಿಸದಂತೆ ಇಟ್ಟಿರುವ ದಿಮ್ಮಿಗಳ ತೆಗೆಸಲೆಂದು ರೇಣುಕಾರಾಧ್ಯ ಕುಟುಂಬ.

ದಾವಣಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆಯೊಂದರ ಸುತ್ತಲೂ ಮರದ ದಿಮ್ಮಿಗಳನ್ನು ಅಡ್ಡವಾಗಿ ಇಡುವ ಮೂಲಕ ಇಡೀ ಕುಟುಂಬಸ್ಥರಿಗೆ ದಿಗ್ಬಂಧನ ವಿಧಿಸಿದ ಅಮಾನವೀಯ ಘಟನೆ ದಾವಣಗೆರೆ ತಾ. ಕುರುಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ಕುರುಡಿ ಗ್ರಾಮದ ರೇಣುಕಾರಾಧ್ಯ (ಆರಾಧ್ಯ) ಎಂಬವರ ಕುಟುಂಬಕ್ಕೆ ಮನೆಯಿಂದ ಹೊರ ಬರಲು, ಒಳ ಹೋಗಲು ಆಗದಂತೆ ಮನೆಗೆ ಅಡ್ಡಲಾಗಿ ಮರದ ದಿಮ್ಮಿಗಳನ್ನು ಇಟ್ಟಿದ್ದಾರೆ. ಮನೆಯ ನಾಲ್ಕೂ ಕಡೆಗೂ ಮರದ ದಿಮ್ಮಿಗಳು ಇಟ್ಟಿರುವುದರಿಂದ ಈಗ ಇಡೀ ಕುಟುಂಬ ಸಂಚಾರಕ್ಕೆ ತೊಂದರೆ ಅನುಭ‍ವಿಸುವಂತಾಗಿದೆ.

ರೇಣುಕಾರಾಧ್ಯ, ಪತ್ನಿ ವೀಣಾ, ಇಬ್ಬರು ಪುಟ್ಟಮಕ್ಕಳು ಹಾಗೂ ವೃದ್ಧ ತಂದೆ ಜೊತೆಗೆ ಕುರುಡಿ ಗ್ರಾಮದ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪುಟ್ಟ ಮಕ್ಕಳು, ಹಿರಿಯರು ಸಹ ಮನೆಯಿಂದ ಹೊರಗೆ ಹೋಗಿ, ಬರುವುದಕ್ಕೆ ಮನೆಯ ಕಾಂಪೌಂಡ್ ಹತ್ತಿ, ಹಾರಿಕೊಂಡು ಓಡಾಡುವಂತಹ ದುಸ್ಥಿತಿ ಸೃಷ್ಟಿಸಲಾಗಿದೆ.

ಪಿಡಿಒ, ತಾಪಂ, ಗ್ರಾಮಸ್ಥರೂ ಮೌನ:

ಕಳೆದ 3 ತಿಂಗಳಿನಿಂದಲೂ ತಮ್ಮ ಕುಟುಂಬಕ್ಕೆ ಮನೆಯಿಂದ ಹೊರ ಬರಲು, ಒಳಗೆ ಹೋಗಲು ಆಗದಂತೆ ಮರದ ದಿಮ್ಮಿಗಳನ್ನು ಅಡ್ಡಲಾಗಿ ಇಟ್ಟಿದ್ದಾರೆ. ಆಗಿನಿಂದಲೂ ನಾವು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೇವೆ. ನಿತ್ಯವೂ ಮಾನಸಿಕ ಹಿಂಸೆಯಾಗುತ್ತಿದೆ. ಮಕ್ಕಳು ಕಾಂಪೌಂಡ್ ಹತ್ತಿಕೊಂಡು, ಶಾಲೆಗೆ ಹೋಗಿ ಬರುವಂತಹ ಸ್ಥಿತಿ ಇದೆ. ತಮ್ಮ ಮನೆಗೆ ನಾಲ್ಕೂ ಕಡೆಗೆ ಮರದ ದಿಮ್ಮಿಗಳನ್ನು ಇಟ್ಟು, ನಮಗೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಅಭಿವೃದ್ಧಿ ಅಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ನಾವು ಗ್ರಾಮದಲ್ಲಿ ಜೀವನ ನಡೆಸುವುದು ಹೇಗೆ? ನಮಗೆ ಬೇಕಂತಲೇ ತೊಂದರೆ ನೀಡುತ್ತಿದ್ದರೂ ಗ್ರಾ.ಪಂ. ಆಡಳಿತವೂ ಸುಮ್ಮನಿದೆ ಎಂದು ವೀಣಾ ರೇಣುಕಾರಾಧ್ಯ ಕಣ್ಣೀರು ಹಾಕುತ್ತಿದ್ದಾರೆ.

ಜಮೀನು ರಸ್ತೆಗೆ ರೇಣುಕಾರಾಧ್ಯ ಕಲ್ಲುಗಳಿಟ್ಟು ಬಂದ್:

ರೇಣುಕಾರಾಧ್ಯ ಅವರ ಸೋದರ ಸಂಬಂಧಿಗಳಾದ ಅದೇ ಕುರುಡಿ ಗ್ರಾಮದ ಚಂದ್ರಪ್ಪ, ಮಹೇಶ್ವರಪ್ಪ ಮಾತನಾಡಿ, ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾ. ರಾಮಘಟ್ಟದ ಬಳಿ ಇರುವ ತಮ್ಮ ಜಮೀನಿಗೆ ಹೋಗಿ, ಬರುವುದಕ್ಕೆ ದಾರಿ ಬಿಟ್ಟಿಲ್ಲ. ಹಾಗಾಗಿ ನಾವು ನಮ್ಮ ಮನೆಯ ಬಳಿಯ ರಸ್ತೆಯನ್ನು ಬಂದ್ ಮಾಡಿದ್ದೇವೆ. ನಮ್ಮ ಜಮೀನಿಗೆ ಹೋಗುವ ರಸ್ತೆಯಲ್ಲಿ ದೊಡ್ಡ ದೊಡ್ಡ ಕಲ್ಲುಗಳ ಹಾಕಿಸಿ, ರಸ್ತೆಯನ್ನೇ ಬಂದ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ರಾಮಘಟ್ಟ ಗ್ರಾಮದ ನಮ್ಮ ಜಮೀನಿಗೆ ನಾವು ಹೋಗಿ, ಬರಲು ಆಗದಂತೆ ಇದೇ ರೇಣುಕಾಚಾರಾಧ್ಯ ಕಲ್ಲು ಹಾಕಿಸಿದ್ದಾರೆ. ನಾವು ಕುರುಡಿ ಗ್ರಾಮದಲ್ಲಿರುವ ನಮ್ಮ ಮನೆಯ ಬಳಿಯ ರಸ್ತೆಯನ್ನು ಬಂದ್ ಮಾಡಿದ್ದೇವೆ. ಒಂದೂವರೆ ವರ್ಷದಿಂದ ಜಮೀನಿಗೆ ದಾರಿ ಇಲ್ಲದೇ ನಾವು ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಈಗ ಮನೆಗೆ ಹೋಗಲು ದಾರಿ ಇಲ್ಲವೆಂದು ಹೇಳುವ ರೇಣುಕಾರಾಧ್ಯ ಮೊದಲು ನಮಗೆ ಜಮೀನಿಗೆ ಹೋಗಲು ರಸ್ತೆಗೆ ಅನುವು ಮಾಡಿಕೊಡಲಿ ಎಂದು ಚಂದ್ರಪ್ಪ, ಮಹೇಶ್ವರಪ್ಪ ಹೇಳಿದರು.

ಗ್ರಾಮಸ್ಥರ ಮಾತಿಗೆ ಕಿಮ್ಮತ್ತು ನೀಡದ ಕುಟುಂಬಗಳು:

ರೇಣುಕಾರಾಧ್ಯ ಕುಟುಂಬ ಹಾಗೂ ಚಂದ್ರಪ್ಪ, ಮಹೇಶ್ವರಪ್ಪ ಎರಡೂ ಕುಟುಂಬದವರಿಗೂ ಗ್ರಾಮದ ಹಿರಿಯರು, ಮುಖಂಡರು ಸಾಕಷ್ಟು ತಿಳಿ ಹೇಳಿದರೂ ಯಾರೂ ಕಿವಿಗೊಡುತ್ತಿಲ್ಲ. ಎರಡೂ ಕಡೆಯವರಿಗೆ ಬುದ್ಧಿವಾದ ಹೇಳಿದರೂ ಕೇಳುತ್ತಿಲ್ಲ. ಉಭಯ ಕಡೆಯವರು ಹೊರಗಿನವರಲ್ಲ. ಒಂದೇ ಕುಟುಂಬದವರು, ತೀರಾ ಹತ್ತಿರದ ಸಂಬಂಧಿಗಳೇ ಆಗಿದ್ದಾರೆ. ನಾವಾದರೂ ಎಷ್ಟು ಹೇಳಬಹುದು? ಎರಡೂ ಕಡೆಯವರು ಗ್ರಾಮದ ಹಿರಿಯರು ಹೇಳಿದ್ದನ್ನು ಕೇಳಿದರೆ ನಮ್ಮ ಮಾತಿಗೂ ಗೌರವವಿರುತ್ತದೆ ಎಂದು ಹೇಳುವ ಮೂಲಕ ಕೈಚೆಲ್ಲಿದ್ದಾರೆ.

ಸದ್ಯಕ್ಕೆ ಕುರುಡಿ ಗ್ರಾಮದ ಮನೆಗೆ ಮರದ ದಿಮ್ಮಿಗಳ ದಿಗ್ಬಂಧನ ಹಾಗೂ ರಾಮಘಟ್ಟದ ಹೊಲದ ರಸ್ತೆಗೆ ದೊಡ್ಡ ದೊಡ್ಡ ಕಲ್ಲು ಹಾಕಿರುವ ಪ್ರಕರಣ ಹೊರಗಿನವರಿಂದ ಅಲ್ಲ, ಮನೆಯವರೇ ಕುಳಿತು ಮಾತನಾಡಿ ಪರಿಹರಿಸಿ ಕೊಳ್ಳುವ ವಿಚಾರ. ಎರಡೂ ಕಡೆಯವರು ಕುಳಿತು ಸಮಸ್ಯೆ ಪರಿಹರಿಸಿಕೊಳ್ಳುವುದು ಸೂಕ್ತ ಎಂದು ಗ್ರಾಮಸ್ಥರು ಸಹ ಪ್ರತಿಕ್ರಿಯಿಸಿದ್ದಾರೆ.

PREV
Read more Articles on
click me!

Recommended Stories

ನೂತನ ಶಾದಿಮಹಲ್ ಲೋಕಾರ್ಪಣೆ, ಅಲ್ಪಸಂಖ್ಯಾರ ಶೈಕ್ಷಣಿಕ ಅಧ್ಯಕ್ಷಯ ಕೇಂದ್ರಕ್ಕೆ 1 ಎಕರೆ ಭೂಮಿ; ಶಾಸಕ ಡಾ. MC ಸುಧಾಕರ್
ಗುಂಡ್ಲುಪೇಟೆ: ಹಿರೀಕಾಟಿ ಕ್ವಾರಿ 4 ಲೀಸ್‌ಗೆ 12.95 ಕೋಟಿ ದಂಡ! ಅವಧಿಯೊಳಗೆ ಕಟ್ಟದಿದ್ದರೆ 5 ಪಟ್ಟು ದಂಡದ ಎಚ್ಚರಿಕೆ