ಲೋಕಕಲ್ಯಾಣಕ್ಕೆ ಶರಣ ಸಂಸ್ಕೃತಿ ಪರಂಪರೆ ಬಹುದೊಡ್ಡ ಕೊಡುಗೆ; ತರಳಬಾಳುಶ್ರೀ

By Kannadaprabha News  |  First Published Oct 9, 2022, 8:23 AM IST

ಲೋಕಕಲ್ಯಾಣಕ್ಕೆ ಶರಣ ಸಂಸ್ಕೃತಿ ಪರಂಪರೆಯು ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಹಲವು ಶರಣ ಶರಣೆಯರಿಗೆ ಜನ್ಮನೀಡಿದ ತಾಲೂಕು ಈ ದಿಸೆಯಲ್ಲಿ ಅತ್ಯಂತ ಪುಣ್ಯ ಸ್ಥಳವಾಗಿದೆ. ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.


ಶಿಕಾರಿಪುರ (ಅ.9) : ಲೋಕಕಲ್ಯಾಣಕ್ಕೆ ಶರಣ ಸಂಸ್ಕೃತಿ ಪರಂಪರೆಯು ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಹಲವು ಶರಣ ಶರಣೆಯರಿಗೆ ಜನ್ಮನೀಡಿದ ತಾಲೂಕು ಈ ದಿಸೆಯಲ್ಲಿ ಅತ್ಯಂತ ಪುಣ್ಯ ಸ್ಥಳವಾಗಿದೆ. ಶರಣರ ಆದರ್ಶ, ತತ್ವ-ಸಿದ್ಧಾಂತ ಪಾಲಿಸಿ ಶರಣ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿದಲ್ಲಿ ಮಾತ್ರ ಸಮಾಜ ಸದೃಢವಾಗುವುದು. ಆಗ ಸಮಸ್ತರು ನೆಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ಮಠ, ಶಿಷ್ಯರ ಸಂಬಂಧ ತಂದೆ ಮಕ್ಕಳಂತೆ - ತರಳಬಾಳು ಶ್ರೀ

Tap to resize

Latest Videos

ತಾಲೂಕಿನ ಕಾಳೇನಹಳ್ಳಿಯ ಶಿವಯೋಗಾಶ್ರಮದ ಶತಾಯುಷಿ, ಕಾಯಕಯೋಗಿ ಲಿಂ.ರುದ್ರಮುನಿ ಮಹಾಶಿವಯೋಗಿ ಅವರ 34ನೇ ವರ್ಷದ ಪುಣ್ಯಾರಾಧನೆ ಹಾಗೂ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವದಿಸಿದರು.

ತಾಲೂಕು ಹಲವು ಶಿವಶರಣ, ಶರಣೆಯರಿಗೆ ಜನ್ಮನೀಡಿದ ಪುಣ್ಯಭೂಮಿಯಾಗಿದೆ. ಇಲ್ಲಿ ಜನಿಸಿದ ಹಲವು ಶರಣ- ಶರಣೆಯರು ಕಲ್ಯಾಣಕ್ಕೆ ತೆರಳಿ ಜನರ ಕಲ್ಯಾಣಕ್ಕೆ ಕಾರಣಕರ್ತರಾಗಿದ್ದಾರೆ. ಕಾಳೇನಹಳ್ಳಿ ಶಿವಯೋಗಾಶ್ರಮದ ಲಿಂ.ರುದ್ರಮುನಿ ಶಿವಯೋಗಿಗಳು ಸಾತ್ವಿಕ ಶಕ್ತಿಯನ್ನು ಹೊಂದಿದ್ದು, ಅಪಾರವಾದ ತಪಃಶಕ್ತಿಯಿಂದ ಆಶ್ರಮದಲ್ಲಿನ ಗೋವುಗಳನ್ನು ಹುಲಿಗಳು ಬೇಟೆ ಆಡುವುದರಿಂದ ರಕ್ಷಿಸುವ ಮಹಿಮೆ ಹೊಂದಿದ್ದರು ಎಂದು ತಿಳಿಸಿದರು.

ಮಹಾತ್ಮರು ದಾರ್ಶನಿಕರು ತಮ್ಮ ವೈಯಕ್ತಿಕ ಬದುಕನ್ನು ಸಮಾಜಕ್ಕಾಗಿ ಸಮರ್ಪಿಸಿಕೊಂಡು ಸದಾಕಾಲ ಲೋಕಕಲ್ಯಾಣ ಬಯಸುತ್ತಾರೆ. ಈ ನಿಟ್ಟಿನಲ್ಲಿ ಲಿಂ.ಶ್ರೀಗಳು ಕಾಯಕ ನಿಷ್ಠರಾಗಿ ಕೃಷಿಯಲ್ಲಿ ತೊಡಗಿಸಿಕೊಂಡು ಸದಾಕಾಲ ಭಕ್ತಿಯಿಂದ ಲಿಂಗಪೂಜೆ ಮೂಲಕ ಅಪಾರವಾದ ತಪಃಶಕ್ತಿಯನ್ನು ಹೊಂದಿದ್ದರು. ಅವರ ಬದುಕಿನ ಆದರ್ಶ, ತಪೋಶಕ್ತಿ, ಮಹಿಮೆಯನ್ನು ಸಮಾಜಕ್ಕೆ ತಿಳಿಸುವುದು ಅಗತ್ಯ ಎಂದರು.

ಸಾತ್ವಿಕ ಶಕ್ತಿ ಎದುರು ಹಿಂಸಾಶಕ್ತಿ ಸೋಲುತ್ತದೆ ಎಂಬುದಕ್ಕೆ ಚರಿತ್ರೆ ಸಾಕ್ಷಿಯಾಗಿದೆ. ಸತ್ಯ ಇರುವಲ್ಲಿ ಸಂಪತ್ತು ಇರುವುದಿಲ್ಲ. ಸತ್ಯಕ್ಕೆ ಬದ್ಧರಾಗಿದ್ದಲ್ಲಿ ಸಂಪತ್ತು, ಯಶಸ್ಸು, ಕೀರ್ತಿ ಹುಡುಕಿ ಬರಲಿದೆ. ತಾಳ್ಮೆ, ಸಹನೆ ಜತೆಗೆ ಸಾತ್ವಿಕ ಬದುಕಿನಿಂದ ಯಶಸ್ಸು ಗಳಿಸಲು ಸಾಧ್ಯ. ಶ್ರದ್ಧಾ-ಭಕ್ತಿಯ ಮುಂದೆ ಲೌಕಿಕ ಆಕರ್ಷಣೆ ಶೂನ್ಯವಾಗಲಿದೆ. ಪ್ರವಚನ ಕಾರ್ಯಕ್ರಮದಿಂದ ಭಕ್ತವರ್ಗದಲ್ಲಿ ಆಧ್ಯಾತ್ಮಿಕ ಚಿಂತನೆ ಜಾಗೃತವಾಗಿ ಬುದ್ಧಿಶಕ್ತಿ ಪ್ರಖರವಾಗಲಿದೆ ಎಂದು ತಿಳಿಸಿದರು.

ಪುಣ್ಯಾರಾಧನೆ ಕಾರ್ಯಕ್ರಮದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಲಿಂಗೈಕ್ಯ ಶ್ರೀಗಳು ಕಾಯಕಯೋಗಿಯಾಗಿ ಕೃಷಿಯನ್ನು ಉಸಿರಾಗಿಸಿಕೊಂಡ ಮಹಾತ್ಮರಾಗಿದ್ದರು. ಸದಾ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಶ್ರೀಗಳು ಹಲವು ಪವಾಡದ ಮೂಲಕ ಭಕ್ತವರ್ಗದಲ್ಲಿ ಶಾಶ್ವತವಾಗಿದ್ದಾರೆ. ಭಕ್ತರ ಇಷ್ಟಾರ್ಥ ನೆರವೇರಿಸುತ್ತಿರುವ ಲಿಂ.ಶ್ರೀಗಳ ತತ್ವ-ಸಿದ್ಧಾಂತ ಅಪಾರ ತಪಃಶಕ್ತಿಯ ಸ್ಮರಿಸಬೇಕಾಗಿದೆ ಎಂದರ.

ಭಕ್ತರು ಇದುವರೆಗೂ ಗದ್ದುಗೆಗೆ ಹಣ್ಣು ಕಾಯಿ ಪ್ರಸಾದ ಮಾಡಿಸಿಕೊಂಡು ತೆರಳುತ್ತಿದ್ದರು. ಇದೀಗ ಮಠದ ಪೀಠಾಧ್ಯಕ್ಷರಾದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಅಪೇಕ್ಷೆಯಂತೆ ಸಂಪೂರ್ಣ ಕ್ಷೇತ್ರದಲ್ಲಿ ಬದಲಾವಣೆಯಾಗಿ ಈ ಶ್ರೇಷ್ಠ ನೆಲದ ಪಾವಿತ್ರತೆಯನ್ನು ನಾಡಿಗೆ ತಿಳಿಸುವ ಪುಣ್ಯದ ಕಾರ್ಯವಾಗುತ್ತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ನೇತೃತ್ವ ವಹಿಸಿದ್ದ ಕಾಳೇನಹಳ್ಳಿ ಶಿವಯೋಗಾಶ್ರಮದ ಪೀಠಾಧ್ಯಕ್ಷ ಡಾ.ಸಿದ್ಧಲಿಂಗ ಸ್ವಾಮೀಜಿ, ಮನುಷ್ಯನಿಗೆ ಸದ್ಗತಿ ದೊರೆಯಲು ಬಸವಾದಿ ಶರಣರ ಚಿಂತನೆ ತತ್ವ ಸಿದ್ಧಾಂತವನ್ನು ಪಾಲಿಸಬೇಕಾಗಿದೆ. ಎಲ್ಲ ಶರಣರ ಚಿಂತನೆಗಳು ವೈಜ್ಞಾನಿಕ ತಳಹದಿಯನ್ನು ಹೊಂದಿದೆ. ಬದುಕಿನಲ್ಲಿ ಅಳವಡಿಸಿಕೊಂಡಾಗ ನಿಶ್ಚಿತವಾಗಿ ಸಂತೃಪ್ತಿ ದೊರೆಯಲಿದೆ ಎಂದು ತಿಳಿಸಿದರು.

ಲೋಕಕಲ್ಯಾಣಕ್ಕಾಗಿ ಪಾದಯಾತ್ರೆ, 121ಅಡಿ ಉದ್ದದ ಧ್ವಜದೊಂದಿಗೆ ಹೋಗುವುದೇ ಸವಾಲು

ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಮುದಗಲ್‌ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಲಿಂ.ಶ್ರೀಗಳ ಬಗ್ಗೆ ಪ್ರವಚನ ನೀಡಿದರು. ವೇದಿಕೆಯಲ್ಲಿ ಕೂಡಲ ಗುರುನಂಜೇಶ್ವರ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕಡೇನಂದಿಹಳ್ಳಿ ಮಠದ ವೀರಭದ್ರ ಸ್ವಾಮೀಜಿ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ ಕೊಳಗಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಚನ್ನವೀರಪ್ಪ, ಗಾಯತ್ರಿದೇವಿ, ರುದ್ರೇಶ್‌, ರುದ್ರಪ್ಪಯ್ಯ, ವಸಂತಗೌಡ, ರಾಜಶೇಖರ್‌ ನಳ್ಳಿನಕೊಪ್ಪ, ಕೆ.ಎಚ್‌. ಪುಟ್ಟಸ್ವಾಮಿ, ಗಂಗೊಳ್ಳಿ ನಾಗರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

click me!