ರಂಭಾಪುರಿ ಶ್ರೀಗಳು ಯಾವಾಗಲೂ ಶಬ್ದಗಳ ಗದ್ದಲ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಆವಶ್ಯಕತೆ ಇಲ್ಲ. ಭಕ್ತರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ, ಸಿದ್ದಲಿಂಗ ಶ್ರೀಗಳೇ ಪೀಠಾಧಿಪತಿಗಳು: ಶಾಮನೂರು ಶಿವಶಂಕರಪ್ಪ
ಕೊಟ್ಟೂರು(ನ.25): ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಬಗ್ಗೆ ರಂಭಾಪುರಿ ಜಗದ್ಗುರುಗಳ ಹೇಳಿಕೆಯನ್ನು ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ ಎಂದು ‘ಅಖಿತ ಭಾರತ ವೀರಶೈವ ಮಹಾಸಭಾ’ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಮಂಗಳವಾರ ಉಜ್ಜಯಿನಿ ಜಗದ್ಗುರು ಮತ್ತು ಶ್ರೀಶೈಲ ಜಗದ್ಗುರುಗಳ ಸಮ್ಮುಖದ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶಾಮನೂರು ಶಿವಶಂಕರಪ್ಪ, ರಂಭಾಪುರಿ ಶ್ರೀಗಳು ಯಾವಾಗಲೂ ಶಬ್ದಗಳ ಗದ್ದಲ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಆವಶ್ಯಕತೆ ಇಲ್ಲ. ಭಕ್ತರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. 2011ರಲ್ಲಿ ಉಜ್ಜಯಿನಿ ಪೀಠಕ್ಕೆ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರನ್ನು ಪಟ್ಟಾಧಿಕಾರಿ ಮಾಡಿ, ಕಿರೀಟ ಧಾರಣೆ ಮಾಡಿದ ರಂಭಾಪುರಿ ಜಗದ್ಗುರುಗಳು ಇದೀಗ ತಮ್ಮ ನಿಲುವು ಬದಲಾಯಿಸಿಕೊಂಡಿರುವುದು ನಿಜಕ್ಕೂ ಖೇದಕರ ವಿಷಯ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಹಾಗೂ ಮುಂದೆಯೂ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರೇ ಪೀಠಾಧಿಪತಿಯಾಗಿ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಈಗಾಗಲೇ ರಂಭಾಪುರಿ ಶ್ರೀಗಳ ಹೇಳಿಕೆಗೆ ನಮ್ಮ ಸಹಮತ ಇಲ್ಲವೆಂದು ಸ್ಪಷ್ಟಪಡಿಸಿದ್ದೇವೆ. ಉಜ್ಜಯಿನಿ ಜಗದ್ಗುರು ಪೀಠದ ಬಗ್ಗೆ ಯಾರೇ ಗೊಂದಲ ಸೃಷ್ಟಿಮಾಡಿದರೂ ಅದನ್ನು ಯಾವುದೇ ಕಾರಣಕ್ಕೂ ಭಕ್ತರು ಒಪ್ಪಿಕೊಳ್ಳುವುದಿಲ್ಲ ಎಂದರು.
ಬಳ್ಳಾರಿ: ಉಜ್ಜೈನಿ ಶ್ರೀ ಬದಲಾವಣೆ ವಿಚಾರದಲ್ಲಿ ಜಗದ್ಗುರುಗಳ ಜಟಾಪಟಿ
ರಂಭಾಪುರಿ ಶ್ರೀಗಳು ಮತ್ತು ಇತರ ಪೀಠಗಳ ಜಗದ್ಗುರುಗಳ ಬಗ್ಗೆ ಉಂಟಾಗಿರುವ ಗೊಂದಲ ನಿವಾರಣೆ ಮಾಡಲು ಶಿವಾಚಾರ್ಯ ಬಳಗ ಪ್ರಯತ್ನ ನಡೆಸಿದೆ. ಅದರ ವಿವರವನ್ನು ಆನಂತರ ನೀಡಲಾಗುವುದು. ಸದ್ಯದ ಮಟ್ಟಿಗೆ ಸಂದರ್ಭ ಬಂದರೆ ಮಾತ್ರ ಪಂಚ ಪೀಠಾಧೀಶ್ವರರು ಒಂದೇ ವೇದಿಕೆಯಲ್ಲಿ ಸಮಾಗಮ ಆಗುತ್ತೇವೆಯೇ ಹೊರತು, ಅನ್ಯ ಕಾರಣದಿಂದಲ್ಲ. ಭಕ್ತರ ಇಷ್ಟನೆರವೇರಿಸಲು ಉಜ್ಜಯಿನಿ, ಶ್ರೀಶೈಲ, ಕಾಶಿ ಪೀಠದ ಜಗದ್ಗುರುಗಳು ಪಂಚ ಪೀಠಗಳ ಧಾರ್ಮಿಕ ಶಿಷ್ಟಾಚಾರದ ಅನುಗುಣವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದರು.
ಕೇದಾರ ಮತ್ತು ರಂಭಾಪುರಿ ಶ್ರೀಗಳು ಯಾವುದೇ ಪೀಠದಲ್ಲಿ ಹಸ್ತಕ್ಷೇಪ ಮಾಡಬಾರದು. ಪಂಚಪೀಠಗಳ ಜಗದ್ಗುರುಗಳು ಸ್ಥಾಪಿಸಿರುವ ಮಾನವ ಟ್ರಸ್ಟ್ ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿರುವ ಕೇದಾರ ಭೀಮಾಶಂಕರಲಿಂಗ ಶಿವಾಚಾರ್ಯ ಶ್ರೀಗಳು 11 ವರ್ಷಗಳಿಂದಲೂ ಯಾವುದೇ ಸಭೆ ಕರೆದಿಲ್ಲ. ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ರೂಪಿಸಿಲ್ಲ ಎಂದರಲ್ಲದೆ, ಪ್ರತಿ ಜಗದ್ಗುರುಗಳು ಮಾನವ ಟ್ರಸ್ಟ್‌ಗೆ ಮೂರು ವರ್ಷಗಳ ಅವಧಿಗೆ ಮಾತ್ರ ಅಧ್ಯಕ್ಷರಾಗಿರುತ್ತಾರೆ. ಹೀಗಾಗಿ ಕೇದಾರ ಜಗದ್ಗುರುಗಳು ತಾವೇ ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಶ್ರೀಶೈಲ ಜಗದ್ಗುರುಗಳು ಆಕ್ಷೇಪಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಜಿಪಂ ಸದಸ್ಯ ಎಂಎಂಜೆ ಹರ್ಷವರ್ಧನ, ದಾವಣಗೆರೆ ವರ್ತಕ ಅಥಣಿ ವೀರಣ್ಣ, ಉದ್ಯಮಿ ಅಣಬೇರು ರಾಜಣ್ಣ ಹಾಗೂ ನೂರಾರು ಸಂಖ್ಯೆಯ ಶಿವಾಚಾರ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.