ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಜಾನೆಯಿಂದಲೇ ಮುಂಗಾರಿನ ಅಬ್ಬರ ಕೊಂಚ ತಗ್ಗಿದ್ದರೂ ಸಹ ಅನಾಹುತಗಳು ಮಾತ್ರ ಮುಂದಿವರಿದಿವೆ. ಕಳೆದ 15 ದಿನಗಳ ನಂತರ ಚಿಕ್ಕಮಗಳೂರು ನಗರದಲ್ಲಿ ಆಗಾಗ ಬಿಸಿಲು ಕಾಣಿಸಿಕೊಂಡಿದ್ದಲ್ಲದೆ, ತಡ ರಾತ್ರಿವರೆಗೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇಂದು ಬೆಳಗಿನಿಂದ ಸಂಜೆವರೆಗೆ ಬಿರುಸು ಕಳೆದುಕೊಂಡಿತ್ತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.14): ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಜಾನೆಯಿಂದಲೇ ಮುಂಗಾರಿನ ಅಬ್ಬರ ಕೊಂಚ ತಗ್ಗಿದ್ದರೂ ಸಹ ಅನಾಹುತಗಳು ಮಾತ್ರ ಮುಂದಿವರಿದಿವೆ. ಕಳೆದ 15 ದಿನಗಳ ನಂತರ ಚಿಕ್ಕಮಗಳೂರು ನಗರದಲ್ಲಿ ಆಗಾಗ ಬಿಸಿಲು ಕಾಣಿಸಿಕೊಂಡಿದ್ದಲ್ಲದೆ, ತಡ ರಾತ್ರಿವರೆಗೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇಂದು ಬೆಳಗಿನಿಂದ ಸಂಜೆವರೆಗೆ ಬಿರುಸು ಕಳೆದುಕೊಂಡಿತ್ತು.
ಕುಸಿದ ಶಾಲಾ ಕೊಠಡಿ: ಚಿಕ್ಕಮಗಳೂರು ಜಿಲ್ಲೆ ಮಲೆನಾಡಿನ ಭಾಗವಾದ ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್‌ಆರ್‌ಪುರದಲ್ಲಿ ಸುರಿದ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಮೂಡಿಗೆರೆ ತಾಲ್ಲೂಕು ಬಣಕಲ್ ಸಮೀಪ ಸಬ್ಲಿ ಎಂಬಲ್ಲಿ ಸರ್ಕಾರಿ ಶಾಲೆಯ ಕೊಠಡಿಯೊಂದು ಕುಸಿದು ಬಿದ್ದಿದ್ದು, ಶಾಲೆಗೆ ರಜೆ ಘೊಷಿಸಿದ್ದ ಹಿನ್ನೆಲೆಯಲ್ಲಿ ಭಾರೀ ಜೀವಾಪಾಯ ತಪ್ಪಿದೆ. ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 60 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ನಾಲ್ಕು ಕೊಠಡಿಗಳಿವೆ. ಈ ಪೈಕಿ ಒಂದು ಕೊಠಡಿ ಸಂಪೂರ್ಣ ಕುಸಿದಿದೆ. ಇದರ ಪರಿಣಾಮ ಶಾಲೆಯ ಮೇಲ್ಚಾವಣಿ ಹಾಗೂ ಕಟ್ಟಡಕ್ಕೆ ಹಾನಿ ಉಂಟಾಗಿದೆ. ಚಿಕ್ಕಮಗಳೂರು ತಾಲ್ಲೂಕು ವಸ್ತಾರೆ ಹೋಬಳಿ ಹಕ್ಕಿಮಕ್ಕಿ ಗ್ರಾಮದಲ್ಲಿ ರಾತ್ರಿ ಸುರಿದ ತೀವ್ರ ಮಳೆಯಿಂದಾಗಿ ಬೆಳಗ್ಗೆ ಅರ್ಧ ಎಕರೆಯಷ್ಟು ಕಾಫಿ ತೋಟ ಕೊಚ್ಚಿ ಹೋಗಿ ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.
Chikkamagaluru: ಮಲೆನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ: ಶೃಂಗೇರಿಯಲ್ಲಿ ಶಾಲೆಗಳಿಗೆ ರಜೆ
ಕೋಡಿ ಬಿದ್ದ ಮದಗದ ಕೆರೆ: ಗಿರಿ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬಯಲು ಭಾಗದ ರೈತರ ಜೀವನಾಡಿ ಕೆರೆಗಳಲ್ಲೊಂದಾದ ಮದಗದ ಕೆರೆಯೂ ತುಂಬಿ ಕೋಡಿ ಬಿದ್ದಿದೆ. ಮೊನ್ನೆಯಷ್ಟೇ ಅಯ್ಯನ ಕೆರೆ ಸಹ ಕೋಡಿ ಬಿದ್ದಿದ್ದು ರೈತರ ಸಂತಸ ಇಮ್ಮಡಿಗೊಂಡಿದೆ. ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಎರಡೂ ಕೆರೆಗಳ ಬಳಿ ತೆರಳಿ ಭೋರ್ಗರೆಯುತ್ತ ಕೋಡಿಯಿಂದ ಧುಮ್ಮಿಕ್ಕುತ್ತಿರುವ ಜಲರಾಶಿಯನ್ನು ಕಣ್ತುಂಬಿಕೊಂಡು ಸೆಲ್ಫಿ ತೆಗೆದುಕೊಂಡರು.
ಅಯ್ಯನಕೆರೆ ವೀಕ್ಷಣೆ ನಿಷೇಧ: ಅಯ್ಯನ ಕೆರೆ ಕೋಡಿ ರುದ್ರ ರಮಣೀಯವಾಗಿ ಹರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕೆರೆ ವೀಕ್ಷಣೆಗೆ ತೆರಳದಂತೆ ಸಾರ್ವಜನಿಕರಿಗೆ ನಿಷೇಧ ಹೇರಿದೆ. ಪುಟ್ಟ ಮಕ್ಕಳೊಂದಿಗೆ ಕೆಲವರು ಕೆರೆಬಳಿ ತೆರಳಿ ಕೋಡಿ ಹತ್ತಿರ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಇನ್ನೂ ಕೆಲವರು ತೂಬಿನ ಮೇಲೆ ನಿಂತು ಮೋಜು ಮಾಡುತ್ತಿರುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕೆರೆ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕಿ ವೀಕ್ಷಣೆಗೆ ನಿಷೇಧ ಹೇರಲಾಗಿದೆ ಎಂದು ಬ್ಯಾನರ್ ಹಾಕಿ ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ.
ಚಾರ್ಮಾಡಿ ಘಾಟ್ ಭೂ ಕುಸಿತ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ಚಾರ್ಮಾಡಿ ಘಾಟ್‌ನ ಸೋಮನ ಕಾಡು ಸಮೀಪ ಲಘು ಭೂಕುಸಿತವಾಗಿದೆ. ಸದ್ಯ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ, ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು ಜೆಸಿಬಿ ಯಂತ್ರಗಳು ಮೂಲಕ ಮಣ್ಣು ತೆರವು ಕಾರ್ಯದಲ್ಲಿ ನಿರಂತರವಾಗಿ ಚಾರ್ಮಡಿ ಘಾಟ್‌ನಲ್ಲಿ ಕೆಲಸ ನಿರ್ವಹಿಸುತ್ತೇವೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಸಂಚಾರವೇ ದುಸ್ತರವಾಗಿದೆ.
ಮಲೆನಾಡಿನಲ್ಲೇ ಅಧಿಕ ಆಸ್ತಪ ಪಾಸ್ತಿಗೆ ಹಾನಿ: ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಹಾಗೂ ಮನೆಗಳ ಕುಡಿತ ದಿನೇ ದಿನೇ ಹಚ್ಚುತ್ತಿದೆ. ಕಳೆದ ಮಂಗಳವಾರದ ವರೆಗೆ ಹಾನಿಗೀಡಾದ ಮನೆಗಳ ಸಂಖ್ಯೆ 167 ಇದ್ದದ್ದು ಎರಡೇ ದಿನಗಳಲ್ಲಿ 199 ಕ್ಕೆ ಏರಿಕೆಯಾಗಿದೆ. ಇದರ ಜೊತೆಯಲ್ಲೇ ರಸ್ತೆ, ಸೇತುವೆ, ವಿದ್ಯುತ್ ಕಂಬಳು ಇನ್ನಿತರೆ ಸರ್ಕಾರಿ ಕಟ್ಟಡಗಳ ಹಾನಿ ಪ್ರಮಾಣವೂ ಹೆಚ್ಚಾಗಿದೆ. ಭಾಗಶಃ ಹಾಗೂ ಸಂಪೂರ್ಣ ಕುಸಿತಕ್ಕೊಳಗಾದ ಮನೆಗಳಿಗೆ 2022 ರ ಜುಲೈ 12 ರಂದು ರಾಜ್ಯ ಸರ್ಕಾರ ನೂತನವಾಗಿ ಹೊರಡಿಸಿರುವ ಆದೇಶದ ಪ್ರಕಾರ ಪರಿಹಾರವನ್ನು ವಿತರಿಸುತಂತೆ ಜಿಲ್ಲಾಧಿಕಾರಿಗಳು ಎಲ್ಲಾ ತಹಸೀಲ್ದಾರರುಗಳಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಕಳಸದಲ್ಲಿ ಪೂರ್ಣ ಪ್ರಮಾಣದಲ್ಲಿ ಕುಸಿತಕ್ಕೊಳಗಾದ 1 ಮನೆಗೆ 5 ಲಕ್ಷ ರೂ. ಪರಿಹಾರವನ್ನೂ ವಿತರಿಸಲಾಗಿದೆ. ಚಿಕ್ಕಮಗಳೂರು ಹಾಗೂ ಕಡೂರಿನಲ್ಲಿ ಮಳೆಯಿಂದಾಗಿ ತಲಾ 1 ಜಾನುವಾರು ಸಾವಿಗೀಡಾಗಿದ್ದು, ತಲಾ 30ಸಾವಿರ ರೂ.ನಂತೆ ಒಟ್ಟು 60 ಸಾವಿರ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ. ಕಳಸಾದ ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಮೃತಪಟ್ಟಿರುವ ವಿಜಯನಗರ ಜಿಲ್ಲೆಯ ಪ್ರಿಯಾಂಕ ಅವರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರವನ್ನು ವಿತರಿಸಲಾಗಿದೆ.
Chikkamagaluru: ಕಾಣೆಯಾಗಿದ್ದ ಬಸವನನ್ನು ಹುಡುಕಿ ದೇವಾಲಯಕ್ಕೆ ಒಪ್ಪಿಸಿದ ಪೊಲೀಸರು!
ಉಳಿದಂತೆ ಚಿಕ್ಕಮಗಳೂರಿನ ಉಂಡೇದಾಸರಹಳ್ಳಿ ಯಗಚಿ ಕಾಲುವೆಯಲ್ಲಿ ಕೊಚ್ಚಿಹೋಗಿರುವ ಸುರೇಶ್ ಮತ್ತು ತಾಲ್ಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕೊಚ್ಚಿಹೋಗಿರುವ ಶಾಲಾ ಬಾಲಕಿ ಸುಪ್ರಿತಾಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದೆ. ಮಳೆ ಇನ್ನೂ ಮುಂದುವರಿದಿರುವ ಜೊತೆಗೆ ಇಡೀ ಮಲೆನಾಡು ಧಾರಕಾರವಾಗಿ ಸತತವಾಗಿ ಸುರಿದ ಮಳೆಯಿಂದಾಗಿ ಸಂಪೂರ್ಣ ತೊಯ್ದಿರುವ ಹಿನ್ನೆಲೆಯಲ್ಲಿ ತೇವಾಂಶ ಹೆಚ್ಚಾಗಿದ್ದು ಮಳೆ ಬಿಡುವು ನೀಡಿದರೂ ಅನಾಹುತಗಳು ಮುಂದುವರಿಯುವ ಸಾಧ್ಯತೆ ಇದೆ.