ಫೆ.27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಇಂದು ಪ್ರಾಯೋಗಿಕವಾಗಿ ನಡೆಸಲಾದ ವಿಮಾನ ಹಾರಾಟ ಮತ್ತು ಲ್ಯಾಂಡಿಂಗ್ ಕಾರ್ಯವು ಯಶಸ್ವಿಯಾಗಿದೆ.
ಶಿವಮೊಗ್ಗ (ಫೆ.21): ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನವಾದ ಫೆ.27ರಂದು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಅದಕ್ಕಿಂತ ಒಂದು ವಾರ ಮುಂಚಿತವಾಗಿ ಹೊಸ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಮತ್ತು ಲ್ಯಾಂಡಿಂಗ್ ಕೂಡ ಯಶಸ್ವಿ ಆಗಿದೆ.
ಹಸಿರು ಹೊದಿಕೆಯಲ್ಲಿ ನಿರ್ಮಾಣವಾದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಘಾಟನಾ ಕಾರ್ಯಕ್ರಮದ ಮೊದಲು ಪ್ರಾಯೋಗಿಕವಾಗಿ ನಡೆಸಲಾದ ವಿಮಾನ ಹಾರಾಟ ಯಶಸ್ವಿ ಆಗಿದೆ. ವಿಮಾನ ನಿಲ್ದಾಣಕ್ಕೆ ದೇಶದ ಭದ್ರತಾಪಡೆಯ ಸಿಬ್ಬಂದಿಯನ್ನು ಹೊತ್ತಿದ್ದ ವಿಮಾನವು ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಹೀಗಾಗಿ, ಉದ್ಘಾಟನೆ ಕಾರ್ಯಕ್ರಮದ ಒಂದು ವಾರದ ಮುನ್ನವೇ ಪ್ರಾಯೋಗಿಕ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ. ಈ ವೇಳೆ ಯಾವುದೇ ಅವಘಡಗಳು ಹಾಗೂ ದುರಸ್ತಿ ಮಾಡುವ ಕಾರ್ಯಗಳು ಬಾಕಿ ಇದ್ದರೂ ಅವುಗಳನ್ನು ಸರಿಪಡಿಸಲಾಗುತ್ತದೆ. ಆದರೆ, ಭದ್ರತಾಪಡೆಯ ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ಈ ಬಗ್ಗೆ ಅಂತಿಮ ಸಿದ್ಧತೆಗಳು ಕೂಡ ನಡೆಯುತ್ತಿವೆ.
ಶಿವಮೊಗ್ಗ ಏರ್‌ಪೋರ್ಟ್‌ಲ್ಲಿ ಮೊದಲು ಇಳಿಯೋದು ಮೋದಿ ವಿಮಾನ...!
ಒಂದು ವಾರದ ಮೊದಲೇ ಕಣ್ಗಾವಲು: ಇನ್ನು ಶಿವಮೊಗ್ಗದ ಹೊಸ ವಿಮಾನ ನಿಲ್ದಾಣವನ್ನು ಫೆ.27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಅದಕ್ಕೂ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ಅಂಗವಾಗಿ ಭದ್ರತಾ ಪಡೆಯ ವಿಮಾನವು ಬಂದು ಪರಿಶೀಲನೆಯನ್ನು ನಡೆಸಲಾಗಿದೆ. ಇನ್ನು ವಿಮಾನ ಲ್ಯಾಂಡಿಂಗ್‌ಗೆ ಯಾವುದೇ ಸಮಸ್ಯೆಗಳು ಬಾರದಂತೆ ಕ್ರಮವನ್ನೂ ಕೈಗೊಳ್ಳಲಾಗಿದೆ. ಜೊತೆಗೆ, ದೇಶದ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಇಲ್ಲಿ ಠಿಕಾಣಿ ಹೂಡಿದ್ದು, ಯಾರೊಬ್ಬರೂ ಕೂಡ ಅನಧಿಕೃತವಾಗಿ ವಿಮಾನ ನಿಲ್ದಾಣವನ್ನು ಪ್ರವೇಶ ಮಾಡದಂತೆ ಕಣ್ಗಾವಲು ಇರಿಸಲಾಗಿದೆ. ಇನ್ನು ಜನಪ್ರತಿನಿಧಿಗಳು ಕೂಡ ವಿಮಾನ ನಿಲ್ದಾಣ ಭೇಟಿಗೆ ಆಗಮಿಸಿದರೆ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
2 ಲಕ್ಷ ಮಂದಿ ಸೇರುವ ನಿರೀಕ್ಷೆ: ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ವಿಮಾನದಲ್ಲಿ ಬಂದಿಳಿಯುವ ಮೂಲಕ ಫೆ.27ರಂದು ಉದ್ಘಾಟಿಸಲಿದ್ದಾರೆ. ಈ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಇಳಿಯಲಿರುವ ಮೊದಲ ವಿಮಾನ ಪ್ರಧಾನಿ ಮೋದಿ ಅವರದ್ದೇ ಆಗಿರಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದರು. ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಲು ಅವಕಾಶ ಇದ್ದು, 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಸೋಗಾನೆ ವಿಮಾನ ನಿಲ್ದಾಣ ಪ್ರದೇಶದಲ್ಲೇ ಸಮಾರಂಭ ನಡೆಯಲಿದೆ. ಅಲ್ಲೇ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳೂ ನಡೆಯಲಿದೆ ಎಂದು ಹೇಳಿದರು.
ಬಿಎಸ್‌ವೈಗೆ ಬರ್ತ್‌ಡೇ ಗಿಫ್ಟ್, ಫೆ.27ಕ್ಕೆ ಪ್ರಧಾನಿ ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ!
ವಿಮಾನ ನಿಲ್ದಾಣ ನಿರ್ಮಾಣದ ವಿವರ: ಶಿವಮೊಗ್ಗ ವಿಮಾನ ನಿಲ್ದಾಣವು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿದ್ದು ಸೋಗಾನೆಯಲ್ಲಿ ನಿರ್ಮಿಸಲಾಗಿದೆ. ಶಿವಮೊಗ್ಗದಿಂದ 8.8 ಕಿಮೀ ಮತ್ತು ಭದ್ರಾವತಿಯಿಂದ 8.2 ಕಿಮೀ ದೂರದಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್ಯ ಸರ್ಕಾರದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಅಡಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. 2020ರಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 450 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಶಂಕುಸ್ಥಾಪನೆ ನೆರವೇರಿದಿದ್ದರು. ಎರಡು ಹಂತಗಳಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ಸೌಲಭ್ಯಗಳು ಇರುವ ಶಿವಮೊಗ್ಗ ವಿಮಾನ ನಿಲ್ದಾಣವು ಉದ್ಘಾಟನೆಗೆ ಸಿದ್ಧಗೊಂಡಿದೆ.