ಕಾರವಾರ: ಮಳೆ ಇಳಿದರೂ ನಿಲ್ಲದ ಕಡಲ್ಕೊರೆತ

Kannadaprabha News   | Asianet News
Published : Jun 27, 2021, 11:10 AM IST
ಕಾರವಾರ: ಮಳೆ ಇಳಿದರೂ ನಿಲ್ಲದ ಕಡಲ್ಕೊರೆತ

ಸಾರಾಂಶ

* 1 ಮೀಟರ್‌ಗೂ ಹೆಚ್ಚಿನ ದೂರ ಮುಂದೆ ಬರುತ್ತಿರುವ ಅಲೆಗಳು * ಕರಾವಳಿ ಭಾಗದ ಸಮುದ್ರದ ಅಂಚಿನಲ್ಲಿ ಪ್ರತಿವರ್ಷ ಕಡಲ್ಕೊರೆತ ಸಾಮಾನ್ಯ * ಟಾಗೋರ ತೀರದಲ್ಲಿ ಅಂದಾಜು 250 ಮೀ. ಕಡಲ್ಕೊರೆತ 

ಕಾರವಾರ(ಜೂ.27): ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದ ಉದ್ದಕ್ಕೂ ಅರಬ್ಬಿ ಸಮುದ್ರದ ಅಲೆಗಳ ಅಬ್ಬರದಿಂದ ಕಡಲ್ಕೊರೆತ ಉಂಟಾಗುತ್ತಿದೆ.

ಕರಾವಳಿ ಭಾಗದ ಸಮುದ್ರದ ಅಂಚಿನಲ್ಲಿ ಪ್ರತಿವರ್ಷ ಕಡಲ್ಕೊರೆತ ಸಾಮಾನ್ಯವಾಗಿದ್ದರೂ ಈ ಬಾರಿ ಟಾಗೋರ ಕಡಲ ತೀರದಲ್ಲಿ ಹೆಚ್ಚು ಕೊರೆತ ಉಂಟಾಗುತ್ತಿದೆ. ಮಳೆ ಕಡಿಮೆಯಾದರೂ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಅಂದಾಜು ತೀರದತ್ತ 1 ಮೀಟರ್‌ಗೂ ಹೆಚ್ಚಿನ ದೂರ ಅಲೆಗಳು ಮುಂದೆ ಬರುತ್ತಿದೆ. ಅಲೆಗಳ ಭೋರ್ಗರೆತ ಭಯ ಹುಟ್ಟಿಸುತ್ತಿದೆ.

ಸಮುದ್ರದ ಅಂಚಿನಲ್ಲಿ ನಿರ್ಮಾಣ ಮಾಡಲಾದ ಖಾಸಗಿ ಹೋಟೆಲ್‌ ಆವಾರ ಗೋಡೆ, ತಂತಿ ಬೇಲಿ ಅಲೆಗಳ ರಭಸಕ್ಕೆ ಸಮುದ್ರ ಪಾಲಾಗಿದೆ. ಅಲೆಗಳ ಅಬ್ಬರ ಹೆಚ್ಚಾದಲ್ಲಿ ಮತ್ತಷ್ಟುಭೂ ಸವೆತ ಉಂಟಾಗುವ ಆತಂಕ ನಿರ್ಮಾಣವಾಗಿದೆ.
ಹನುಮಾನ್‌ ಮೂರ್ತಿ ಎದುರಿನ ತೀರದಲ್ಲಿ ನಿರ್ಮಾಣವಾದ ನೆರಳಿನ ಒಂದು ಗೋಪುರ ನೆಲಕಚ್ಚಿದೆ. ಮತ್ತೊಂದು ಅಲೆಗಳ ಹೊಡೆತಕ್ಕೆ ಸಮುದ್ರಕ್ಕೆ ಉರುಳುವ ಪರಿಸ್ಥಿತಿಯಲ್ಲಿದೆ. ಈ ಹಿಂದೆ ಕಡಲ ತೀರದಲ್ಲಿ ಇದ್ದ ಪುಟಾಣಿ ರೈಲಿನ ಕಂಬಿಗಳನ್ನು ಇಲ್ಲಿಗೆ ಇರಿಸಲಾಗಿದ್ದು, ಅಲೆಗಳ ಅಬ್ಬರ ಜೋರಾದರೆ ಇವು ಕೂಡಾ ಸಮುದ್ರದ ಒಡಲು ಸೇರಲಿವೆ.

ದಕ್ಷಿಣ ಕನ್ನಡದ ಬೀಚ್‌ನಲ್ಲಿ ತೀವ್ರ ಕಡಲ್ಕೊರೆತ : ಅಂಗಡಿ ಮುಂಗಟ್ಟುಗಳು ಸಮುದ್ರ ಪಾಲು

ಪಕ್ಕದ ರಾಕ್‌ ಗಾರ್ಡನ್‌ಗೆ ಸಮುದ್ರದ ನೀರು ನುಗ್ಗದಂತೆ ಕಲ್ಲು ಬಂಡೆಗಳನ್ನು ತೀರದಲ್ಲಿ ಹಾಕಲಾಗಿದ್ದರೂ ಕೆಲವು ಕಡೆ ತೂಫಾನ್‌ ಆದಾಗ ನೀರು ನುಗ್ಗಿದೆ. ದಿವೇಕರ ಕಾಲೇಜಿನ ಹಿಂಭಾಗ, ಸಾಗರ ದರ್ಶನದ ಹಿಂಭಾಗದಲ್ಲಿ ಕೂಡಾ ಕಡಲ್ಕೊರೆತ ಉಂಟಾಗಿದ್ದು, ಸಾಲುಮರದ ತಿಮ್ಮಕ್ಕ ವನದ ಹಿಂಭಾಗದ ತೀರದಲ್ಲಿ ಇದ್ದ ಗಿಡಮರಗಳು ಅಲೆಯ ರಭಸಕ್ಕೆ ಬುಡಸಮೇತ ಧರೆಗುರುಳಿದೆ. ಕಳೆದ ವರ್ಷ ಈ ವನದ ಬೇಲಿಗಳು ಸಮುದ್ರದ ಒಡಲು ಸೇರಿತ್ತು. ಆದರೆ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಕೊರೆತವಾಗಿದೆ.

ಟಾಗೋರ ತೀರದಲ್ಲಿ ಅಂದಾಜು 250 ಮೀ. ಕಡಲ್ಕೊರೆತ ಉಂಟಾಗಿದ್ದು, ಇದರ ಹೊರತಾಗಿ ಬಾವಳ, ಮುದುಗಾ, ದೇವಬಾಗ ಒಳಗೊಂಡು ಹಲವೆಡೆ ಕಡಲ್ಕೊರೆತ ಉಂಟಾಗುತ್ತಿದ್ದು, ಅಲೆ ತಡೆಗೋಡೆ ನಿರ್ಮಾಣ ಕಾರ್ಯ ಶೀಘ್ರದಲ್ಲಿ ನಡೆಯಬೇಕಿದೆ.

ಸ್ಥಳೀಯವಾಗಿ ಬಾಂಗುಡೆ ಬಳ್ಳಿ ಎಂದು ಕರೆಯುವ ಬಳ್ಳಿಗಳು ಇರುವ ಸ್ಥಳದಲ್ಲಿ ಹೆಚ್ಚಿನ ಕೊರೆತ ಉಂಟಾಗಿಲ್ಲ. ರಾಕ್‌ಗಾರ್ಡನ್‌ ಸಮೀಪ ಸಾಕಷ್ಟು ಪ್ರಮಾಣದಲ್ಲಿ ಈ ಬಳ್ಳಿ ಹಬ್ಬಿಕೊಂಡಿದ್ದು, ಈ ಭಾಗದಲ್ಲಿ ಕಡಲ್ಕೊರೆತ ಕಡಿಮೆ ಪ್ರಮಾಣದಲ್ಲಿ ಆಗಿದೆ. ಇದರ ಜತೆಗೆ ಸಮುದ್ರದ ನೀರು ಒಳ ನುಗ್ಗದಂತೆ ಕಲ್ಲುಗಳನ್ನು ಹಾಕಿರುವುದು ಕೂಡಾ ಕೊರೆತ ತಡೆಯಲು ಸಹಾಯವಾಗಿದೆ.
 

PREV
click me!

Recommended Stories

ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್