ವಾಮಾಚಾರ ಮಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿ ಗ್ರಾಮದ ಅನುದಾನಿತ ಶಾಲೆಯ ಶಿಕ್ಷಕ
ಅಥಣಿ(ನ.06): ರಾಜ್ಯ ಸರ್ಕಾರ ಮೌಢ್ಯತೆಯ ವಿರುದ್ಧ ಕಾನೂನು ಜಾರಿಗೊಳಿಸಿದರೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ವಾಮಾಚಾರದ ಪ್ರಕರಣಗಳು ನಡೆಯುತ್ತಲೇ ಇವೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಕಮರಿ ಗ್ರಾಮದ ಅನುದಾನಿತ ಶಾಲೆಯ ಶಿಕ್ಷಕನೋರ್ವ ವಾಮಾಚಾರ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಶಿಕ್ಷಕನನ್ನು ಅಮಾನತುಗೊಳಿಸಿ ಅನುದಾನಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಡಿಡಿಪಿಐಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಚಿತ್ರಕಲಾ ಶಿಕ್ಷಕ ಎ.ಎಸ್.ಗಡಾಲೋಟಿ ಈ ರೀತಿ ಕಾನೂನುಬಾಹಿರವಾಗಿ ವಾಮಾಚಾರ ಮಾಡುತ್ತಿದ್ದ. ಹೀಗಾಗಿ ಆತನನ್ನು ಅಮಾನತುಗೊಳಿಸಲಾಗಿದೆ. ಸ್ವಾಸ್ಥ ಸಮಾಜದ ನಿರ್ಮಾಣಕ್ಕಾಗಿ ಮತ್ತು ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಶಿಕ್ಷಕ ಸಮಾಜದಲ್ಲಿ ಮಕ್ಕಳ, ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುವ ವಾಮಾಚಾರ ಮಾಡುವುದು, ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ.
ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ: ಪ್ರಭಾಕರ ಕೋರೆ
ಈ ಬಗ್ಗೆ ಮಾಹಿತಿ ಪಡೆದ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶನಿವಾರ ಗ್ರಾಮದ ಅಮ್ಮಾಜೇಶ್ವರಿ ಪ್ರೌಢಶಾಲೆಗೆ ಭೇಟಿ ನೀಡಿ ಕೂಲಂಕಶವಾಗಿ ವಿಚಾರಣೆ ನಡೆಸಿದರು. ಅಲ್ಲಿನ ಚಿತ್ರಕಲಾ ಶಿಕ್ಷಕ ಎ.ಎಸ್.ಗಡಾಲೋಟಿ ಕಳೆದ ಹಲವು ವರ್ಷಗಳಿಂದ ಪ್ರತಿ ಭಾನುವಾರ ಮನುಷ್ಯರ ಮೇಲೆ ಬರುವ ದೆವ್ವ ಬಿಡಿಸುವುದು, ದೇವರು ಹೇಳುವುದು ಮತ್ತು ವಾಮಾಚಾರ ಕಾರ್ಯಗಳಲ್ಲಿ ತೊಡಗಿರುವುದಾಗಿ ಸ್ವತಃ ಆರೋಪಿತ ಶಿಕ್ಷಕನೇ ಒಪ್ಪಿಕೊಂಡಿದ್ದಾನೆ.
ಶಾಲೆಯ ಆಡಳಿತ ಮಂಡಳಿಯ ಸ್ಥಾನಿಕ ಅಧ್ಯಕ್ಷರು, ಜಿಪಂ ಮಾಜಿ ಸದಸ್ಯರು, ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ಸಮ್ಮಖದಲ್ಲಿ ಬಿಇಒ ವಿಚಾರಣೆ ಕೈಗೊಂಡಿದ್ದಾರೆ. ಈ ಶಿಕ್ಷಕ ಪ್ರತಿ ಭಾನುವಾರ ತಾನು ನಡೆಸುತ್ತಿರುವ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ. ದೆವ್ವ ಬಿಡಿಸುವುದು, ದೇವರ ಹೆಸರಲ್ಲಿ ವಾಮಾಚಾರ ಮಾಡುವುದು ಸೇರಿದಂತೆ ಕಾನೂನುಬಾಹಿರ ಚಟುವಟಿಕೆ ಮತ್ತು ಶಿಕ್ಷಣ ಇಲಾಖೆಯ ನಿಯಮಗಳಗೆ ವಿರುದ್ಧವಾಗಿದೆ ಎಂದು ಬಿಇಒ ಶಿಕ್ಷಕನಿಗೆ ಎಚ್ಚರಿಕೆ ನೀಡಿದ್ದಾರೆ.
Belagavi : ಕಾಂಗ್ರೆಸ್, ಬಿಜೆಪಿ ನಾಯಕರು ಶೀಘ್ರ ಜೆಡಿಎಸ್‌ಗೆ
ಶಿಕ್ಷಕ ವಾಘಲೋಟಿ ಶಿಕ್ಷಣ ಇಲಾಖೆಯ ಸೇವಾ ನಿಯಮಗಳಿಗೆ ವಿರುದ್ಧವಾಗಿ, 1983ರ ಶಿಕ್ಷಣ ಕಾಯ್ದೆಯ ವಿರುದ್ಧವಾಗಿ, ನೌಕರರ ನಡತೆ ನಿಯಮಗಳ ವಿರುದ್ಧವಾಗಿ ವರ್ತಿಸಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ಸದರಿ ಶಿಕ್ಷಕನ ವರ್ತನೆ ಮಕ್ಕಳು, ಸಮಾಜ ಮತ್ತು ಶಾಲಾ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುವುದರಿಂದ ಆರೋಪಿತ ಶಿಕ್ಷಕನ ನಡವಳಿಕೆ ಹಾಗೂ ವರ್ತನೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಆರೋಪಿತ ಶಿಕ್ಷಕ ಅಮ್ಮಾಜೇಶ್ವರಿ ಪ್ರೌಢಶಾಲೆಯಲ್ಲಿ ಅನುದಾನಿತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಚಿಕ್ಕೋಡಿ ಡಿಡಿಪಿಐ ಪತ್ರದಲ್ಲಿ ಶಿಕ್ಷಕನ ಮೇಲೆ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಆದ್ದರಿಂದ ಈ ಶಿಕ್ಷಕನ ಮೇಲೆ ಶಿಸ್ತುಕ್ರಮ ಜರುಗಿಸಿ ಕಚೇರಿಗೆ ವರದಿ ಸಲ್ಲಿಸಲು ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯೋಪಾಧ್ಯಾಯರಿಗೆ ಬಿಇಒ ಬಸವರಾಜ ತಳವಾರ ಆದೇಶಿಸಿದ್ದಾರೆ.