ಚಿಕ್ಕಮಗಳೂರು (ನ.6) : ಶಾಸಕ ಸಿ.ಟಿ.ರವಿ ಅವರು ಎರಡು ಬಾರಿ ಮಂತ್ರಿಯಾದರೂ ಕೂಡ ಜಿಲ್ಲೆಗೆ ಯಾವುದೇ ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ತಂದಿಲ್ಲ. ಕೇವಲ ಮಾತಿನಲ್ಲೇ ನಿಪುಣತೆ ತೋರುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಚುನಾವಣಾ ಉಸ್ತುವಾರಿ ಸ್ವಾಮಿಗೌಡ ಆರೋಪಿಸಿದರು. ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಸಿ.ಟಿ.ರವಿ ಅವರು ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಯಾದರೂ ಕೂಡ ಶಾಶ್ವತ ಯೋಜನೆಗಳನ್ನು ತಾರದೇ ಸುಳ್ಳು ಭರವಸೆಗಳನ್ನು ನೀಡುತ್ತ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಂಘಟಿತ ಹೋರಾಟ ನಡೆಸಿದಲ್ಲಿ ಕಾಡುಗೊಲ್ಲರಿಗೆ ಯಶಸ್ಸು: ಸಿ.ಟಿ.ರವಿ
ಹಿಂದುತ್ವದ ಹೆಸರಿನಲ್ಲಿ ಯುವಪೀಳಿಗೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಮುಖಂಡರು ಇದುವರೆಗೂ ರಾಜ್ಯದಲ್ಲಿ 113ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿಲ್ಲ. ‘ಆಪರೇಷನ್ ಕಮಲ’ ಹೆಸರಿನಲ್ಲಿ ರಾಜ್ಯದ ಅಧಿಕಾರ ಹಿಡಿಯುತ್ತಿದ್ದಾರೆಯೇ ಹೊರತು, ಸಂಪೂರ್ಣವಾಗಿ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಕರಗಡ ನೀರಾವರಿ ಯೋಜನೆಯನ್ನು ಎಚ್.ಡಿ. ದೇವೇಗೌಡ ಹಾಗೂ ಲಕ್ಷ್ಮಯ್ಯ ಅವರ ಸಮಯದಲ್ಲಿ ಅನುದಾನ ನೀಡಿದ್ದರು. ಆದರೆ, ಸ್ಥಳೀಯ ಶಾಸಕರು ಇದುವರೆಗೂ ನೀರಾವರಿ ಯೋಜನೆಯನ್ನು ಸ್ಥಳೀಯ ಮಟ್ಟದಲ್ಲಿ ಪೂರ್ಣಗೊಳಿಸದೇ ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಹುತೇಕರು ಎರಡು ರಾಷ್ಟ್ರೀಯ ಪಕ್ಷಗಳನ್ನು ತೊಲಗಿಸುವ ಮೂಲಕ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಮತ ನೀಡುವ ಮುನ್ಸೂಚನೆ ತೋರುತ್ತಿದೆ. ಇದನ್ನು ಮನಗಂಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅಧಿಕಾರದ ಸಮಯದಲ್ಲಿ ನೀಡಿದಂತಹ ಯೋಜನೆಗಳನ್ನು ಮನೆ ಮನೆಗಳಿಗೂ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದು ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು. ಆ ನಿಟ್ಟಿನಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಬದಿಗೊತ್ತಿ ಪಕ್ಷವನ್ನು ಸದೃಢಗೊಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಮಾತನಾಡಿ, ಕಾರ್ಯಕರ್ತರು ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳಬೇಕು. ಪ್ರತಿ ಹಳ್ಳಿಗಳಿಗೂ ತೆರಳಿ ಪಕ್ಷದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡಬೇಕು. ಆಗ ಮಾತ್ರ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಬಿ.ಎಂ.ತಿಮ್ಮಶೆಟ್ಟಿಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಬೇಕು. ಕಾರ್ಯಕರ್ತರು ಅತ್ಯಂತ ಹುರುಪಿನಿಂದ ಶ್ರಮ ವಹಿಸಿದ್ದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ನೇಮಕ ಮಾಡಬಹುದಾಗಿದೆ ಎಂದು ಹೇಳಿದರು.
ನೈತಿಕ ಮೌಲ್ಯಗಳ ಸಮಾಜ ನಿರ್ಮಾಣವಾಗಲಿ: ಸಿ.ಟಿ.ರವಿ
ಜಿಲ್ಲಾ ಚುನಾವಣಾ ಉಸ್ತುವಾರಿಯಾಗಿ ನೇಮಕವಾಗಿರುವ ಸ್ವಾಮಿಗೌಡ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಎಸ್‌ಸಿ-ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ದೇವಿಪ್ರಸಾದ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಿಸಾರ್ ಅಹ್ಮದ್, ಯುವ ಜನತಾದಳ ಅಧ್ಯಕ್ಷ ಪ್ರೇಮ್‌ಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ, ಮೂಡಿಗೆರೆ ಕ್ಷೇತ್ರ ಸುತಿ ಅಧ್ಯಕ್ಷ ಡಿ.ಜೆ.ಸುರೇಶ್, ದೇವರಾಜ್ ಅರಸ್ ಉಪಸ್ಥಿತರಿದ್ದರು.