
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.06): ಕೊಡಗು ವಿಶ್ವ ವಿದ್ಯಾಲಯವನ್ನು ಉಳಿಸುವುದು, ಕೊಡಗಿನಲ್ಲಿರುವ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅನುಭವಿಸುತ್ತಿರುವ ರೈತರಿಗೆ ದಾಖಲೆ ನೀಡುವುದು ಹಾಗೂ ಎಸ್ಸಿ, ಎಸ್ಟಿ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದನ್ನು ವಿರೋಧಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ. ಮಡಿಕೇರಿಯ ಖಾಸಗಿ ಹಳೇ ಬಸ್ ನಿಲ್ದಾಣದಲ್ಲಿ ಶಾಮಿಯಾನ ಹಾಕಿ ಕುಳಿತಿರುವ ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರು ನಾಳೆ ಮಧ್ಯಾಹ್ನ ಎರಡು ಗಂಟೆಯವರೆಗೆ ಧರಣಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ಖಂಡಿಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಪ್ರತಿಭಟನೆ ಆರಂಭಿಸಿರುವ ಬಿಜೆಪಿ ಇಂದು ರಾತ್ರಿಯೂ ಅಲ್ಲಿಯೇ ಧರಣಿ ಮುಂದುವರಿಸಲಿದೆ. ಪ್ರತಿಭಟನೆಯಲ್ಲಿ ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಸೇರಿದಂತೆ ಎಲ್ಲಾ ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರವಿ.ಕಾಳಪ್ಪ ವಿಶ್ವ ವಿದ್ಯಾಲಯವನ್ನು ನಮ್ಮ ಸರ್ಕಾರ ಆರಂಭಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಜಿದ್ದಿಗೆ ಬಿದ್ದಂತೆ ಮುಚ್ಚಲು ಹೊರಟಿತ್ತು. ಕೊಡಗು ವಿಶ್ವ ವಿದ್ಯಾಲಯದಿಂದಾಗಿ ಬಹು ದೊಡ್ಡ ಸಂಖ್ಯೆಯಲ್ಲಿ ಬಡವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಇದು ಬೇಕಾಗಿಲ್ಲ.
ಶ್ವಾನಗಳ ಜೀವ ಹಿಂಡುತ್ತಿದೆ ಪಾರೋ ವೈರಲ್ ಡಯೇರಿಯಾ ಸೋಂಕು: ಕೊಡಗಿನಲ್ಲಿ 50ಕ್ಕೂ ಹೆಚ್ಚು ನಾಯಿಗಳ ಸಾವು
ಆದ್ದರಿಂದಲೇ ಆರ್ಥಿಕ ಸಮಸ್ಯೆಯ ನೆಪವೊಡ್ಡಿ ವಿಶ್ವ ವಿದ್ಯಾಲಯವನ್ನೇ ಮುಚ್ಚಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಕೊಡಗಿನಲ್ಲಿ ತಲತಲಾರಗಳಿಂದ ಸಿ ಮತ್ತು ಡಿ ಭೂಮಿಯನ್ನು ಬಡವರು ಮನೆ ಕಟ್ಟಿಕೊಂಡೋ ಇಲ್ಲ ಸಣ್ಣ ಜಾಗದಲ್ಲಿ ಕೃಷಿ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಈಗ ಅದನ್ನು ಅರಣ್ಯ ಭೂಮಿ ಎಂದು ಘೋಷಿಸುವ ಮೂಲಕ ಈ ಬಡ ಜನರ ಬದುಕನ್ನು ಬೀದಿಗೆ ತರಲು ಹೊರಟಿದೆ. ಮತ್ತೊಂದೆಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಇದ್ದ ಅನುದಾನಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ದುರ್ಬಳಕೆ ಮಾಡುತ್ತಿದೆ.
ಇಂತಹ ಗಂಭೀರ ಸಮಸ್ಯೆಗಳನ್ನು ಇಟ್ಟು ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸುತ್ತಿದ್ದೇವೆ. ಕೊಡಗಿನ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕೊಡಗು ಬಂದ್ ಆಚರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ಕೊಡಗು ವಿಶ್ವ ವಿದ್ಯಾಲಯವನ್ನು ಸತತ ಪರಿಶ್ರಮದಿಂದ ಮಾಡಿದ್ದೇವೆ. ಈಗ ಕಾಂಗ್ರೆಸ್ ಸರ್ಕಾರ ಮುಚ್ಚಲು ಹೊರಟಿರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯನವರು ಬಹುಷ್ಯಃ 4 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸುತ್ತಾರೆ ಎನಿಸುತ್ತದೆ. ಅದರಲ್ಲಿ 9 ವಿಶ್ವ ವಿದ್ಯಾಲಯಗಳಿಗೆ 310 ಕೋಟಿ ಮೀಸಲಿಡಲು ಆಗುವುದಿಲ್ಲವೆ.
ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್
ನಿಮಗೆ ವಿಶ್ವ ವಿದ್ಯಾನಿಲಯಗಳನ್ನು ನಡೆಸಲು ಸಾಧ್ಯವಾಗದಿದ್ದರೆ ನಮಗೆ ಬಿಟ್ಟುಬಿಡಿ. ಸಿಎಸ್ಆರ್ ಅನುದಾನಗಳ ಮೂಲಕ ನಾವೇ ನಡೆಸುತ್ತೇವೆ ಎಂದರು. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ 80 ರಷ್ಟು ಬಡ ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳೇ ಇದ್ದಾರೆ. ವಿದ್ಯಾರ್ಥಿಗಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲು ಹೊರಟಿದ್ದೀರಾ. ವಿಶ್ವ ವಿದ್ಯಾಲಯವನ್ನು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮನೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.