
ರವಿ, ಏಷ್ಯಾನೆಟ್ ಸುವರ್ಣನ್ಯೂಸ್
ಗೌರಿಬಿದನೂರು (ಮಾ.6): ಹಣಕ್ಕಾಗಿ ಹೆತ್ತ ತಾಯಿಯ ಶವವನ್ನು ಹೂಳಲು ಬಿಡದ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಗೌರಿಬಿದನೂರು ತಾಲೂಕಿನ ಕಸಬಾ ಹೋಬಳಿ ದೊಡ್ಡಕುರುಗೋಡು ಗ್ರಾಮದಲ್ಲಿ ನಾಗರೀಕ ಸಮಾಜ ತಲೆತಗ್ಗಿಸುವಂಥ ಘಟನೆ ನಡೆದಿದೆ. 90 ವರ್ಷದ ಅನಂತಕ್ಕ ವಯೋಸಹಜ ಕಾಯಿಲೆಯಿಂದ ಕಡಗತ್ತೂರಿನಲ್ಲಿ ತನ್ನ ಮಗಳ ಮನೆಯಲ್ಲಿ ಮೃತಪಟ್ಟಿದ್ದರು. ಅನಂತಕ್ಕ ಅವರ ಕೊನೆಯ ಆಸೆಯಂತೆ ಅವರ ಶವವನ್ನು ದೊಡ್ಡ ಕುರುಗೋಡು ಗ್ರಾಮಕ್ಕೆ ತಂದು ಆಕೆಯ ಗಂಡನ ಸಮಾಧಿಯ ಪಕ್ಕದಲ್ಲಿ ಹೂಳಬೇಕು ಎಂದು ಅವರ ಮೊಮ್ಮಗಳಾದ ಶಾಂತಮ್ಮ ಹಾಗೂ ಇತರರು ಮೃತದೇಹದೊಂದಿಗೆ ಬಂದಿದ್ದರು. ಆದರೆ, ಅವರ ಗಂಡು ಮಕ್ಕಳು, 40 ಲಕ್ಷ ಹಣವನ್ನು ನೀಡಿದಲ್ಲಿ ಮಾತ್ರವೇ ಶವ ಹೂಳಲು ಬಿಡುವುದಾಗಿ ಅಮಾನವೀಯವಾಗಿ ವರ್ತಿಸಿದ್ದಾರೆ. ಇಲ್ಲದೇ ಇದ್ದಲ್ಲಿ ಮೃತದೇಹವನ್ನು ವಾಪಾಸ್ ತೆಗೆದುಕೊಂಡು ಹೋಗಿ ಎಂದು ಹೇಳಿದಾಗ ದಿಕ್ಕು ತೋಚದಂತಾಗಿ ಮೊಮ್ಮಗಳು ಶವವನ್ನು ಗ್ರಾಮಾಂತರ ಪೋಲಿಸ್ ಠಾಣೆಯ ಬಳಿ ತಂದು ಮಕ್ಕಳ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಈ ವೇಳೆ ಮಾತನಾಡಿದ ಮೊಮ್ಮಗಳು ಶಾಂತಮ್ಮ, 'ನಮ್ಮ ಅಜ್ಜಿಗೆ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದು, ಅಜ್ಜಿಯ ಹೆಸರಿನಲ್ಲಿ 2 ಎಕರೆ ಜಮೀನು ಇತ್ತು, ಆ ಜಮೀನು ಕೆಐಡಿಬಿಗೆ ಸೇರಿದ ಕಾರಣ ಜಮೀನಿಗೆ ಪರಿಹಾರವಾಗಿ 93.75 ಲಕ್ಷ ರೂಪಾಯಿ ಬಂದಿತ್ತು. ಈ ಹಣ ಅಜ್ಜಿಯ ಉಜ್ಜೀವನ್ ಬ್ಯಾಂಕ್ ಖಾತೆಗೆ ಬಂದಿತ್ತು. ಆದರೆ, ಈ ಹಣದಲ್ಲಿ ಹೆಣ್ಣು ಮಕ್ಕಳಿಗೆ ಭಾಗ ನೀಡದೇ ನಮ್ಮ ಮಾವಂದಿರು ಅವರಿಗೆ ಬೇಕಾದ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಬಳಿಕ ಕೋರ್ಟ್ ಮೆಟ್ಟಿಲೇರಿದಾಗ, ಹೆಣ್ಣುಮಕ್ಕಳ ಪಾಲಿಗೆ ಬಂದಿರುವ 40 ಲಕ್ಷ ಹಣ ನೀಡುವಂತೆ ತಿಳಿಸಲಾಗಿತ್ತು.ಇದೇ ವಿಚಾರವಾಗಿ ಗಂಡುಮಕ್ಕಳು ಹೆಣ್ಣು ಮಕ್ಕಳ ಮೇಲೆ ಮುನಿಸಿಕೊಂಡಿದ್ದರು. ಅಂದಿನಿಂದ ಅಜ್ಜಿ ಅನಂತಕ್ಕ ಕಡಗತ್ತೂರಿನ ಮಗಳ ಜೊತೆ ವಾಸವಿದ್ದರು.
ಆದರೆ, ಈಗ ಆ 40 ಲಕ್ಷ ಹಣವನ್ನು ವಾಪಾಸ್ ನೀಡಿದರೆ ಮಾತ್ರವೇ ಶವವನ್ನು ಇಲ್ಲಿ ಹೂಳಲು ಬಿಡುತ್ತೇವೆ ಇಲ್ಲವೆಂದರೆ ಗ್ರಾಮದವರಾಗಲೀ, ಪೋಲಿಸರಾಗಲೀ ಯಾರು ಬಂದರೂ ಬಿಡೋದಿಲ್ಲ ಎಂದಿದ್ದಾರೆ. ನಂತರ ನಾನು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಕೋರಿ ರಾತ್ರಿ ಇಡೀ ಇಲ್ಲಿಯೇ ಇದ್ದೆವು ಎಂದು ಹೇಳಿದ್ದಾರೆ.
ಬೆಂಗಳೂರು ಲೋಕಾಯುಕ್ತ ದಾಳಿ: ಡಿಪಿಎಆರ್ ಇಂಜಿನಿಯರ್ ಮನೆಯಲ್ಲಿ ಲಕ್ಷ ಲಕ್ಷ ಹಣ, ಚಿನ್ನಾಭರಣ ಪತ್ತೆ!
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹೇಶ್, ಮೃತ ಅನಂತಕ್ಕನ ಮಕ್ಕಳೊಂದಿಗೆ ಮಾತನಾಡಿ ಶವವನ್ನು ಹೂಳಲು ಅವಕಾಶ ಕಲ್ಪಿಸಿದ್ದಾರೆ. 'ದೊಡ್ಡ ಕುರುಗೋಡು ಮೂಲದ ಅನಂತಕ್ಕೆ ಎನ್ನುವವರು ತೀರಿಸಿಕೊಂಡಿದ್ದರು. ಅವರಿಗೆ ಇಬ್ಬರು ಗಂಡು ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದರು. ಗಂದು ಮಕ್ಕಳು ಶವ ಹೂಳಲು ಅವಕಾಶ ನೀಡುತ್ತಿರಲಿಲ್ಲ. ಹೆಣ್ಣು ಮಕ್ಕಳು ತಂದೆಯ ಸಮಾಧಿಯ ಪಕ್ಕದಲ್ಲೇ ತಾಯಿಯ ಶವ ಹೂಳಬೇಕು ಎಂದು ಆಸೆ ಪಟ್ಟಿದ್ದರು. ದಯವಿಟ್ಟು ಸಾರ್ವಜನಿಕರಲ್ಲಿ ಒಂದು ಮನವಿ. ಹಣ ಮುಖ್ಯವಲ್ಲ. ನಮಗೆ ಜನ್ಮ ನೀಡಿ ಸಾಕಿ, ಸಲುಹಿದ ತಂದೆ ತಾಯಿಗೆ ಗೌರವ ಕೊಡಿ, ಇಂತಹ ವಿಷಾದನೀಯ ಘಟನೆಗಳು ಆಗಬಾರದು, ಎಲ್ಲರೂ ಎಚ್ಚೆತ್ತು ಇಂತಹವರಿಗೆ ತಿಳುವಳಿಕೆ ನೀಡಿ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು' ಎಂದಿದ್ದಾರೆ.
ಪಿಯು ಕಾಲೇಜಿಗೆ ಹೋಗುವ ತಂಗಿಯನ್ನು 7 ತಿಂಗಳ ಗರ್ಭಿಣಿ ಮಾಡಿದ ಅಣ್ಣ!