
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಉತ್ತರ ಬೆಂಗಳೂರು ಹೊರವಲಯದ ಲಕ್ಷ್ಮೀಪುರ ಕ್ರಾಸ್ ಬಳಿಯ ಗೋದಾಮಿನಲ್ಲಿ ಸಂಗ್ರಹಿಸಡಲಾಗಿದ್ದ 830 ಕೆಜಿ ತೂಕದ ಮಾನವರ ಕೂದಲು ಕಳ್ಳತನ ಮಾಡಲಾಗಿದೆ. ಒಟ್ಟು 27 ಮೂಟೆಗಳಲ್ಲಿ ಕೂದಲು ಸಂಗ್ರಹಿಸಿಡಲಾಗಿತ್ತು. ಕಳ್ಳತನವಾಗಿರುವ ಕೂದಲಿನ ಮೌಲ್ಯ 1 ಕೋಟಿ ಆಗಿದೆ ಎಂದು ವರದಿಯಾಗಿದೆ. SUV ಕಾರ್‌ನಲ್ಲಿ ಬಂದ ಆರು ಜನರು ಕೂದಲು ಕಳ್ಳತನ ಮಾಡಿದ್ದು, ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉತ್ತರ ಬೆಂಗಳೂರಿನ ನಿವಾಸಿಯಾಗಿರುವ 73 ವರ್ಷದ ವೆಂಕಟಸ್ವಾಮಿ ಕೆ. ಎಂಬವರು ಕೂದಲು ವ್ಯಾಪಾರಿಯಾಗಿದ್ದು,ಫೆಬ್ರವರಿ 12ರಂದು ಹೆಬ್ಬಾಳದಿಂದ ಲಕ್ಷ್ಮೀಪುರದ ಗೋದಾಮಿನಲ್ಲಿ ಕೂದಲು ಸಂಗ್ರಹಿಸಿದ್ದರು. ಕಟ್ಟಡದ ನೆಲಮಹಡಿಯಲ್ಲಿರುವ ಗೋದಾಮಿನಲ್ಲಿ ಒಟ್ಟು 27 ಬೃಹತ್ ಮೂಟೆಗಳಲ್ಲಿ 830 ಕೆಜಿ ತೂಕದ ಕೂದಲು ಸಂಗ್ರಹಿಸಿಡಲಾಗಿತ್ತು. ಫೆಬ್ರವರಿ 28ರ ರಾತ್ರಿ ಎಸ್‌ಯುವಿ-ಮಹಿಂದ್ರ ಬುಲೆರೋದಲ್ಲಿ ಬಂದ ಆರು ಜನರು, ಕಬ್ಬಿಣದ ರಾಡ್ ಬಳಸಿ ಶಟರ್ ಮುರಿದಿದ್ದಾರೆ. ನಂತರ ಗೋದಾಮಿನಲ್ಲಿದ್ದ ಕೂದಲಿನ ಮೂಟೆಗಳನ್ನು ಎಸ್‌ಯುವಿಯೊಳಗೆ ತುಂಬಿಸಿಕೊಂಡು ಎಸ್ಕೇಪ್ ಆಗಿದ್ದಾರೆ.
ಕಳ್ಳರ ಗುಂಪು ಕೂದಲಿನ ಮೂಟೆಗಳನ್ನು ವಾಹನದಲ್ಲಿ ತುಂಬಿಸುತ್ತಿರೋದನ್ನು ಸ್ಥಳೀಯ ನಿವಾಸಿಯೊಬ್ಬರು ನೋಡಿದ್ದಾರೆ. ಕಳ್ಳರು ತೆಲಗು ಭಾಷೆಯಲ್ಲಿ ಮಾತನಾಡುತ್ತಿದ್ದರು. ಒಬ್ಬಿರಿಗೊಬ್ಬರು ಬ್ಯಾಗ್ ಹೇಗೆ ವಾಹದೊಳಗೆ ಹಾಕಬೇಕೆಂದು ಹೇಳಿಕೊಡುತ್ತಿದ್ದರು. ಆ ವ್ಯಕ್ತಿಗೆ ಅವರು ಕಳ್ಳರು ಎಂದು ಗೊತ್ತಾಗಿಲ್ಲ. ತಮ್ಮದೇ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುತ್ತಿರಬಹುದು ಅಂದುಕೊಂಡು ಸುಮ್ಮನಾಗಿದ್ದಾರೆ ಎಂದು ವೆಂಕಟಸ್ವಾಮಿ ಹೇಳಿದ್ದಾರೆ.
ದಾರಿಹೋಕರೊಬ್ಬರಿಗೆ ರಸ್ತೆಯಲ್ಲೆಲ್ಲಾ ಕೂದಲು ಬೀಳಿಸಿಕೊಂಡು ಹೋಗುತ್ತಿರೋದನ್ನು ಕಂಡು ಆರು ಜನರು ಕಳ್ಳರು ಎಂಬ ಅನುಮಾನ ಬಂದಿದೆ. ಕೂಡಲೇ ಸಹಾಯವಾಣಿ 112ಕ್ಕೆ ಕರೆ ಮಾಡಿ ಕಳ್ಳತನ ಮತ್ತು ಸ್ಥಳದ ಮಾಹಿತಿಯನ್ನು ನೀಡಿದ್ದಾರೆ. ಹೊಯ್ಸಳ ಪೊಲೀಸರು ಸ್ಥಳಕ್ಕಾಗಮಿಸಿ ಗಮನಿಸಿದಾಗ ಗೋದಾಮಿ ಶೆಟರ್ ಮುರಿದಿರೋದು ಕಂಡು ಬಂದಿದೆ. ಕೂಡಲೇ ಗೋದಾಮಿನ ಮಾಲೀಕರನ್ನು ಸಂಪರ್ಕಿಸಿ ಮಾಹಿತಿ ನೀಡಿ ಕರೆಸಿಕೊಂಡಿದ್ದಾರೆ.
ಗೋದಾಮಿನ ಮಾಲೀಕ ವೆಂಕಟಸ್ವಾಮಿ ಅವರಿಗೆ ಬೆಳಗಿನ ಜಾವ 1.50ಕ್ಕೆ ಕಳ್ಳತನದ ವಿಷಯ ತಿಳಿದಿದೆ. ನಾನು ಬಂದು ನೋಡಿದಾಗ ಗೋದಾಮಿನಲ್ಲಿದ್ದ 830 ಕೆಜಿ ಕೂದಲು ಕಳ್ಳತನವಾಗಿತ್ತು. ಕಳ್ಳತನವಾಗಿರುವ ಕೂದಲು 1 ಕೋಟಿ ಮೌಲ್ಯದಾಗಿತ್ತು ಎಂದು ವೆಂಕಟಸ್ವಾಮಿ ಹೇಳಿದ್ದಾರೆ. ವೆಂಕಟಸ್ವಾಮಿ ಅವರು ಸಂಗ್ರಹಿಸಿರುವ ಕೂದಲನ್ನು ಹೈದರಾಬಾದ್‌ಗೆ ರವಾನಿಸುತ್ತಿದ್ದರು. ಅಲ್ಲಿಂದ ಬರ್ಮಾ, ಚೀನಾ ಸೇರಿದಂತೆ ವಿದೇಶದಲ್ಲಿರುವ ಪ್ರತಿಷ್ಠಿತ ವಿಗ್ ಕಂಪನಿಗಳಿಗೆ ರಫ್ತು ಮಾಡಲಾಗುತ್ತಿತ್ತು. ವೆಂಕಟಸ್ವಾಮಿ ಕುಟುಂಬಸ್ಥರು ಆಂಧ್ರಪ್ರದೇಶ ಕಡಪಾ, ಶ್ರೀಕಾಕುಳಂಗೆ ತೆರಳಿ ಕೂದಲು ಖರೀದಿಸಿಕೊಂಡು ಬರುತ್ತಾರೆ. ನಂತರ ಅವುಗಳನ್ನು ಒಂದೆಡೆ ಸಂಗ್ರಹಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಾರೆ. ಗುಣಮಟ್ಟದ ಆಧಾರದ ಮೇಲೆ 1 ಕೆಜಿ ಕೂದಲಿನ ಬೆಲೆ 1 ರಿಂದ 2 ಸಾವಿರ ರೂಪಾಯಿ ಆಗಿರುತ್ತದೆ. ಕೆಲ ದಿನಗಳ ಹಿಂದೆ ವೆಂಕಟಸ್ವಾಮಿ ಕೂದಲು ಮಾರಾಟದ ಕುರಿತು ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ಅಕೌಂಟ್ನಲ್ಲಿ ಇದ್ದದ್ದು 17 ರೂ-ಹುಂಡಿಗೆ ಹಾಕಿದ್ದು 100 ಕೋಟಿ ರೂ! ಈ 'ತಿಮ್ಮಪ್ಪ'ನ ಪವಾಡ ನೋಡಿ..
ಗೋದಾಮಿನ ಅಕ್ಕಪಕ್ಕದ ಕಟ್ಟಡಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರು ಮತ್ತು ಎಸ್‌ಯುವಿ ವಾಹನ ಸೆರೆಯಾಗಿದೆ. ಆದ್ರೆ ವಾಹನ ನೋಂದಣಿ ಸಂಖ್ಯೆಯಾಗಿ ಸೆರೆಯಾಗಿಲ್ಲ. ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಸ್ಪಷ್ಟವಾಗಿಲ್ಲ. ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 305 (ವಾಸದ ಮನೆಯಲ್ಲಿ ಕಳ್ಳತನ, ಅಥವಾ ಸಾರಿಗೆ ಅಥವಾ ಪೂಜಾ ಸ್ಥಳ, ಇತ್ಯಾದಿ) ಮತ್ತು 331 (ಮನೆ-ಅತಿಕ್ರಮಣ ಅಥವಾ ಗೃಹಭಂಗಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಶೀಘ್ರದಲ್ಲಿಯೇ ಕಳ್ಳರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ₹1 ಕೋಟಿಗೆ ಒಂದೇ ತಾಸಲ್ಲೇ ₹1.20 ಕೋಟಿ ಕೊಡುವುದಾಗಿ ವಂಚನೆ, ದೂರು ಕೊಡಲು ಜತೆಯಲ್ಲೇ ಇದ್ದ! ಏನಿದು ಪ್ರಕರಣ?