ಜಂಗಮರಿಗೆ ಸಮಾಜದಲ್ಲಿ ಗುರುವಿನ ಸ್ಥಾನವಿದ್ದು, ವಿಶೇಷ ಶಕ್ತಿ- ಸಾಮರ್ಥ್ಯ ಹೊಂದಿರುವ ಜಂಗಮರು ಅನಾದಿ ಕಾಲದಿಂದ ನಿತ್ಯ ಪ್ರವಾಸದ ಮೂಲಕ ಜ್ಞಾನಾರ್ಜನೆ ಕಾರ್ಯದ ಜತೆಗೆ ಸಮಾಜವನ್ನು ಸರಿದಾರಿಗೆ ತರುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಮ್ಮೆ ವ್ಯಕ್ತಪಡಿಸಿದರು.
, ಶಿಕಾರಿಪುರ (ಜ.20) : ಜಂಗಮರಿಗೆ ಸಮಾಜದಲ್ಲಿ ಗುರುವಿನ ಸ್ಥಾನವಿದ್ದು, ವಿಶೇಷ ಶಕ್ತಿ- ಸಾಮರ್ಥ್ಯ ಹೊಂದಿರುವ ಜಂಗಮರು ಅನಾದಿ ಕಾಲದಿಂದ ನಿತ್ಯ ಪ್ರವಾಸದ ಮೂಲಕ ಜ್ಞಾನಾರ್ಜನೆ ಕಾರ್ಯದ ಜತೆಗೆ ಸಮಾಜವನ್ನು ಸರಿದಾರಿಗೆ ತರುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಮ್ಮೆ ವ್ಯಕ್ತಪಡಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಶ್ರೀ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಜನಕಲ್ಯಾಣ ಟ್ರಸ್ಟ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ತಾಲೂಕು ಬೇಡ ಜಂಗಮರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಜಂಗಮರಲ್ಲಿ ಹೆಚ್ಚಿನವರಿಗೆ ಉನ್ನತ ಶಿಕ್ಷಣವಿದ್ದು, ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ ಎಂಬ ಭಾವನೆ ಸಮಾಜದಲ್ಲಿ ದಟ್ಟವಾಗಿದೆ. ಪ್ರತಿಯೊಬ್ಬರೂ ಸಮಾಜದಲ್ಲಿ ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕಲು ಶಿಕ್ಷಣದ ಜತೆಗೆ ಸಂಸ್ಕಾರ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ಮುಸ್ಲಿಮರ ವಿಶ್ವಾಸಕ್ಕೆ ಪಡೆಯಲು ಮೋದಿ ಸಲಹೆ: ಯಡಿಯೂರಪ್ಪ
12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿನ ಪ್ರತಿಯೊಬ್ಬರೂ ಸಮಾನರು, ಮೇಲು -ಕೀಳು ಎಂಬುದಿಲ್ಲ ಎಂಬುದನ್ನು ಪ್ರತಿಪಾದಿಸಿದ್ದಾರೆ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಅವರ ತತ್ವದಡಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಭಾಗ್ಯಲಕ್ಷ್ಮೇ ಯೋಜನೆ, ರೈತರ ಹಾಲಿಗೆ ಪ್ರೋತ್ಸಾಹಧನ, ಉಚಿತ ಬೈಸಿಕಲ್, ರೈತರಿಗೆ ಪ್ರತ್ಯೇಕ ಬಜೆಟ್, ಮಠ- ಮಂದಿರಗಳಿಗೆ ವಿಶೇಷ ಅನುದಾನ ಸಹಿತ ಎಲ್ಲರಿಗೂ ಯೋಜನೆಯನ್ನು ರೂಪಿಸಲಾಗಿದೆ. ಇದೀಗ ದಾರಿಯಲ್ಲಿ ತೆರಳುವಾಗ ಜನತೆ ನಮ್ಮ ಯಡಿಯೂರಪ್ಪ ಎಂಬ ಅಭಿಮಾನ ಘೋಷಣೆ ಸಂತೃಪ್ತಿ ನೆಮ್ಮದಿಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜಂಗಮರಿಗೆ ದೇವರು ಭಕ್ತರನ್ನು ಒಂದುಗೂಡಿಸುವ ವಿಶೇಷ ಶಕ್ತಿಯಿದೆ. ಅರ್ಚಕರಾಗಿ ದೇವಸ್ಥಾನದಲ್ಲಿ ಹಾಗೂ ಅರಿಷಡ್ವರ್ಗದಿಂದ ದೂರವಾಗಿ ಸನ್ಯಾಸತ್ವದ ಪರಿಪಾಲನೆ ಮೂಲಕ ಸಮಾಜಕ್ಕೆ ದಾರಿತೋರುವ ಪುಣ್ಯ ಕಾರ್ಯದಲ್ಲಿ ತೊಡಗಿಸಿದ್ದಾರೆ. ಈಗಾಗಲೇ ಬಿ.ಡಿ.ಹಿರೇಮಠ್ ಸಮಾಜದ ಧ್ವನಿಯಾಗಿ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತಿದ್ದು, ಅವರಿಗೆ ಎಲ್ಲ ರೀತಿಯಲ್ಲಿ ಶಕ್ತಿ ನೀಡಿರುವುದಾಗಿ ತಿಳಿಸಿದರು.
ಜಂಗಮ ಸಮಾಜದ ರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ್ ಮಾತನಾಡಿ, ಶತಮಾನಗಳಿಂದ ನ್ಯಾಯ, ನೀತಿ, ಧರ್ಮ, ಅಕ್ಷರ ದಾಸೋಹ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಜಂಗಮ ಸಮಾಜಕ್ಕೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಮೀಸಲಾತಿ ಹಕ್ಕನ್ನು ಉದ್ದೇಶಪೂರ್ವಕವಾಗಿ ಹರಣ ಮಾಡುವ ಪ್ರಯತ್ನ ಹೆಚ್ಚಾಗಿದೆ. ಈ ದಿಸೆಯಲ್ಲಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲು ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ. ಉತ್ತರ ಕರ್ನಾಟಕಕ್ಕೆ ಕೆ.ಎ.ಟಿ., ಹೈಕೋರ್ಚ್ ಪೀಠ ಸಹಿತ ಎಲ್ಲ ಬೇಡಿಕೆಗೆ ಸ್ಪಂದಿಸಿದ ಯಡಿಯೂರಪ್ಪ ಅವರಿಂದ ಮಾತ್ರ ಸಮಾಜಕ್ಕೆ ನ್ಯಾಯ ದೊರಕಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ ವಹಿಸಿ ಮಾತನಾಡಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಪ್ರಭುಸ್ವಾಮಿ ಕಾನಳ್ಳಿ ಮಾತನಾಡಿದರು. ಸಾನ್ನಿಧ್ಯವನ್ನು ಕಾಳೇನಹಳ್ಳಿಯ ಶ್ರೀ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು, ತೊಗರ್ಸಿಯ ಮಹಾಂತ ದೇಶಿಕೇಂದ್ರ, ಚನ್ನವೀರ ದೇಶೀಕೇಂದ್ರ ಮಹಾಸ್ವಾಮೀಜಿ, ಕಡೇನಂದಿಹಳ್ಳಿಯ ರೇವಣಸಿದ್ದೇಶ್ವರ ಶಿವಾಚಾರ್ಯರು, ಸಾಲೂರಿನ ಗುರುಲಿಂಗ ಜಂಗಮ ಶಿವಾಚಾರ್ಯರು ವಹಿಸಿದ್ದರು.
ಬಿಎಸ್‌ವೈ ಜತೆ ಮೋದಿ ಮಾತುಕತೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೀತಾ ಚರ್ಚೆ..?
ವೇದಿಕೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ, ಎಂಎಡಿಬಿ ಅಧ್ಯಕ್ಷ ವಿಜಯೇಂದ್ರ, ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಯ್ಯ, ಕಾರ್ಯದರ್ಶಿ ಕೆ.ಆರ್. ಸೋಮನಾಥ್, ತಾಲೂಕು ಘಟಕದ ಚನ್ನಬಸಯ್ಯ, ರುದ್ರಪ್ಪಯ್ಯ, ಶಿವಾನಂದಯ್ಯ, ಶಿವಪ್ಪಯ್ಯ, ಕುಮಾರಸ್ವಾಮಿ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.