ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ಉಲ್ಲಂಘನೆ ಮಾಡಿ ವಾಹನ ಚಾಲನೆ ಮಾಡುತ್ತಿರುವವರ ವಿರುದ್ಧ ಮದ್ದೂರು ಪೊಲೀಸರು ಮೋಟಾರು ವಾಹನ ಕಾಯಿದೆಯಡಿ ಪ್ರಕರಣ ದಾಖಲು ಮಾಡಿ ಸ್ಥಳದಲ್ಲೇ ಒಂದು ಲಕ್ಷರು. ದಂಡ ವಸೂಲಿ ಮಾಡಿದ್ದಾರೆ.
ಮದ್ದೂರು (ಜು.17): ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ಉಲ್ಲಂಘನೆ ಮಾಡಿ ವಾಹನ ಚಾಲನೆ ಮಾಡುತ್ತಿರುವವರ ವಿರುದ್ಧ ಮದ್ದೂರು ಪೊಲೀಸರು ಮೋಟಾರು ವಾಹನ ಕಾಯಿದೆಯಡಿ ಪ್ರಕರಣ ದಾಖಲು ಮಾಡಿ ಸ್ಥಳದಲ್ಲೇ ಒಂದು ಲಕ್ಷರು. ದಂಡ ವಸೂಲಿ ಮಾಡಿದ್ದಾರೆ. ಮದ್ದೂರು ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಮಾರ್ಗದರ್ಶನದಲ್ಲಿ ಹೆದ್ದಾರಿಯಲ್ಲಿ ರಾಡಾರ್ ಗನ್ ಸಮೇತ ಕಾರ್ಯಾಚರಣೆಗಿಳಿದ ಸಂಚಾರಿ ಠಾಣೆ ಪಿಎಸ್‌ಐಗಳಾದ ಸಿದ್ದರಾಜು, ಆಯ್ಯನ್‌ಗೌಡ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಆರ್.ಬಿ.ಉಮೇಶ್ ಹಾಗೂ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಿತಿ ಮೀರಿದ ವೇಗದಲ್ಲಿ ಚಾಲನೆ ಮಾಡುತ್ತಿದ್ದ ನೂರಾರು ವಾಹನಗಳ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಸುಮಾರು ಒಂದು ಲಕ್ಷ ರು. ದಂಡ ವಿಧಿಸಿದ್ದಾರೆ.
ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಾವು-ನೋವು ಉಂಟಾದ ಹಿನ್ನೆಲೆಯಲ್ಲಿ ಅಪಘಾತ ತಡೆಯಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಮೀತಿ ಮೀರಿದ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವಾಹನ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಥಮ ಹಂತದಲ್ಲಿ ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವ ಚಾಲಕರಿಗೆ ಸ್ವಯಂ ಕಡಿವಾಣ ಹಾಕುವಂತೆ ಕರ ಪತ್ರದ ಮೂಲಕ ಜಾಗೃತಿ ಮೂಡಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಚಂದ್ರಯಾನದ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ವಿಜ್ಞಾನಿಗಳು
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ ಅತಿ ವೇಗವಾಗಿ ಸವಾರಿ ಮಾಡುವ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರಿ ಠಾಣೆ ಪೊಲೀಸರು, ಹತ್ತು ಮಂದಿ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಎಫ್‌ಐಆರ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪಾನಮತ್ತ ಚಾಲನೆ ಮಾಡುತ್ತಿದ್ದ 10 ಮಂದಿ ಚಾಲಕರಿಗೆ ತಲಾ ಒಂದು ಸಾವಿರದಂತೆ 10 ಸಾವಿರ ರು ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಅಪಘಾತ ತಡೆಗೆ ಕ್ರಮವಹಿಸಿ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಕ್ರಮವಹಿಸುವಂತೆ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಗುರುತಿಸಲಾಗಿರುವ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯಾಗಿ ರೋಡ್ ಸೈನ್‌ಗಳು, ಕ್ಯಾಮೆರಾಗಳನ್ನು ಅಳವಡಿಸಬೇಕು. ವೇಗವಾಗಿ ಚಲಿಸುವ ವಾಹನಗಳಿಗೆ ದಂಡ ವಿಧಿಸುವಂತೆ ತಿಳಿಸಿದರು.
ಕಟ್ಟುನಿಟ್ಟಾಗಿ ತೆರಿಗೆ ವಸೂಲಿ ಮಾಡಲು ಸೂಚನೆ: ಶಾಸಕಿ ರೂಪಕಲಾ
ಅಪಘಾತ ತಡೆಗೆ ಜಂಟಿ ಸಮೀಕ್ಷೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜನಿಯರ್‌ಗಳು ಸೇರಿ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸದಂತೆ ಕ್ರಮವಹಿಸಲು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸಲಹೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಸೇರಿದಂತೆ ಭಾರಿ ವಾಹನಗಳು ಬಲಭಾಗದಲ್ಲಿ ಸಂಚರಿಸುತ್ತಿದ್ದು ಅವುಗಳು ಎಡಭಾಗದ ಮೊದಲ ಮತ್ತು ಎರಡನೇ ಲೈನ್‌ನಲ್ಲಿ ಸಂಚರಿಸಲು ಕ್ರಮವಹಿಸಬೇಕು.