ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬ ಮಾತಿನಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಎದುರಾದಾಗ ತಮಿಳುನಾಡು ಹಾಗೂ ರೈತರ ಬೆಳೆಗಳಿಗೆ ನೀರು ಹರಿಸಲು ಪೇಚಿಗೆ ಸಿಲುಕುವ ಸರ್ಕಾರಗಳು ದಾಖಲೆ ಮಳೆಯಿಂದ ಯಥೇಚ್ಛ ನೀರು ಸಿಗುವ ಸಮಯದಲ್ಲಿ ಅದನ್ನು ಹಿಡಿದಿಡಲು ಪರ್ಯಾಯ ಯೋಜನೆಗಳನ್ನೇ ರೂಪಿಸದಿರುವುದು ವಿಪರ್ಯಾಸ.
ಮಂಡ್ಯ (ಜು.17): ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬ ಮಾತಿನಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಎದುರಾದಾಗ ತಮಿಳುನಾಡು ಹಾಗೂ ರೈತರ ಬೆಳೆಗಳಿಗೆ ನೀರು ಹರಿಸಲು ಪೇಚಿಗೆ ಸಿಲುಕುವ ಸರ್ಕಾರಗಳು ದಾಖಲೆ ಮಳೆಯಿಂದ ಯಥೇಚ್ಛ ನೀರು ಸಿಗುವ ಸಮಯದಲ್ಲಿ ಅದನ್ನು ಹಿಡಿದಿಡಲು ಪರ್ಯಾಯ ಯೋಜನೆಗಳನ್ನೇ ರೂಪಿಸದಿರುವುದು ವಿಪರ್ಯಾಸ.
ಕರ್ನಾಟಕ ಜಲಸಂಪನ್ಮೂಲ ಇಲಾಖೆ ಅಂಕಿ-ಅಂಶಗಳ ಪ್ರಕಾರ ಕಳೆದ 4 ವರ್ಷಗಳಲ್ಲಿ ತಮಿಳುನಾಡಿಗೆ 462 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದುಹೋಗಿದೆ. ಹೆಚ್ಚುವರಿಯಾಗಿ ಹರಿದುಹೋದ ನೀರನ್ನು ಉಳಿಸಿಕೊಳ್ಳುವ, ಸಂಕಷ್ಟಪರಿಸ್ಥಿತಿಯಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ಅನುಕೂಲಕರವಾದ ಯಾವೊಂದು ಮಾರ್ಗಗಳನ್ನು ಸರ್ಕಾರಗಳು ಕಂಡುಕೊಳ್ಳಲಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಾಣ ಹೊರತುಪಡಿಸಿ ನೀರು ಸಂಗ್ರಹಣೆಗೆ ಪರ್ಯಾಯ ದಾರಿಗಳೇ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಹಾಲು ದರ ಹೆಚ್ಚಳ, ಸಿಎಂ ತೀರ್ಮಾನವೇ ಅಂತಿಮ: ಸಚಿವ ಚಲುವರಾಯಸ್ವಾಮಿ
ಪ್ರಸಕ್ತ ವರ್ಷ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಸೇರಿದಂತೆ ಕಾವೇರಿ ಕಣಿವೆ ವ್ಯಾಪ್ತಿಯ ನಾಲ್ಕೂ ಜಲಾಶಯಗಳೂ ಬರಿದಾಗಿವೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಮನವಾಗಿಲ್ಲ. ಕುಡಿಯುವ ನೀರಿಗೆ ಸಾಲುವಷ್ಟುಮಾತ್ರ ನೀರು ಜಲಾಶಯಗಳಲ್ಲಿ ಸಂಗ್ರಹವಾಗಿದೆ. ಮಳೆ ಕೊರತೆ ಎದುರಾದಾಗಲೆಲ್ಲಾ ಅಧಿಕಾರದಲ್ಲಿರುವ ದೊರೆಗಳು ದೇವರಿಗೆ ಮೊರೆ ಹೋಗುವುದನ್ನು ಬಿಟ್ಟರೆ ದೇವರು ಯಥೇಚ್ಛವಾಗಿ ಮಳೆ ಸುರಿಸಿ ಸಮೃದ್ಧ ನೀರನ್ನು ಕೊಟ್ಟಾಗ ಅದನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಬದ್ಧತೆಯನ್ನು ಪ್ರದರ್ಶಿಸದಿರುವುದು ಆಡಳಿತ ನಡೆಸುವವರ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಹೆಚ್ಚುವರಿ ನೀರಿನ ಮೇಲೆ ಸಂಪೂರ್ಣ ಸ್ವಾತಂತ್ರ್ಯ: ಪ್ರತಿ ವರ್ಷ ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಿಂದ ಕರ್ನಾಟಕ 177.25 ಟಿಎಂಸಿ ಕಾವೇರಿ ನೀರನ್ನು ಮಾತ್ರ ಹರಿಸಬೇಕು. ಉಳಿದಂತೆ ಹೆಚ್ಚುವರಿಯಾಗಿ ಸಿಗುವ ನೀರನ್ನು ಬಳಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಹಕ್ಕು ಕರ್ನಾಟಕಕ್ಕಿದೆ. ಆ ನೀರನ್ನು ರೈತರ ಬೆಳೆಗಳಿಗೆ ಒದಗಿಸಲು ಅನುಕೂಲವಾಗುವಂತೆ, ತಮಿಳುನಾಡಿಗೆ ಹರಿಸಲು ಪೂರಕವಾಗುವಂತೆ ಯೋಜನೆಗಳು ಕಾರ್ಯಗತಗೊಳ್ಳುತ್ತಿಲ್ಲ.
ಹಾಲಿ ಕೆರೆಗಳಲ್ಲಿರುವ ಹೂಳನ್ನು ತೆಗೆದು ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ, ಹೊಸದಾಗಿ ಕೆರೆಗಳನ್ನು ನಿರ್ಮಿಸುವ, ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಿಗೆ ನೀರುಣಿಸುವ, ಕೆರೆಗಳಿಗೆ ನಾಲಾ ಸಂಪರ್ಕ ಜಾಲ ಕಲ್ಪಿಸುವ, ನೀರು ಸಂಗ್ರಹಣೆಗೆ ಪೂರಕವಾಗುವ ಸ್ಥಳಗಳಲ್ಲಿ ಮಿನಿ ಜಲಾಶಯಗಳನ್ನು ನಿರ್ಮಾಣ ಮಾಡಿಕೊಳ್ಳುವ ಮೂಲಕ ಹೆಚ್ಚುವರಿಯಾಗಿ ಸಿಗುವ ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಅವಕಾಶಗಳಿದ್ದರೂ ಸರ್ಕಾರಗಳು ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸದಿರುವುದರಿಂದ ಹೆಚ್ಚುವರಿ ನೀರೆಲ್ಲವೂ ವ್ಯರ್ಥವಾಗಿ ಹರಿದು ಸಮುದ್ರ ಸೇರುವಂತಾಗಿದೆ.
ನಾಲ್ಕು ವರ್ಷಗಳಲ್ಲಿ ಹರಿದ ನೀರು: ಸುಪ್ರೀಂಕೋರ್ಚ್ ಅಂತಿಮ ತೀರ್ಪಿನ ಪ್ರಕಾರ ಪ್ರತಿಯೊಂದು ಜಲ ವರ್ಷದಲ್ಲಿ ಕರ್ನಾಟಕವು ಬಿಳಿಗುಂಡ್ಲು ಜಲಮಾಪಕದ ಮೂಲಕ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಜಲ ವರ್ಷವು ಜೂನ್ ತಿಂಗಳಲ್ಲಿ ಪ್ರಾರಂಭವಾಗಿ ಮೇ ತಿಂಗಳಲ್ಲಿ ಅಂತ್ಯವಾಗುತ್ತದೆ. ಹೀಗಾಗಿ ಜೂನ್‌ನಿಂದ ಮೇ ತಿಂಗಳ ಅಂತ್ಯದೊಳಗೆ ಕರ್ನಾಟಕವು 177.25 ಟಿಎಂಸಿ ಕಾವೇರಿ ನೀರನ್ನು ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ಬಿಡಬೇಕು. ಆದರೆ, 2018-19ನೇ ಸಾಲಿನಿಂದ 2021-22ನೇ ಸಾಲಿನವರೆಗೆ ಕರ್ನಾಟಕದಿಂದ ತಮಿಳುನಾಡಿಗೆ 462 ಟಿಎಂಸಿ ನೀರು ಹರಿದುಹೋಗಿದೆ.
ಕರ್ನಾಟಕವು 2018-19ರಲ್ಲಿ ಒಟ್ಟಾರೆ 405 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಅಂದರೆ, 228 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿಸಿದೆ. 2019-20ನೇ ಸಾಲಿನಲ್ಲಿ 275 ಟಿಎಂಸಿ ಕಾವೇರಿ ನೀರು ತಮಿಳುನಾಡನ್ನು ಸೇರಿದೆ. ಆ ವರ್ಷವೂ ಹೆಚ್ಚುವರಿಯಾಗಿ 97 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. 2020-21ರಲ್ಲಿ 211 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ್ದು, 34 ಟಿಎಂಸಿ ಕಾವೇರಿ ನೀರು ಹೆಚ್ಚುವರಿಯಾಗಿ ತಮಿಳುನಾಡು ಪಾಲಾಗಿದೆ. 2021-22ರಲ್ಲಿ 281 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಅಂದರೆ, 103 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕರ್ನಾಟಕವು ತಮಿಳುನಾಡಿಗೆ ಹರಿಸಿದೆ.
ಕಾವೇರಿ ಕಣಿವೆಯಲ್ಲಿ ಕಳೆದ ವರ್ಷ ಡಿಸೆಂಬರ್‌ನಿಂದ ಜನವರಿವರೆಗೂ ಮಳೆ ಸುರಿದಿದ್ದರಿಂದ ಹೆಚ್ಚಿನ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. 2021ರ ಆಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಕರ್ನಾಟಕವು 145 ಟಿಎಂಸಿ ನೀರನ್ನು ಹರಿಸಿದೆ. ಅಕ್ಟೋಬರ್‌ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಕರ್ನಾಟಕವು ಸುಪ್ರೀಂಕೋರ್ಚ್ ತೀರ್ಪಿನ ಪ್ರಕಾರ 40 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಗಿತ್ತು. ಈ ಅವಧಿಯಲ್ಲಿ ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ನಾಲ್ಕೂ ಜಲಾಶಯಗಳಿಂದ 145 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ.
ಈಗ ಸಂಕಷ್ಟ ಪರಿಸ್ಥಿತಿ: ನಾಲ್ಕು ವರ್ಷ ವರುಣನ ಕೃಪೆಯಿಂದ ಜಲಾಶಯಗಳೆಲ್ಲವೂ ಅವಧಿಗೆ ಮುನ್ನವೇ ಭರ್ತಿಯಾಗುತ್ತಿದ್ದವು. ಜಲಾಶಯಗಳು ತುಂಬಿ ತುಳುಕುವ ಸಮಯದಲ್ಲಿ ಸರ್ಕಾರಗಳು, ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಮೈಮರೆತು ಕುಳಿತರು. ಪ್ರಸಕ್ತ ವರ್ಷ ಮಳೆ ಕೊರತೆಯಾಗಿದೆ. ಈಗ ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವೆಷ್ಟು, ಜಲಾಶಯದಲ್ಲಿ ಎಷ್ಟುನೀರಿದೆ, ಬೆಳೆಗಳಿಗೆ ಎಷ್ಟುನೀರು ಬೇಕು, ಕುಡಿಯಲು ಎಷ್ಟುನೀರನ್ನು ಮೀಸಲಿಡಬೇಕು. ಈಗ ಹರಿದುಬರುತ್ತಿರುವ ಒಳಹರಿವನ್ನು ಗಣನೆಗೆ ತೆಗೆದುಕೊಂಡರೆ ಜಲಾಶಯ ನೂರಡಿ ತಲುಪಲು ಎಷ್ಟುದಿನ ಬೇಕು.
ಭರ್ತಿಯಾಗುವ ಸಾಧ್ಯತೆಗಳಿವೆಯೇ, ಮುಂದೆ ಮಳೆಯಾಗುವ ಸಾಧ್ಯತೆಗಳೆಷ್ಟಿವೆ ಎಂದೆಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಕುಳಿತು ಲೆಕ್ಕ ಹಾಕುತ್ತಿದ್ದಾರೆ. ಇದೇ ಕೆಲಸವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮಳೆಗಾಲಕ್ಕೆ ಮುನ್ನ ಈ ಬಾರಿ ಎಷ್ಟುಮಳೆಯಾಗಬಹುದು, ಹೆಚ್ಚುವರಿಯಾಗಿ ನೀರು ಸಿಗುವ ಸಾಧ್ಯತೆಗಳಿದ್ದರೆ ಅವುಗಳನ್ನು ಎಲ್ಲೆಲ್ಲಿ ಸಂಗ್ರಹಿಸಬಹುದು. ಬಯಲುಸೀಮೆಗೆ ಅನುಕೂಲವಾಗುವಂತೆ ನೀರನ್ನು ಹರಿಸುವುದಕ್ಕೆ ಅವಕಾಶಗಳಿವೆಯೇ, ಮಿನಿ ಜಲಾಶಯಗಳನ್ನು ಎಲ್ಲೆಲ್ಲಿ ನಿರ್ಮಿಸಬಹುದು, ಅಲ್ಲಿ ಎಷ್ಟುನೀರು ಸಂಗ್ರಹಿಸಲು ಸಾಧ್ಯ. ಕೆರೆಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವುದಕ್ಕೆ ನೀರು ಒದಗಿಸುವುದಕ್ಕೆ ಯೋಜನೆಗಳ ಬಗ್ಗೆ ಯಾರೊಬ್ಬರೂ ಆಲೋಚನೆ ಮಾಡಲೇ ಇಲ್ಲ.
ಹೆದ್ದಾರಿ ಸಮಸ್ಯೆಗಳು ನೂರಾರು, ಪರಿಹಾರ ಶೂನ್ಯ: ಯೋಜನಾಧಿಕಾರಿಗೆ ಸಂಸದೆ ಸುಮಲತಾ ಕ್ಲಾಸ್
ಮೇಕೆದಾಟು ಅಣೆಕಟ್ಟು ಬಿಟ್ಟು ಪರ್ಯಾಯವಿಲ್ಲವೇ?: ನೀರು ಸಂಗ್ರಹಣೆಗೆ ಮೇಕೆದಾಟು ಅಣೆಕಟ್ಟು ಯೋಜನೆ ಹೊರತುಪಡಿಸಿ ಪರ್ಯಾಯ ಮಾರ್ಗಗಳೇ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ. ಉದ್ದೇಶಿತ ಮೇಕೆದಾಟು ಯೋಜನೆಯೂ ನ್ಯಾಯಾಲಯದ ಸಂಕೋಲೆಯೊಳಗೆ ಸಿಲುಕಿ ಒದ್ದಾಡುತ್ತಿದೆ. ಆ ಯೋಜನೆಗೆ ಪರ್ಯಾಯವಾಗಿ ಹೆಚ್ಚುವರಿ ನೀರು ಸಂಗ್ರಹಣೆಗೆ ಆಳುವ ಸರ್ಕಾರಗಳೇ ದಾರಿಗಳೇ ಕಾಣುತ್ತಿಲ್ಲ. ಪರ್ಯಾಯ ನೀರು ಸಂಗ್ರಹಣೆ ಮಾರ್ಗಗಳಿದ್ದರೂ ಯೋಜನೆ ರೂಪಿಸಿ ಜಾರಿಗೊಳಿಸುವ ಆಸಕ್ತಿ ಪ್ರದರ್ಶಿಸುತ್ತಿಲ್ಲದಿರುವುದು ಮಳೆ ಕೊರತೆ ಎದುರಾದ ಸಮಯದಲ್ಲಿ ಬವಣೆ ಎದುರಿಸುವುದು ಸರ್ವೇಸಾಮಾನ್ಯವಾಗಿದೆ.
ಹಲವು ಬಾರಿ ಬರಗಾಲ ಎದುರಿಸಿದರೂ ಎಚ್ಚೆತ್ತಿಲ್ಲ: 1999-2000 ರಿಂದ 2003-04 ಮತ್ತು 2013-14 ರಿಂದ 2016-17ರವರೆಗೆ ಎದುರಾದ ಬರಗಾಲ ಪರಿಸ್ಥಿತಿಯ ನಡುವೆಯೂ ಹೆಚ್ಚುವರಿ ನೀರು ಸಂಗ್ರಹಣೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ, ನೀರಿನ ಸಂಕಷ್ಟಪರಿಸ್ಥಿತಿ ಎದುರಿಸಿಯೂ ಎಚ್ಚೆತ್ತುಕೊಳ್ಳುವ ಕಿಂಚಿತ್ ಪ್ರಯತ್ನಗಳು ಸರ್ಕಾರಗಳಿಂದ ನಡೆಯದಿರುವುದು ದುರ್ದೈವ.