ಬೇಸಿಗೆ ದಾಹಕ್ಕೆ ನಿಂಬೆಹಣ್ಣಿನ ದರ ಏರಿಕೆ: 100 ರೂ ಇದ್ದ ಕೇಜಿ ನಿಂಬೆಹಣ್ಣಿಗೆ ಈಗ 300 ರೂ!

By Govindaraj S  |  First Published May 19, 2022, 2:01 AM IST

ಇದು ದುಬಾರಿ ದುನಿಯಾ. ಎಲ್ಲದರ ಬೆಲೆ ಗಗನಕ್ಕೇರಿದೆ. ಅದರಲ್ಲಿ ನಿಂಬೆ ಹಣ್ಣು ಕೂಡಾ ಸೇರಿದೆ. ಉತ್ತರ ಭಾರತದಲ್ಲಿ ನಿಂಬೆ ಬೆಲೆ ಕೆಜಿಗೆ 350 ರೂಗೆ ಏರಿ ಇತ್ತೀಚೆಗೆ ನಿಂಬೆ ಹಣ್ಣಿನ ದರೋಡೆ ನಡೆದಿದ್ದುಂಟು. 


ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಮೇ.19): ಇದು ದುಬಾರಿ (Costly) ದುನಿಯಾ. ಎಲ್ಲದರ ಬೆಲೆ ಗಗನಕ್ಕೇರಿದೆ. ಅದರಲ್ಲಿ ನಿಂಬೆ ಹಣ್ಣು (Lemon) ಕೂಡಾ ಸೇರಿದೆ. ಉತ್ತರ ಭಾರತದಲ್ಲಿ ನಿಂಬೆ ಬೆಲೆ ಕೆಜಿಗೆ 350 ರೂಗೆ ಏರಿ ಇತ್ತೀಚೆಗೆ ನಿಂಬೆ ಹಣ್ಣಿನ ದರೋಡೆ ನಡೆದಿದ್ದುಂಟು. ಈಗ ಉತ್ತರ ಭಾರತ (North India) ಮಾತ್ರವಲ್ಲ, ರಾಜ್ಯದಲ್ಲಿ ಕೂಡ ನಿಂಬೆ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಉತ್ತಮ ಗಾತ್ರದ ನಿಂಬೆ ಹಣ್ಣಿನ ದರ ಪ್ರತಿ ಕೆಜಿಗೆ 300 ರೂ ತಲುಪಿದೆ. ಆದರೆ ನಿಂಬೆ ಹಣ್ಣಿನ ಬೆಲೆ ಹೆಚ್ಚಾಗೋಕೆ ಕಾರಣ ಏನೂ ಅಂತೀರಾ ಈ ವರದಿ ನೋಡಿ.

Latest Videos

undefined

ನಿಂಬೆ ಹಣ್ಣಿನ ಬೆಲೆ ಅದ್ಯಾವ ಪರಿ ಹೆಚ್ಚಾಗಿದೆಯೆಂದರೆ ಬೇಸಿಗೆ ಆದ್ರೂ ನಿಂಬೆಯ ಜ್ಯೂಸ್ ಮಾತ್ರ ಕುಡಿಯೋದು ಬೇಡ ಅಂತಿದ್ದಾರೆ ಜನರು. ನಿಂಬೆ ಹಾಕಿ ಮಾಡುವ ರೆಸಿಪಿಗಳನ್ನಂತೂ ಸ್ಪಲ್ಪ ದಿನಕ್ಕೆ ಮರೆತೇ ಬಿಡ್ಬೇಕೇನೂ ಅಂತಿದ್ದಾರೆ ಹಲವರು. ಬಿಸಿಲ ಬೇಗೆಯಲ್ಲಿ ದಾಹ ತೀರಿಸುವ ನಿಂಬೆ ಹಣ್ಣು, ಬೆಲೆ ಏರಿಕೆಯಿಂದಾಗಿ ಗ್ರಾಹಕರಿಗೆ ದುಬಾರಿ ಎನಿಸಿದೆ. ಬೇಸಿಗೆ ಸಮಯದಲ್ಲಿ ನಿಂಬೆ ಹಣ್ಣಿನ ಬೆಲೆ ಏರಿಕೆ ಸಹಜ. ಆದರೆ ಈ ಬಾರಿ ನಿಂಬೆಹಣ್ಣಿನ ಬೆಲೆ ಏರಿಕೆಯಾಗಿ ಗ್ರಾಹಕರನ್ನ ಮತ್ತು ಮಾಂಸಾಹಾರಿ ಹೋಟೆಲ್‌ನವರನ್ನ ಕಂಗಾಲು ಮಾಡಿದೆ. ನಿಂಬೆ ಹಣ್ಣಿನ ಬೆಲೆ ಪ್ರತಿ ಕೆಜಿಗೆ 300 ರೂ.ನಷ್ಟು ಏರಿಕೆಯಾಗಿದೆ. 

Kolar: ಕೆರೆಗಳ ನಾಡಿಗೆ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆಯ ಭಾಗ್ಯ!

ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಹಿನ್ನಲೆಯಲ್ಲಿ ಬೆಲೆ ಹೆಚ್ಚಳವಾಗಿದೆ ಎನ್ನಲಾಗಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಕೋಲಾರಕ್ಕೆ ನಿಂಬೆ ಹಣ್ಣು ಪೂರೈಕೆಯಾಗುತ್ತಿದೆ. ಜೊತೆಗೆ ಸ್ಥಳೀಯವಾಗಿ ನಿಂಬೆಹಣ್ಣು ಬೆಳೆಯಲಾಗುತ್ತಿದೆ. ಚಿಲ್ಲರೆ ಮಾರಾಟದಲ್ಲಿ ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ 7 ರಿಂದ 10 ರುಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ. ರಾಜ್ಯಾದ್ಯಾಂತ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ನಿಂಬೆ ಹಣ್ಣಿನ ಫಸಲಿನಲ್ಲಿ ಶೇಕಡ 40ರಷ್ಟು ಕುಸಿತವಾಗಿದೆ. ಇದು ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣವೆನ್ನಲಾಗಿದೆ. ರಾಜ್ಯದಲ್ಲಿ ಸುಮಾರು 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯುವ ರೈತರಿದ್ದಾರೆ. 

ಆದರೆ, ಹೂವು ಬಿಡುವ ತಿಂಗಳಾದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದಿದೆ. ಇದೇ ಕಾರಣದಿಂದ ನಿಂಬೆ ಹೂವು ಶೇಕಡ 50ರಷು ಉದುರಿ ಹೋಗಿದೆ. ಅಲ್ಲದೆ, 100 ಹಣ್ಣು ಸಿಗುವ ಮರದಲ್ಲಿ ಕೇವಲ 50 ರಿಂದ 60 ಹಣ್ಣು ಮಾತ್ರ ಸಿಗುತ್ತಿದೆ. ಇದು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ ಅಂತಾರೆ ಬೆಳೆಗಾರರು. ಬೇಸಿಗೆ ಕಾಲಿಟ್ಟೊಡನೆ ನಿಂಬೆ ಹಣ್ಣಿನ ಬೆಲೆ ಏರುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಕುಸಿತದ ಪರಿಣಾಮ ಬೆಳೆಗಾರರ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆಯಾಗಿದೆ. ಬೇಸಿಗೆಯಲ್ಲಿ ನಾಲ್ಕು ಕಾಸು ಕಾಣಲು ಸಹಕಾರಿಯಾಗಿದ್ದ ನಿಂಬೆಯನ್ನು ನಂಬಿಕೊಡ ಬೆಳೆಗಾರರಿಗೆ ತೊಂದರೆಯಾಗಿದ್ದರೂ, ಇದ್ದ ಕಡಿಮೆ ಬೆಳೆಯೂ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. 

ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ರಾಜ್ಯ ಸರ್ಕಾರದ ಕುಮ್ಮಕ್ಕು!

ಕೋಲಾರ ಜಿಲ್ಲೆಯಾದ್ಯಂತ ಬಿಸಿಲಿನ ಗರಿಷ್ಠ ಮಟ್ಟ ತಲುಪುತ್ತಿದ್ದಂತೆ ಇಲ್ಲಿನ ನಿಂಬೆ ಹಣ್ಣುಗಳ ದರವೂ ಅದೇ ಗತಿಯಲ್ಲಿ ಏರುತ್ತ ಗ್ರಾಹಕರ ಬೆವರಿಳಿಸುತ್ತಿದೆ.ಕಳೆದ ತಿಂಗಳಲ್ಲಿ 10 ರೂ ಕೊಟ್ಟರೆ ಆರೇಳು ನಿಂಬೆ ಹಣ್ಣುಗಳನ್ನ ಕೊಡುತ್ತಿದ್ದ ವ್ಯಾಪಾರಸ್ಥರು, ಈಗ ಅದೇ 10 ರೂಪಾಯಿಗೆ ಕೇವಲ 1 ನಿಂಬೆ ಹಣ್ಣು ಕೊಡ್ತಾರೆ. ಇದು ಬೇಸಿಗೆ ಕಾಲ ಅದರಲ್ಲೂ ಈ ವರ್ಷ ಬಿಸಿಲು ಹೆಚ್ಚಿದ್ದು, ಮಾಲು ಕಡಿಮೆ ಇದೆ. 10 ರೂಪಾಯಿಗೆ ಒಂದೇ ಕೊಡಬೇಕು. ಇರಲಿ ಅಂತ ಎರಡು ಕೊಟ್ಟಿದ್ದೇವೆ ಅಂತಾ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ, ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣಿನ ಬೆಲೆ ಏರಿಕೆಯಾಗುತ್ತೆ. ಆದರೆ ಈ ಬಾರಿ ಮಳೆಗಾಲದಲ್ಲಿ ಅತಿವೃಷ್ಠಿ, ಬೆಳೆ ನಾಶದಿಂದ ಬೇಸಿಗೆಯಲ್ಲಿ ದುಪ್ಪಟ್ಟು ಬೆಲೆ ಏರಿಕೆಯಾಗಿದೆ. ನಿಂಬೆ ಹಣ್ಣಿನ ಬಳಕೆ ಕೇವಲ ಅಡುಗೆ ಮನೆ ಅಥ್ವಾ ಪಾನೀಯಕ್ಕೆ ಸೀಮಿತವಾಗಿಲ್ಲ. ಈ ಹಣ್ಣಿನಲ್ಲಿ ಜೀರ್ಣಶಕ್ತಿ ಇರುವುದರಿಂದ ಬೇಸಿಗೆಯನ್ನ ನೀಗಿಸಿಕೊಳ್ಳಲು ಹೆಚ್ಚಿನ ಬೆಲೆ ತೆತ್ತು ಮಾರುಕಟ್ಟೆಯಲ್ಲಿ ನಿಂಬು ಖರೀದಿಸುವಂತಾಗಿದೆ.

click me!