‘ರಾಜ್ಯದ ಸರಣಿ ರಾಜೀನಾಮೆ ಹಿಂದೆ ಸಾವಿರಾರು ಕೋಟಿ ಹಗರಣ’

By Kannadaprabha NewsFirst Published Aug 17, 2019, 10:26 AM IST
Highlights

ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರುವುದು ಹಾಗೂ ರಾಜೀನಾಮೆ ನೀಡುವುದು ದೇಶದ್ರೋಹ ಎನಿಸಿಕೊಳ್ಳುತ್ತದೆ. ಇದು ಸರ್ವಾಧಿಕಾರ ಸ್ಥಾಪಿಸುವ ಹುನ್ನಾರ ಎಂದು ನಿವೃತ್ತ ನ್ಯಾಯಮೂರ್ತಿಯೋರ್ವರು ಹೇಳಿದ್ದಾರೆ. 

ಬೆಂಗಳೂರು (ಆ.17):  ರಾಜ್ಯದಲ್ಲಿ ನಡೆದ ಶಾಸಕರ ಸರಣಿ ರಾಜೀನಾಮೆ ಹಿಂದೆ ಸಾವಿರಾರು ಕೋಟಿ ರು.ಗಳ ಹಗರಣದ ವ್ಯವಹಾರ ನಡೆದಿದೆ. ದೇಶದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ನೋಡಿಕೊಂಡು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ಸ್ಥಾಪಿಸುವ ಬಹುದೊಡ್ಡ ಹುನ್ನಾರದ ಭಾಗವಾಗಿ ರಾಜ್ಯದಲ್ಲಿ ಶಾಸಕರ ರಾಜೀನಾಮೆ ಪ್ರಹಸನ ನಡೆಯಿತು ಎಂದು ಹೈಕೋರ್ಟ್‌ ನಿವೃತ್ತ ನ್ಯಾ.ನಾಗಮೋಹನದಾಸ್‌ ಅಭಿಪ್ರಾಯಪಟ್ಟರು.

ಶುಕ್ರವಾರ ಅಖಿಲ ಭಾರತ ವಕೀಲರ ಸಂಘ(ಎಐಎಲ್‌ಯು) ಜಿಲ್ಲಾ ಸಮಿತಿ ಕೆ.ಆರ್‌.ವೃತ್ತದ ಸಮೀಪವಿರುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ಅಲೂಮ್ನಿ ಯುವಿಇಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಶಾಸಕರ ರಾಜೀನಾಮೆ ಹಕ್ಕು ಮತ್ತು ಪಕ್ಷಾಂತರ ನಿಷೇಧ ಕಾಯ್ದೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕೈ ನಾಯಕರಿಗೆ ಎದುರಾಗಿದೆ ತೀವ್ರ ಸಂಕಷ್ಟ?

ದೇಶಾದ್ಯಂತ ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ಮತ್ತು ಪಕ್ಷಾಂತರ ಮಾಡುತ್ತಿರುವ ಪ್ರಕ್ರಿಯೆ ಮುಂದುವರೆದಿದೆ. ಇದಕ್ಕಿಂತ ಹೀನಾಯವಾದ ದೇಶದ್ರೋಹದ ಕೆಲಸ ಮತ್ತೊಂದಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ಕಾರ್ಯವಾಗಿವೆ. ಇಂತಹ ಅಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ದೇಶದ್ರೋಹದ ಕೆಲಸವನ್ನು ದೇಶದ ಜನರು ಒಕ್ಕೊರಲಿನಿಂದ ಖಂಡಿಸಬೇಕು. ಒಳ್ಳೆಯವರು ಮೌನವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಹೇಳಿದರು.

ಅರ್ಹರಲ್ಲದ, ಯೋಗ್ಯರಲ್ಲದ ಜನರು ಅಧಿಕಾರ ಪಡೆಯಬೇಕೆಂಬ ಅಧಿಕಾರದ ದಾಹ ಶಾಸಕರ ರಾಜೀನಾಮೆ ಹಿಂದಿದೆ. ಯಾರು ಅಕ್ರಮವಾಗಿ ಸಾವಿರಾರು ಕೋಟಿ ಹಣವನ್ನು ಸಂಪಾದಿಸಿದ್ದಾರೋ ಅವರ ವಿರುದ್ಧ ಸಿಬಿಐ, ಐಟಿ, ಇಡಿ ಅಸ್ತ್ರಗಳನ್ನು ಪ್ರಯೋಗಿಸುವ ಧಮ್ಕಿ ಹಾಕುವ ಮೂಲಕ ಶಾಸಕರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆದಿವೆ. ಆಂಧ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಸಿಕ್ಕಿಂ, ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲೂ ಇಂತಹದ್ದೇ ಘಟನೆಗಳು ನಡೆಯುತ್ತಿವೆ. ಪಕ್ಷಾಂತರದ ಹಿಂದೆ ಪ್ರಭಾವಿಗಳ ಕೈವಾಡ ಇದೆ. ಈ ಬಗ್ಗೆ ಮತದಾರರು ಎಚ್ಚರಗೊಳ್ಳಬೇಕು ಎಂದು ತಿಳಿಸಿದರು.

ಡಿಕೆಶಿ - ಎಂ.ಬಿ.ಪಾಟೀಲ್ ನಡುವೆ ತೀವ್ರ ಜಟಾಪಟಿ : ಕಾರಣವೇನು?

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಯಾವುದೇ ಪಕ್ಷದಿಂದ ಬಿ ಫಾರಂ ಪಡೆದ ಬಳಿಕ ಆ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿರಬೇಕು. ಆದರೆ ರಾಜೀನಾಮೆ ನೀಡಿದ ಶಾಸಕರು ಹಾಗೆ ಮಾಡದೆ, ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿ ಹೋಗಿದ್ದಾರೆ. ಸಚಿವ ಸ್ಥಾನ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಆಸೆಗಾಗಿ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವಾರ ಆದರೂ ಸಚಿವ ಸಂಪುಟ ರಚಿಸದಿರುವುದು ದಾಖಲೆ. ರಾಜ್ಯದಲ್ಲಿ ಸಿದ್ಧಾಂತ ಇಲ್ಲದ ರಾಜಕಾರಣ ನಡೆಯುತ್ತಿದ್ದು, ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಎಐಎಲ್‌ಯು ಜಿಲ್ಲಾ ಸಮಿತಿ ಅಧ್ಯಕ್ಷ ಹರೀಂದ್ರ, ಪ್ರಧಾನ ಕಾರ್ಯದರ್ಶಿ ಟಿ.ಎನ್‌.ಶಿವಾರೆಡ್ಡಿ, ವಕೀಲ ಶಿವಶಂಕರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

 ತಿರಸ್ಕರಿಸಿ: ದತ್ತ

ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಮಾತನಾಡಿ, ಜನಪ್ರತಿನಿಧಿಗಳಿಗೆ ಮತದಾರರ ಭಯವಿಲ್ಲ. ಮತದಾರರ ಭಯ ಇದ್ದಿದ್ದರೆ ಚುನಾಯಿತ ಪ್ರತಿನಿಧಿ ಈ ಕೆಲಸ ಮಾಡುತ್ತಿರಲಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿ ಪಕ್ಷಾಂತರವಾದವರು ಬೇರೆ ಪಕ್ಷದ ಚಿಹ್ನೆಯಲ್ಲಿ ನಿಂತರೆ ಪುನಃ ಅವರನ್ನು ಗೆಲ್ಲಿಸುತ್ತಾರೆ. ಹೀಗಿರುವಾಗ 10ನೇ ಪರಿಚ್ಛೇದವನ್ನು ತಿಪ್ಪೆಗೆ ಎಸೆಯಬೇಕಷ್ಟೆ. ಜನ ಇಂತಹವನ್ನು ತಿರಸ್ಕರಿಸಬೇಕು. ಆಗ ಒಂದಷ್ಟುಒಳ್ಳೆಯದಾಗುತ್ತದೆ ಎಂದರು.

ನಗರದಲ್ಲಿ ಅಖಿಲ ಭಾರತ ವಕೀಲರ ಸಂಘ(ಎಐಎಲ್‌ಯು) ಜಿಲ್ಲಾ ಸಮಿತಿ ಆಯೋಜಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾ.ನಾಗಮೋಹನದಾಸ್‌, ಮಾಜಿ ಸಚಿವ ಕೃಷ್ಣಬೈರೇಗೌಡ, ಶಾಸಕ ವೈ.ಎಸ್‌.ವಿ.ದತ್ತ ಇತರರಿದ್ದರು.

click me!