
ಶಿವಮೊಗ್ಗ: ಹೊಸನಗರ ತಾಲೂಕಿನ ವಿಶ್ವಪ್ರಸಿದ್ಧ ಕೊಡಚಾದ್ರಿ ಬೆಟ್ಟದಲ್ಲಿ ಚಾರಣಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಆಯತಪ್ಪಿ ಸುಮಾರು 60 ಅಡಿ ಆಳದ ಕಂದಕಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಸ್ಥಳೀಯ ಜೀಪ್ ಚಾಲಕರ ಸಮಯ ಪ್ರಜ್ಞೆಯಿಂದ ಪ್ರವಾಸಿಗ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಪ್ರದೀಪ್ ಗಾಯಗೊಂಡ ಪ್ರವಾಸಿಯಾಗಿದ್ದು, ಇವರು ಕುಟುಂಬ ಸಮೇತರಾಗಿ ಕೊಡಚಾದ್ರಿ ಪ್ರವಾಸಕ್ಕೆ ಆಗಮಿಸಿದ್ದರು. ಶಂಕರಾಚಾರ್ಯರ ಸರ್ವಜ್ಞ ಪೀಠಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ದಿಢೀರನೆ ತಲೆಸುತ್ತು ಬಂದಿದ್ದರಿಂದ ನಿಯಂತ್ರಣ ತಪ್ಪಿ ಕಂದಕಕ್ಕೆ ಜಾರಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಜೀಪ್ ಚಾಲಕರು, ಕಂದಕಕ್ಕೆ ಹಗ್ಗ ಇಳಿಸಿ ಪ್ರದೀಪ್ ರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಳಿಕ ತಮ್ಮ ಜೀಪಿನಲ್ಲಿ ಗಾಯಾಳುವನ್ನು ಬೆಟ್ಟದ ಕೆಳಭಾಗಕ್ಕೆ ಕರೆತಂದಿದ್ದಾರೆ. ಗಾಯಾಳು ಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಲಭ್ಯವಿಲ್ಲದೆ ಕುಟುಂಬಸ್ಥರು ಪರದಾಡಿದರು.
ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರೂ ಕನಿಷ್ಠ ಸೌಕರ್ಯ ಒದಗಿಸದ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಹಿಡಿಶಾಪ ಹಾಕಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿದನೂರು ನಗರ ಪೊಲೀಸ್ ಠಾಣೆಯ ಪೊಲೀಸರು ಗಾಯಾಳು ವನ್ನು ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ವ್ಯಕ್ತಿಯೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಳಿಕ ಆತನ ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದಿರುವ ಘಟನೆ ಹೊಸನಗರ ಗರ್ತಿಕೆರೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಗರ್ತಿಕೆರೆ ಗ್ರಾಮದ ರಾಘವೇಂದ್ರ ಅಲಿಯಾಸ್ ಆಪಲ್ ರಾಘು ಎಂಬಾತ ಹಲ್ಲೆ ನಡೆಸಿದ್ದಾನೆ ಹಲ್ಲೆಗೊಳಗಾದ ಮಂಜುನಾಥ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಭ್ಯ ಮಾಹಿತಿಯ ಪ್ರಕಾರ, ಆರೋಪಿ ರಾಘು ಮನೆಯಲ್ಲಿ ಮದ್ಯ ಸೇವಿಸಿ ಬಳಿಕ ಗರ್ತಿಕೆರೆಯ ಅವುಕ ಸರ್ಕಲ್‌ಗೆ ಬಂದಿದ್ದ ಅಲ್ಲಿ ತನ್ನೊಂದಿಗೆ ಮದ್ಯ ಸೇವಿಸಿದ್ದ ಮಂಜುನಾಥ್ ನೊಂದಿಗೆ ಏಕಾಏಕಿ ಗಲಾಟೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮಾತಿನ ಚಕಮಕಿ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕಬ್ಬಿಣದ ರಾಡ್‌ನಿಂದ ಮಂಜುನಾಥ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಬಳಿಕ ಗಾಯಗೊಂಡು ನೆಲಕ್ಕೆ ಬಿದ್ದಿದ್ದ ಮಂಜುನಾಥ್‌ನ ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದಿದ್ದಾನೆ.ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ರಿಪ್ಪನ್ ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.