
ಕನ್ನಡಪ್ರಭ ವಾರ್ತೆ ಬೆಂಗಳೂರು (ಆ.17): ವಿಧಾನಸೌಧ ಆವರಣದಲ್ಲಿ ಜರುಗಿದ ಫ್ರೀಡಂ ಹಬ್ಬಕ್ಕೆ 6 ಕೋಟಿ ರು. ವೆಚ್ಚ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿಯುವ ಮೊದಲೇ ಪೂರ್ವ ನಿಯೋಜಿತ ‘ಆಯ್ದ ಸಂಸ್ಥೆ’ಗೆ ಶಾಮಿಯಾನ ಸೇರಿದಂತೆ ಕಾರ್ಯಕ್ರಮಕ್ಕೆ ಅಗತ್ಯವಿರುವ ವಿವಿಧ ಸೌಲಭ್ಯಗಳನ್ನು ಒದಗಿಸುವ ಟೆಂಡರ್ ನೀಡಿ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದೆ.
ಆ.3ರಂದು ಟೆಂಡರ್ ಕರೆಯಲಾಗಿದ್ದು, ಬಿಡ್ ಮಾಡಲು ಫೆ.12ರಂದು ಸಂಜೆ 5.30ಕ್ಕೆ ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗಿತ್ತು. ಆದರೆ, ಬಿರ್ ತೆರೆಯುವ ಸಾಕಷ್ಟು ಮೊದಲೇ ಪೂರ್ವ ನಿರ್ಧಾರಿತ ಏಜೆನ್ಸಿಯೊಂದು ನಿರ್ಮಾಣ ಸಾಮಗ್ರಿಗಳನ್ನು ವಿಧಾನಸೌಧ ಆವರಣಕ್ಕೆ ತಂದಿಟ್ಟುಕೊಂಡು ಕೆಲಸವನ್ನು ಕೂಡ ಆರಂಭಿಸಿತ್ತು. ಈ ಮೂಲಕ ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದೆ.
ಟೆಂಡರ್ ಷರತ್ತುಗಳ ಪ್ರಕಾರ, ಶಾಮಿಯಾನ, ವೇದಿಕೆ, ಸೌಂಡ್ಸ್ ಸಿಸ್ಟಮ್ಸ್, ಲೈಟಿಂಗ್ಸ್, ಏಲಕ್ಕಿ ಹಾರ, ಶಾಲು, ತಿಂಡಿ ತಿನಿಸು, ಪಟಾಕಿ, ಬ್ಯಾಂಡ್, ನೆನಪಿನ ಕಾಣಿಕೆಗಳು, ಸ್ಟಾಲ್ ಅಳವಡಿಕೆ ಸೇರಿದಂತೆ ಫ್ರೀಡಂ ಹಬ್ಬಕ್ಕೆ ಬೇಕಾಗಿರುವ ವಸ್ತುಗಳನ್ನು ಒದಗಿಸಬೇಕು ಎಂದು ಟೆಂಡರ್ ಕರೆಯಲಾಗಿತ್ತು.
ಆದರೆ, ಟೆಂಡರ್ ಯಾರಿಗೆ ನೀಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿದ್ದ ಕಾರಣ, ಆ ಏಜೆನ್ಸಿಯವರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು. ಕೆಲಸ ಆರಂಭಿಸಲಾಗಿತ್ತು. ನಂತರ ಟೆಂಡರ್ ದಾಖಲೆಗಳನ್ನು ತೆರೆದು ನಾಮಕಾವಾಸ್ತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರನ್ನು ಕರೆಸಿ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಲಾಗಿದೆ. ಹಲವು ಸ್ಟಾಲ್‌ಗಳನ್ನು ಅಳವಡಿಸಲಾಗಿದ್ದು, ಅನೇಕ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಇನ್ನು ವಿಧಾನಸೌಧ ಎದುರಿನ ರಸ್ತೆಯಲ್ಲಿ ಕಾರ್ಯಕ್ರಮಕ್ಕಾಗಿ ಟೆಂಟ್, ಬ್ಯಾರಿಕೇಡ್ ವ್ಯವಸ್ಥೆ ಸೇರಿದಂತೆ ವಿವಿಧ ಖರ್ಚು ವೆಚ್ಚಗಳನ್ನು ಮಾಡಲಾಗಿದೆ.