
ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಸಹಚರರ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಇಡೀ ರಾಜ್ಯದ ಕಣ್ಣು ಹೈಕೋರ್ಟ್‌ನತ್ತ ನೆಟ್ಟಿದೆ. ಜೈಲಿನಿಂದ ಹೊರಬಂದಿರುವ ಐವರು ಪ್ರಮುಖ ಆರೋಪಿಗಳ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ಮುಕ್ತಾಯಗೊಂಡಿದ್ದು, ಕರ್ನಾಟಕ ಹೈಕೋರ್ಟ್ ಬುಧವಾರವಾದ ಇಂದು ಮಧ್ಯಾಹ್ನ 2:30 ಕ್ಕೆ ತನ್ನ ಮಹತ್ವದ ಆದೇಶವನ್ನು ಪ್ರಕಟಿಸಲಿದೆ.
ಈ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್ ತೂಗುದೀಪ ಸೇರಿದಂತೆ ಒಟ್ಟು ಏಳು ಜನ ಪ್ರಮುಖ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆದೇಶಿಸಿತ್ತು. ಸದ್ಯ 7 ಮಂದಿ ಜೈಲಿನಲ್ಲಿದ್ದಾರೆ. ಸುಪ್ರೀಂಕೋರ್ಟ್‌ನ ಈ ಕಠಿಣ ತೀರ್ಪಿನ ಬೆನ್ನಲ್ಲೇ ಪ್ರಾಸಿಕ್ಯೂಷನ್, ಪ್ರಕರಣದ ಗಾಂಭೀರ್ಯತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮತ್ತು ಕಾನೂನು ಪ್ರಕ್ರಿಯೆಗೆ ಯಾವುದೇ ಧಕ್ಕೆಯಾಗದಂತೆ ತಡೆಯಲು ಇತರೆ ಐವರು ಆರೋಪಿಗಳ ಜಾಮೀನನ್ನೂ ರದ್ದುಗೊಳಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
2025ರ ಆಗಸ್ಟ್ ತಿಂಗಳಲ್ಲಿ ನಟ ದರ್ಶನ್ ಮತ್ತು ಅವರ ಪ್ರಮುಖ ಸಹಚರರು ಮತ್ತೆ ಜೈಲು ಪಾಲಾದ ಬೆನ್ನಲ್ಲೇ, ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ಉಳಿದ ಆರೋಪಿಗಳಾದ ವಿನಯ್, ನಂದೀಶ್, ಧನರಾಜು, ಪವನ್ ಮತ್ತು ರಾಘವೇಂದ್ರ ಅವರ ಮುಕ್ತ ಓಡಾಟಕ್ಕೆ ಬ್ರೇಕ್ ಹಾಕಲು ಪ್ರಾಸಿಕ್ಯೂಷನ್ ಈ ಕಾನೂನು ಹೋರಾಟವನ್ನು ಆರಂಭಿಸಿತ್ತು.
ಸರ್ಕಾರದ ಪರ ವಕೀಲರು (ಪ್ರಾಸಿಕ್ಯೂಷನ್) ಹೈಕೋರ್ಟ್‌ನಲ್ಲಿ ಪ್ರಬಲ ವಾದ ಮಂಡಿಸಿದ್ದು, "ಈ ಕೊಲೆ ಪ್ರಕರಣವು ಅತ್ಯಂತ ಕ್ರೂರ ಸ್ವರೂಪದ್ದಾಗಿದೆ. ಸುಪ್ರೀಂಕೋರ್ಟ್ ಈಗಾಗಲೇ ಮುಖ್ಯ ಆರೋಪಿಗಳ ಜಾಮೀನು ರದ್ದುಪಡಿಸಿರುವುದನ್ನು ಗಮನಿಸಿದರೆ, ಈ ಐವರು ಆರೋಪಿಗಳಿಗೂ ಪ್ರಕರಣದಲ್ಲಿ ಸಮಾನ ಪಾತ್ರವಿರುವುದು ಸ್ಪಷ್ಟವಾಗುತ್ತದೆ. ಇವರು ಹೊರಗಿದ್ದರೆ ಸಾಕ್ಷ್ಯ ನಾಶಪಡಿಸುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್ ಆದೇಶದ ಅನ್ವಯವೇ ಇವರ ಜಾಮೀನನ್ನೂ ತಕ್ಷಣವೇ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಮತ್ತೊಂದೆಡೆ, ಆರೋಪಿಗಳ ಪರ ವಕೀಲರು ಈ ವಾದವನ್ನು ಬಲವಾಗಿ ವಿರೋಧಿಸಿದ್ದು, ತಮ್ಮ ಕಕ್ಷಿದಾರರು ಈಗಾಗಲೇ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಮತ್ತು ಜಾಮೀನಿನ ನಿಯಮಗಳನ್ನು ಎಲ್ಲೂ ಉಲ್ಲಂಘಿಸಿಲ್ಲ ಎಂದು ಪ್ರತಿಪಾದಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಮಾನ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಏಕಸದಸ್ಯ ಪೀಠವು ತೀರ್ಪನ್ನು ಕಾಯ್ದಿರಿಸಿದೆ
ಇಡೀ ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಈ ಅರ್ಜಿಯ ಅಂತಿಮ ಆದೇಶವನ್ನು ಜಸ್ಟಿಸ್ ಎಸ್. ರಾಚಯ್ಯ ಅವರ ಪೀಠವು ಇಂದು ಮಧ್ಯಾಹ್ನ 2:30 ಕ್ಕೆ ಪ್ರಕಟಿಸಲಿದೆ. ಒಂದು ವೇಳೆ ಹೈಕೋರ್ಟ್ ಪ್ರಾಸಿಕ್ಯೂಷನ್ ವಾದವನ್ನು ಪುರಸ್ಕರಿಸಿ ಆದೇಶ ನೀಡಿದರೆ, ಸದ್ಯ ನಿರಾಳವಾಗಿದ್ದ ವಿನಯ್, ನಂದೀಶ್, ಧನರಾಜು, ಪವನ್ ಮತ್ತು ರಾಘವೇಂದ್ರ ಅವರಿಗೆ ಮತ್ತೆ ಕಠಿಣ ಜೈಲುವಾಸ ಎದುರಾಗುವುದು ಖಚಿತ. ಹೀಗಾಗಿ ಇಂದಿನ ಮಧ್ಯಾಹ್ನದ ಕೋರ್ಟ್ ಆದೇಶವು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅತ್ಯಂತ ನಿರ್ಣಾಯಕ ತಿರುವು ಪಡೆದುಕೊಳ್ಳಲಿದೆ.