ಮೂರು ವರ್ಷದಿಂದ ಬತ್ತಿದ್ದ ಸೋಮನಹಳ್ಳಿ, ಮರದೂರು ಭಾಗದ ಕೆರೆಗಳಿಗೆ ಜೀವ ಕಳೆ; ಶಾಸಕರೇ ಇಲ್ಲಿ ಭಗೀರಥ

Published : Jun 10, 2026, 10:47 AM IST
Lake

ಸಾರಾಂಶ

ಹುಣಸೂರಿನ ಸೋಮನಹಳ್ಳಿ ಮತ್ತು ಮರದೂರು ಭಾಗದ ಬತ್ತಿದ್ದ ಕೆರೆಗಳಿಗೆ ನೀರು ತುಂಬಿಸಲು ₹5.45 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮೂರು ವರ್ಷಗಳಿಂದ ನೀರಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು, ಈ ಯೋಜನೆಯು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಮೈಸೂರು: ಮೂರು ವರ್ಷಗಳಿಂದ ಮಳೆಗಾಲ ಬಂದರೂ ನೀರು ಕಾಣದೆ ಬತ್ತಿ ನಿಂತಿದ್ದ ಸೋಮನಹಳ್ಳಿ ಹಾಗೂ ಮರದೂರು ಭಾಗದ ಕೆರೆಗಳು ಮತ್ತೆ ಜೀವ ಪಡೆಯುವ ಹಂತಕ್ಕೆ ಬಂದಿವೆ. ನೀರಿಗಾಗಿ ಪರದಾಡುತ್ತಿದ್ದ ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕ ಜಿ.ಡಿ. ಹರೀಶ್‌ಗೌಡ ಅವರು ಮೂರು ಕೋಟಿ ವೆಚ್ಚದ ಪೈಪ್‌ಲೈನ್‌ಕಾಮಗಾರಿಗೆ ಚಾಲನೆ ನೀಡುವ ಮೂಲಕ ಕೆರೆಗಳಿಗೆ ನೀರು ಹರಿಸುವ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈಗ ಒಟ್ಟು 5.45 ಕೋಟಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಕೆರೆಗಳಲ್ಲಿ ನೀರು ಇಲ್ಲದ ಪರಿಣಾಮ ಈ ಭಾಗದ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿದ್ದವು. ಅಂತರ್ಜಲ ಮಟ್ಟ ಕುಸಿದ ಪರಿಣಾಮ ರೈತರು, ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದರು. ಈ ಸಂದರ್ಭದಲ್ಲಿ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ದೊರೆತಿರುವುದು ಈ ಭಾಗದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಸೋಮನಹಳ್ಳಿ ಸೇರಿದಂತೆ ನಾಲ್ಕು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಈ ಹಿಂದೆಯೇ ರೂಪಿಸಲಾಗಿತ್ತು. ಆದರೆ ಮೊದಲು ಅಳವಡಿಸಲಾಗಿದ್ದ ಪೈಪ್‌ಲೈನ್‌ಪದೇ ಪದೆ ಹಾಳಾಗುತ್ತಿದ್ದ ಕಾರಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಆಗಿರಲಿಲ್ಲ. ಪರಿಣಾಮವಾಗಿ ಕಳೆದ ಮೂರು ವರ್ಷಗಳಿಂದ ಕೆರೆಗಳು ನೀರಿಲ್ಲದೆ ಬತ್ತಿ ನಿಂತಿದ್ದವು.

ಸರ್ಕಾರದಿಂದ ಮೂರು ಕೋಟಿ ರು. ಅನುದಾನ ಮಂಜೂರು

ಈ ನಡುವೆ ಸಮಸ್ಯೆಯ ಗಂಭೀರತೆಯನ್ನು ಅರಿತ ಜಿ.ಡಿ. ಹರೀಶ್‌ಗೌಡ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಶಾಶ್ವತ ಪರಿಹಾರಕ್ಕೆ ಮುಂದಾದರು. ಸುಮಾರು 2.5 ಕಿ.ಮೀ. ಉದ್ದದ ಎಂಎಸ್‌ಪೈಪ್‌ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಿ ಸರ್ಕಾರದಿಂದ ಮೂರು ಕೋಟಿ ರು. ಅನುದಾನ ಮಂಜೂರು ಮಾಡಿಸಿಕೊಂಡರು. ಇದೀಗ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಕೆರೆಗಳಿಗೆ ನಿರಂತರವಾಗಿ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಶಾಸಕ ಜಿ.ಡಿ. ಹರೀಶ್‌ಗೌಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೆರೆಗಳು ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜಲಮಟ್ಟ ಹೆಚ್ಚಾಗುತ್ತದೆ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿರುವುದರಿಂದ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ನಿರೀಕ್ಷೆ ಸಾಕಾರಗೊಳ್ಳುತ್ತಿರುವುದರಿಂದ ಈ ಭಾಗದ ರೈತರು, ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಕೆರೆಗಳು ಕೇವಲ ನೀರಿನ ಸಂಗ್ರಹಣಾ ತಾಣಗಳಲ್ಲ, ಗ್ರಾಮೀಣ ಬದುಕಿನ ಜೀವನಾಡಿಗಳಾಗಿವೆ. ಅಂತಹ ಜೀವನಾಡಿಗಳಿಗೆ ಮತ್ತೆ ನೀರು ಹರಿಸುವ ಪ್ರಯತ್ನಕ್ಕೆ ಚಾಲನೆ ದೊರೆತಿರುವುದು ಸೋಮನಹಳ್ಳಿ ಮತ್ತು ಮರದೂರು ಭಾಗದ ಜನರಿಗೆ ಹೊಸ ಭರವಸೆಯ ಬೆಳಕಾಗಿ ಪರಿಣಮಿಸಿದೆ ಎಂದು ಹೇಳಿದರು.

ಎಇಇ ರೇಣುಕಾಸ್ವಾಮಿ, ಪಿಡಿಒ ಮಹದೇವಸ್ವಾಮಿ, ಮುಖಂಡರಾದ ಕೆಂಗಯ್ಯ, ಶಿವಕುಮಾರ್, ಗೋವಿಂದೇಗೌಡ, ದಿನೇಶ್, ಗವಿನಾಯಕ, ರಾಜೇಶ್, ಲಿಂಗೇಗೌಡ ಇದ್ದರು.

ವಿವಿಧ ಕಾಮಗಾರಿಗಳಿಗೆ ಚಾಲನೆ

ತಾಲೂಕಿನ ವಿವಿಧೆಡೆ ಹಲವು ಕಾಮಗಾರಿಗಳಿಗೆ ಶಾಸಕ ಜಿ.ಡಿ. ಹರೀಶ್‌ಗೌಡ ಅವರು ಚಾಲನೆ ನೀಡಿದರು. ಪ್ರಮುಖವಾಗಿ ಬನ್ನಿಕುಪ್ಪೆ ಅಂಗನವಾಡಿ ಕೇಂದ್ರ, ಡ್ಡೇಗೌಡನ ಕೊಪ್ಪಲಿನ ಮುಖ್ಯರಸ್ತೆಯ ಚರಂಡಿ ನಿರ್ಮಾಣಕ್ಕೆ 25 ಲಕ್ಷ ಹಾಗೂ ಇದೇ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ 15 ಲಕ್ಷ ರು. ಮರಳಯ್ಯನ ಕೊಪ್ಪಲಿನ ಸಿಸಿ ರಸ್ತೆಗೆ 30 ಲಕ್ಷ, ಮಾದಳ್ಳಿ ಸಿಸಿ ರಸ್ತೆಗೆ 25 ಲಕ್ಷ, ಮೂಡಲಕೊಪ್ಪಲು ಸಿಸಿ ರಸ್ತೆಗೆ 30 ಲಕ್ಷ ರು. ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಮೂಡಲಕೊಪ್ಪಲು ಗ್ರಾಮದಲ್ಲಿ ಒಕ್ಕಲಿಗ ಸಮುದಾಯದ ಭವನ ನಿರ್ಮಾಣ ಮಾಡಲು ಒಂದು ಕೋಟಿ ರು. ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಮಾಡುವುದಷ್ಟೇ ನನಗೆ ಮುಖ್ಯವಾಗಿದ್ದು, ಇದರಲ್ಲಿ ರಾಜಕೀಯ ಮಾಡುವ ಯಾವ ಅಗತ್ಯವೂ ನನಗಿಲ್ಲ ಮತ್ತು ಅದನ್ನು ಮಾಡುವುದೂ ಇಲ್ಲ. ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅನುದಾನದ ಕೊರತೆ ಉಂಟಾಗಿದ್ದು, 224 ಶಾಸಕರಿಗೆ ಅನುದಾನ ಬಾರದ ಪರಿಸ್ಥಿತಿ ಉಂಟಾಗಿದೆ. ಕಾಂಗ್ರೆಸ್‌ನಿಂದ 5 ರಿಂದ 6 ಬಾರಿ ಗೆದ್ದಿರುವ ಶಾಸಕರು ಕೂಡ ಅನುದಾನ ಬಿಡುಗಡೆ ಆಗದ ಬಗ್ಗೆ ಬೇಸರ ಹೊಂದಿದ್ದಾರೆ. ಆದರೆ ಇದೀಗ ಹೊಸ ಸರ್ಕಾರ ರಚನೆಯಾಗಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಸಚಿವರನ್ನು ಮತ್ತೊಮ್ಮೆ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಮನವಿ ಶಾಸಕ ಜಿ.ಡಿ.ಹರೀಶ್ ಗೌಡ ಮನವಿ ಮಾಡಿಕೊಂಡರು.

PREV
Read more Articles on
click me!

Recommended Stories

ರಾಯಚೂರು: ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಡಿವೈಡರ್ ಡಿಕ್ಕಿ; 'ಕಣ್ಣು ಮಂಜಾಗಿ' ಹತ್ತಿಸಿದ ಎಂದ ಭೂಪ!
ಮೆಟ್ರೋ ಬರುವ ಖುಷಿಯಲ್ಲಿದ್ದ ತುಮಕೂರಿನ ಜನತೆಗೆ ಬೇಸರದ ಸಂಗತಿ; ನಮಗ್ಯಾಕೆ ಬೇಕೆಂದ ಜನ