ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದ ಪುನರ್‌ ರಚನೆ ಅತ್ಯಗತ್ಯ: ಸದಾನಂದ ಗೌಡ

By Kannadaprabha NewsFirst Published Nov 20, 2022, 1:30 AM IST
Highlights

ಕೆದಂಬಾಡಿ ರಾಮಯ್ಯ ಗೌಡರ ಮೊದಲ ಸ್ವಾತಂತ್ರ್ಯ ಹೋರಾಟಗಾರ ದಾಖಲೆ ಪ್ರತಿ ಕೇಂದ್ರಕ್ಕೆ ಶೀಘ್ರ ಸಲ್ಲಿಕೆಗೆ ಕ್ರಮ: ಡಿ.ವಿ. ಸದಾನಂದ ಗೌಡ 

ಮಂಗಳೂರು(ನ.20):  ಸ್ವಾತಂತ್ರ ಸಂಗ್ರಾಮದ ಇತಿಹಾಸವನ್ನು ಪುನರ್‌ ರಚಿಸುವ ಕಾರ್ಯ ಆಗಬೇಕು. ಅದಕ್ಕಾಗಿ ಕೆದಂಬಾಡಿ ರಾಮಯ್ಯ ಗೌಡರ ಹೋರಾಟದ ಕುರಿತಂತೆ ಅವರ ಪ್ರತಿಮೆ ಅನಾವರಣ ಕುರಿತಾದ ಅಗತ್ಯ ದಾಖಲೆಗಳನ್ನು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸುವ ಕೆಲಸ ಆಗಬೇಕು ಎಂದು ಸಂಸದ, ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ಶನಿವಾರ ಮಂಗಳೂರಿನ ಬಾವುಟಗುಡ್ಡೆಯಲ್ಲಿ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆ ಬಳಿಕ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಲಾ ಪಠ್ಯದಲ್ಲಿ ಅಳವಡಿಸಿ: ಮಂಗಳೂರು ಶಾಸಕ ಯು. ಟಿ. ಖಾದರ್‌ ಮಾತನಾಡಿ, ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ ಪ್ರತಿಮೆ ಅನಾವರಣ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ ಎಂದರು. ಕೆದಂಬಾಡಿ ರಾಮಯ್ಯ ಗೌಡರು ಸೇರಿದಂತೆ ಜಿಲ್ಲೆಯ ಇತಿಹಾಸ ಪುರುಷರ ಹೋರಾಟದ ಬಗ್ಗೆ ಶಾಲಾ ಪಠ್ಯದಲ್ಲಿ ಅಳವಡಿಸಬೇಕು. ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ರಾಣಿ ಹಾಗೂ ಮಂಗಳೂರು ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆಗೆ ಸಭೆ: ಸಚಿವ ಎಸ್‌.ಟಿ.ಸೋಮಶೇಖರ್‌

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್‌ ಮಾತನಾಡಿ, ನಮ್ಮ ಸಮಾಜದಲ್ಲಿ ಇಂತಹ ಮಹಾ ಪುರುಷರನ್ನು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರನ್ನು ಮರೆಯಲು ಸಾಧ್ಯ ಇಲ್ಲ ಎಂಬುದಕ್ಕೆ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಸಾಕ್ಷಿ ಎಂದರು.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಮಾತನಾಡಿ, ಸುಳ್ಯದ ಬಂಗ್ಲೆಗುಡ್ಡೆಯಲ್ಲಿರುವ ಬ್ರಿಟಿಷರ ಖಜಾನೆಗೆ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ಲಗ್ಗೆ ಹಾಕಲಾಗಿತ್ತು. ಆ ಖಜಾನೆಯ ಪಳೆಯುಳಿಕೆಯನ್ನು ಸ್ಮಾರಕವಾಗಿ ಉಳಿಸುವ ಕಾರ್ಯ ನಡೆಯುತ್ತಿದೆ ಎಂದರು.

ನಮ್ಮ ಸರ್ಕಾರದ ಸಾಧನೆ: ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, 1837ರಲ್ಲಿ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದು 13 ದಿನಗಳ ಕಾಲ ತುಳುನಾಡಿನ ದ್ವಜ ಹಾಕಿದ್ದ ರಾಮಯ್ಯ ಗೌಡರ ಸ್ಮಾರಕ ನಿರ್ಮಾಣ ಮೂಲಕ ಗೌರವ ಸಲ್ಲಿಸಲಾಗಿದೆ. ಕಳೆದ 75 ವರ್ಷಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಮಾಡದ್ದನ್ನು ನಮ್ಮ ಸರ್ಕಾರ ಮಾಡಿದೆ ಎಂದರು.

ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ಸ್ಥಾಪಿಸುವ ಮೂಲಕ ಅವರ ವ್ಯಕ್ತಿತ್ವವನ್ನು ನಾಡಿಗೆ ತೋರಿಸಿಕೊಟ್ಟಂತಾಗಿದೆ. ಅವರ ಆದರ್ಶಪ್ರಾಯ ಬದುಕು ಎಲ್ಲರದಾಗಬೇಕು ಎಂದರು.

ರಾಮಯ್ಯಗೌಡ ಪ್ರತಿಮೆ ನಿರ್ಮಾಣ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಪತ್ತೆಗೆ ಪೂರಕ: ಸಿಎಂ ಬೊಮ್ಮಾಯಿ

ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀಧರ್ಮಪಾಲನಾಥ ಸ್ವಾಮೀಜಿ, ಶಾಸಕರಾದ ಡಾ. ಭರತ್‌ ಶೆಟ್ಟಿ, ರಾಜೇಶ್‌ ನಾಯ್ಕ, ಸಂಜೀವ ಮಠಂದೂರು, ಹರೀಶ್‌ ಪೂಂಜಾ, ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್‌ ಕುಮಾರ್‌, ಮೇಯರ್‌ ಜಯಾನಂದ ಅಂಚನ್‌, ಉಪ ಮೇಯರ್‌ ಪೂರ್ಣಿಮಾ, ಪಾಲಿಕೆ ವಿಪಕ್ಷ ನಾಯಕ ನವೀನ್‌ ಡಿಸೋಜಾ, ವಿವಿಧ ನಿಗಮ, ಮಂಡಳಿ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಎ.ವಿ. ಸೀತಾರಾಂ, ಮಾಜಿ ಸ್ಪೀಕರ್‌ ಬೋಪಯ್ಯ, ಮಾಜಿ ಮೇಯರ್‌ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಪೊಲೀಸ್‌ ಕಮಿಷನರ್‌ ಶಶಿಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌ ಇದ್ದರು.

ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ ಗುಡ್ಲೆಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಸ್ವಾಗತಿಸಿದರು. ಸಭಾ ಕಾರ್ಯಕ್ರಮ ಉದ್ಘಾಟನೆ ಬಳಿಕ ಕೆದಂಬಾಡಿ ರಾಮಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಂಜುಳಾ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು.
 

click me!