ಭೂ ಒತ್ತುವರಿ, ಪರಿವರ್ತನಾ ಕಾಯ್ದೆ ನಿಯಮ ಸಡಿಲ, ಭೂ ಒತ್ತುವರಿ ಪ್ರಕರಣ ದಾಖಲಿಸದಂತೆ ಅಧಿಕಾರಿಗಳಿಗೆ ಸೂಚನೆ: ಅಶೋಕ್
ಮೈಸೂರು(ನ.20): ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭೂ ಒತ್ತುವರಿ ಕಾಯ್ದೆ, ಭೂ ಪರಿವರ್ತನಾ ಕಾಯ್ದೆಯ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಶನಿವಾರ ಆಯೋಜಿಸಿದ್ದ ‘ಹಳ್ಳಿ ಕಡೆ, ಜಿಲ್ಲಾಧಿಕಾರಿ ನಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವು ಕಡೆ ಒತ್ತುವರಿ ಆಗಿರುತ್ತದೆ. ಹೀಗಾಗಿ, ನಗರ ಪ್ರದೇಶ ಹೊರತುಪಡಿಸಿ ಉಳಿದ ಕಡೆ, ಅಂದರೆ ಪ್ರಮುಖವಾಗಿ ರೈತರ ಮೇಲೆ ಯಾವುದೇ ಭೂ ಒತ್ತುವರಿ ಪ್ರಕರಣ ದಾಖಲಿಸದಂತೆ ಸೂಚಿಸಲಾಗಿದೆ. ಇಲ್ಲವಾದರೆ ರೈತರು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆಯಬೇಕಿತ್ತು. ಕೋಳಿ ಫಾರಂ ನಡೆಸಲು ಈ ಹಿಂದೆ ಭೂ ಪರಿವರ್ತನೆ ಮಾಡಿಸಿಕೊಳ್ಳಬೇಕಿತ್ತು. ಆದರೆ, ಈಗ ಭೂ ಪರಿವರ್ತನೆ ಬೇಡ. ಕೋಳಿ ಸಾಕಾಣಿಕೆಯನ್ನೂ ಈಗ ಕೃಷಿ ಎಂದೇ ಪರಿಗಣಿಸಲಾಗಿದೆ. ಜಮೀನಿನ ಖಾತೆ ಮಾಡಿಸಿಕೊಳ್ಳಲು ನೋಂದಣಿಯಾದ 7 ದಿನದೊಳಗೆ ಖಾತೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ. ಈ ಹಿಂದೆ ಇದಕ್ಕಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಾಯಬೇಕಿತ್ತು ಎಂದು ಅವರು ಹೇಳಿದರು.
Mysuru : 22 ರಿಂದ ಸಿಎಂ ಮನೆ ಮುಂದೆ ನಿರಂತರ ಧರಣಿ
ಪ.ಜಾತಿ ಮತ್ತು ಪ.ಪಂಗಡದವರು ಮನೆ ಕಟ್ಟಲು ಮತ್ತು ಸರ್ಕಾರದಿಂದ ನೀಡಿದ ಜಮೀನು ಮಾರಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಈಗ ಆ ನಿಯಮ ತೆಗೆದು ಹಾಕಲಾಗಿದೆ. ಮಾರಾಟ ಮಾಡಲು ಅವಕಾಶ ನೀಡದೆ, ಜಮೀನು ಭೂ ಪರಿವರ್ತನೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಇದರಿಂದ ಜಮೀನನ್ನು ಭೂ ಪರಿವರ್ತಿಸಿಕೊಂಡು ಮನೆ ನಿರ್ಮಿಸಿಕೊಳ್ಳಬಹುದು ಎಂದರು.
7 ದಿನದಲ್ಲಿಯೇ ಮಾಸಾಶನ:
ಸಾರ್ವಜನಿಕರಿಗೆ ಯಾವುದಾದರೂ ಮಾಸಾಶನ ಬೇಕಿದ್ದರೆ 7 ದಿನದಲ್ಲಿಯೇ ಸಿಗುತ್ತದೆ. ಅದಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಇಲ್ಲ. ‘ಹಲೋ ಕಂದಾಯ ಸಚಿವರೆ’ ಎಂಬ ವಿನೂತನ ಯೋಜನೆ ಜಾರಿಗೊಂಡಿದೆ. ನೀವು ಕರೆ ಮಾಡಿದ 72 ಗಂಟೆಯಲ್ಲಿ ಹಿರಿಯ ನಾಗರಿಕರ ಮಾಸಾಶನ ಲಭಿಸುತ್ತದೆ ಎಂದರು.
ನಿಮ್ಮ ಊರಿಗೆ ನೀವೇ ಹೆಸರಿಟ್ಟುಕೊಳ್ಳಿ:
ಕಳೆದ 52 ವರ್ಷದಿಂದ ಉಳುಮೆ ಮಾಡಿಕೊಂಡು ಬಂದವರಿಗೆ ಈವರೆಗೂ ಹಕ್ಕುಪತ್ರ ನೀಡಿಲ್ಲ. ಆದ್ದರಿಂದ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಪ್ರಸ್ತುತ 3,060 ರೈತರಿಗೆ 3.55 ಕೋಟಿ ಪರಿಹಾರ ನೀಡಲಾಗುವುದು. 5,445 ಮಂದಿ ಅತಿವೃಷ್ಟಿವೇಳೆ ಮನೆ ಕಳೆದುಕೊಂಡಿದ್ದು, 45 ಕೋಟಿ ನೀಡಲಾಗಿದೆ ಎಂದು ಹೇಳಿದರು.
Mysuru : ಆಪರೇಷನ್ ಕಮಲಕ್ಕೆ 10 ಸಾವಿರ ಕೋಟಿ ಖರ್ಚು
ಹಾಡಿಯ ಜನರು ವಾಸಿಸುವ ಹಾಡಿಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಿದ್ದು, ಒಂದು ಲಕ್ಷ ಕುಟುಂಬಕ್ಕೆ ಹಕ್ಕು ಪತ್ರ ನೀಡಲಾಗುವುದು. ನಿಮ್ಮ ಊರಿಗೆ ನೀವೇ ಹೆಸರಿಟ್ಟುಕೊಳ್ಳಲು ಅವಕಾಶ ಕಲ್ಪಿಸಿದ್ದು, ನೀವು ಎಲ್ಲರೂ ಒಮ್ಮತದಿಂದ ನೀಡಿದ ಹೆಸರನ್ನೇ ಗೆಜೆಟ್‌ನಲ್ಲಿಯೂ ಘೋಷಿಸಲಾಗುತ್ತದೆ. ಅಲ್ಲದೆ, ಆದಿವಾಸಿಗಳಿಗೆ ಉಳುಮೆ ಮಾಡಲು ನೀಡಿದ ಡೀಮ್ಡ್ ಅರಣ್ಯದ ನಿಯಮವನ್ನೂ ಸಡಿಲಿಸಲಾಗಿದೆ ಎಂದು ತಿಳಿಸಿದರು.
ನಿಮ್ಮ ಸಮಸ್ಯೆ ಆಲಿಸಲು ಬಂದಿದ್ದೇನೆ:
ನಾನು ನಾಳೆ ಸಂಜೆವರೆಗೂ ಇಲ್ಲಿಯೇ ನಿಮ್ಮೊಂದಿಗೆ ಇರುತ್ತೇನೆ. ಸಾವಕಾಶವಾಗಿ ನಿಮ್ಮ ಸಮಸ್ಯೆ ಆಲಿಸಲು ಬಂದಿದ್ದೇನೆ. ಶೇ.70ರಷ್ಟುಮಂದಿ ಹಳ್ಳಿಯಲ್ಲಿ ವಾಸಿಸುತ್ತಾರೆ. ಇಲ್ಲಿ ಸರಿಯಾದ ಸವಲತ್ತು ಸಿಗದಿದ್ದರೆ ನಗರ ಪ್ರದೇಶಕ್ಕೆ ವಲಸೆ ಬರುತ್ತಾರೆ. ಇಲ್ಲಿ ನೀವು ಮಾಡಿದ ಊಟವನ್ನು ನಾನೂ ಮಾಡುತ್ತೇನೆ. ನಿಮ್ಮ ಸಂಕಷ್ಟಗಳನ್ನು ಕೇಳಿ ಬಗೆಹರಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮೂರ ಶಾಲೆಯಲ್ಲಿ ಚಾಪೆಯಲ್ಲೇ ಮಲಗಿ, ನಾಳೆ ಪೋಡಿ ಕಾರ್ಯ ಪೂರ್ಣಗೊಳಿಸುತ್ತೇನೆ. ಈ ವೇಳೆ ಗಂಡು ಮಕ್ಕಳ ಜತೆಗೆ, ಹೆಣ್ಣು ಮಕ್ಕಳಿಗೂ ಪಾಲು ಸಿಗುವುದರಿಂದ ಅವರಿಂದಲೂ ಸಹಿ ಅಗತ್ಯ ಎಂದರು.