ಇಂದಿರಾ ಕ್ಯಾಂಟೀನ್‌ಗೆ ಪ್ರತ್ಯೇಕ ಅಧಿಕಾರಿ ನೇಮಕಕ್ಕೆ ಶಿಫಾರಸು: ಸಚಿವ ರಾಮಲಿಂಗಾರೆಡ್ಡಿ

By Kannadaprabha News  |  First Published May 27, 2023, 6:24 AM IST

ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಆಹಾರದ ಗುಣಮಟ್ಟ, ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಗೆ ಶಿಫಾರಸು ಮಾಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. 


ಬೆಂಗಳೂರು (ಮೇ.27): ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಆಹಾರದ ಗುಣಮಟ್ಟ, ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಗೆ ಶಿಫಾರಸು ಮಾಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಶುಕ್ರವಾರ ನಗರದ ಬನ್ನಪ್ಪಪಾರ್ಕ್ನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುವ ಅಡುಗೆ, ಪೂರೈಕೆದಾರನ ಮಾಹಿತಿ ಸೇರಿದಂತೆ ಆಹಾರ ಸೇವನೆ ಮಾಡುತ್ತಿದ್ದ ಮಹಿಳೆಯರು ಮತ್ತು ಮಕ್ಕಳಿಂದ ಆಹಾರದ ಗುಣಮಟ್ಟ, ಏನು ಬದಲಾವಣೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಅವರು, ಬಡವರಿಗಾಗಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಲಾಗಿದೆ. ಈ ಕ್ಯಾಂಟೀನ್‌ ಮುಚ್ಚಲು ಮುಂದಾದಾಗ ಪಕ್ಷ ಹೋರಾಟ ಮಾಡಿತ್ತು. ಇದೀಗ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಎಲ್ಲ ಇಂದಿರಾ ಕ್ಯಾಂಟೀನ್‌ಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದರು. ಐದು ವರ್ಷದ ಹಿಂದೆ ನಿರ್ಮಾಣ ಮಾಡಿದ ಇಂದಿರಾ ಕ್ಯಾಂಟೀನ್‌ ಕಟ್ಟಡಗಳಿಗೆ ಬಣ್ಣ ಬಳಿದಿಲ್ಲ. ನೀರು, ವಿದ್ಯುತ್‌, ಸಿಸಿ ಟಿವಿ ಕ್ಯಾಮರಾ ಸೇರಿದಂತೆ ಸಾಕಷ್ಟು ಮೂಲಸೌಕರ್ಯ ಸಮಸ್ಯೆ ಇವೆ. ತಕ್ಷಣ ದುರಸ್ತಿ ಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 5ಕ್ಕೆ ತಿಂಡಿ ಹಾಗೂ 10ಕ್ಕೆ ಊಟ ನೀಡುವುದರಿಂದ ಬೆಂಗಳೂರಿಗೆ ಬಂದು ಹೋಗುವ ರೈತರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದರು.

Tap to resize

Latest Videos

ಕೂಪನ್‌ಗಳ ಹಂಚಿ 50 ಕಡೆ ಕಾಂಗ್ರೆಸ್‌ ಗೆಲುವು, ನಿಖಿಲ್‌ ಸೋಲಿಗೂ ಇದೇ ಕಾರಣ: ಎಚ್‌ಡಿಕೆ

ಇಂದಿರಾ ಕ್ಯಾಂಟೀನ್‌ ಹಿಂದಿನಂತೆ ಸೇವೆ ಸ್ವಾಗತಾರ್ಹ: ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಪ್ರಥಮ ಸಂಪುಟ ಸಭೆಯಲ್ಲಿ ಈ ಹಿಂದಿನಂತೆ ರಾಜಾದ್ಯಂತ ಇಂದಿರಾ ಕ್ಯಾಂಟೀನ್‌ಗಳು ಜನರ ಸೇವೆ ಶುರುಮಾಡಲಿವೆ ಎಂದು ತಿಳಿಸಿರುವುದು ಸ್ವಾಗತಾರ್ಹ ಎಂದು ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ರೂಪೇಶ್‌ ಕೃಷ್ಣಯ್ಯ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ನಗರ-ಪಟ್ಟಣಗಳಲ್ಲಿರುವ ಮತ್ತು ಶಿಕ್ಷಣ, ಕಾರ್ಯ ನಿಮಿತ್ತ ನಗರಗಳಿಗೆ ಬರುವ ರೈತರ, ವಿದ್ಯಾರ್ಥಿಗಳ, ಬಡವರ ಹಸಿವು ತಣಿಸುವ ಸದುದ್ದೇಶದಿಂದ ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಕಾರಣದಿಂದಾಗಿ ಕೆಲವು ಮುಚ್ಚಿವೆ.

ಕರೆಂಟ್‌ ಬಿಲ್‌ ಕಟ್ಬೇಡಿ, ಮಹಿಳೆಯರು ಬಸ್‌ ಟಿಕೆಟ್‌ ತಗೋಬೇಡಿ: ಬಿಜೆಪಿ, ಜೆಡಿಎಸ್‌ ಕರೆ!

ಹಲವು ಮುಚ್ಚುವ ಸ್ಥಿತಿಯಲ್ಲಿವೆ. ಇಂತಹ ಸಂದರ್ಭದಲ್ಲಿ ಬಡತನ ನಿರ್ಮೂಲನೆಯ ಕಾರ್ಯವನ್ನು ಕಾಳಜಿಯಿಂದ ಮಾಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹೆಸರಿನ ಇಂದಿರಾ ಕ್ಯಾಂಟಿನ್‌ಗಳನ್ನು ಮುಚ್ಚಲು ನಾವು ಅವಕಾಶ ನೀಡುವುದಿಲ್ಲ. ಅಗತ್ಯ ಸಂಪನ್ಮೂಲ ಒದಗಿಸಿ ಅವುಗಳನ್ನು ಪುನಶ್ಚೇತನಗೊಳಿಸುವುದಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿ ಅತಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್‌ಗಳು ಸ್ವಸ್ಥ ಮತ್ತು ರುಚಿಕರವಾದ ಊಟ ತಿಂಡಿಗಳೊಂದಿಗೆ ಜನರ ಸೇವೆ ಶುರುಮಾಡಲಿವೆ ಎಂದು ತಿಳಿಸುವ ಮೂಲಕ ಸಿದ್ದರಾಮಯ್ಯನವರು ತಮ್ಮ ಆದ್ಯತೆ ಹಾಗೂ ಕಾಂಗ್ರೆಸ್‌ ಪಕ್ಷ ಶ್ರೀಸಾಮಾನ್ಯರ ಪರ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ಹೇಳಿದ್ದಾರೆ.

click me!