ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಅನೇಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಶುಕ್ರವಾರ ಪಾಲಿಕೆ ಮೇಯರ್ ಹಾಗೂ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ (ಮೇ.27) : ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಅನೇಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಶುಕ್ರವಾರ ಪಾಲಿಕೆ ಮೇಯರ್ ಹಾಗೂ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಪ್ರಯಾಣಿಕರು ಮಾತನಾಡಿ, ಈ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ನಿಲ್ದಾಣದ ಒಳಗಿರುವ ಅಂಗಡಿಗಳು 5 ಅಡಿಗೂ ಹೆಚ್ಚು ಸ್ಥಳ ಅತಿಕ್ರಮಣ ಮಾಡಿ ತಮ್ಮ ವಹಿವಾಟು ಮಾಡುತ್ತಿದ್ದಾರೆ. ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ. ಕುಡಿಯುವ ನೀರಂತೂ ಇಲ್ಲವೇ ಇಲ್ಲ. ನೂರಾರು ಬಸ್‌ಗಳು ಓಡಾಡುವ, ಸಾವಿರಾರು ಪ್ರಯಾಣಿಕರು ಸಂಚರಿಸುವ ಈ ಬಸ್ ನಿಲ್ದಾಣದಲ್ಲಿ ಒಂದೇ ಒಂದು ಕ್ಯಾಂಟೀನ್ ಸಹ ಇಲ್ಲ. ಶೌಚಾಲಯಕ್ಕೆ .5 ನಿಗದಿ ಮಾಡಿದ್ದರೂ, . 10ಗಳನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಾರೆ. ಮೂತ್ರ ವಿಸರ್ಜನೆಗೂ . 5 ಪಡೆಯುತ್ತಾರೆ ಎಂಬುದನ್ನು ಶಾಸಕರ ಗಮನಕ್ಕೆ ತಂದರು.
ಮಾಜಿ ಸಿಎಂ ಸಹೋದರಿಗೆ ಐಟಿ ಶಾಕ್: ಕಾಂಗ್ರೆಸ್ ಮುಖಂಡನ ಮನೆಯಲ್ಲಿ 2.8 ಕೋಟಿ ನಗದು ಪತ್ತೆ!
ಕೆಲ ಪ್ರಯಾಣಿಕರು ಬಸ್ ನಿಲ್ದಾಣದ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಗಬ್ಬು ನಾತ ಬೀರುತ್ತಿದೆ. ಬಸ್ ನಿಲ್ದಾಣದ ಒಳಗಿರುವ ಲಾಡ್ಜ್‌ನಲ್ಲಿ ಬೆಡ್‌ವೊಂದಕ್ಕೆ .100 ಶುಲ್ಕ ಇದ್ದರೆ ಅದನ್ನು ನಿರ್ವಹಿಸುವವರು .150 ಪಡೆಯುತ್ತಾರೆ. ಬಿಸಿನೀರಿಗೆ .50 ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ಈ ಲಾಡ್ಜ್‌ನಲ್ಲಿ ಧೂಳು ಮತ್ತು ಕಸ ತುಂಬಿಕೊಂಡಿದೆ. ಬಸ್ ಚಾಲಕರು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಕೂಡ ಕೆಲವರು ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿಯುತ್ತಿದ್ದಾರೆ. ಕರೆಂಟ್ ನಿಯಂತ್ರಕ ಬಾಕ್ಸ್‌ಗಳು ನೇತಾಡುತ್ತಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ ಎಂಬ ಗಂಭೀರ ಆರೋಪಗಳನ್ನು ಮಾಡಿದರು.
ಅಧಿಕಾರಿಗಳಿಗೆ ಕ್ಲಾಸ್:
ಖಾಸಗಿ ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲ ಲೋಪದೋಷಗಳು ಇರುವ ಬಗ್ಗೆ ಶಾಸಕ ಚನ್ನಬಸಪ್ಪ ಪ್ರಯಾಣಿಕರು, ಸಾರ್ವಜನಿಕರ ಅಹವಾಲು ಆಲಿಸಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಹ ಕ್ಲಾಸ್ ತೆಗೆದುಕೊಂಡರು. ಬಸ್ ನಿಲ್ದಾಣದ ಸಮಸ್ಯೆಗಳು ಕೂಡಲೇ ಸರಿಪಡಿಸುವಂತೆ ತಾಕೀತು ಮಾಡಿದರು. ಎಲ್ಲ ಅಂಗಡಿಗಳ ಮಾಲೀಕರು, ಮಾರಾಟಗಾರರಿಗೂ ಎಚ್ಚರಿಕೆ ನೀಡಿ, ಯಾವುದೇ ಕಾರಣಕ್ಕೂ ಅಂಗಡಿಯ ಹೊರಗೆ ಮಾರಾಟದ ವಸ್ತುಗಳನ್ನು ಇಡಬಾರದು ಮತ್ತು ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮೇಯರ್ ಶಿಕುಮಾರ್, ಉಪಮೇಯರ್ ಲಕ್ಷ್ಮೇಶಂಕರ್ ನಾಯಕ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಆಯುಕ್ತ ಮಾಯಣ್ಣ ಗೌಡ, ಸ್ಥಳೀಯ ಕಾರ್ಪೊರೇಟರ್ ವಿಶ್ವನಾಥ್, ದೊಡ್ಡಪೇಟೆ ಸಬ್ ಇನ್‌ಸ್ಪೆಕ್ಟರ್, ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಖಾಸಗಿ ಬಸ್ ನಿಲ್ದಾಣದಲ್ಲಿ ಶಿವಮೊಗ್ಗ ಮಾನ ಹರಾಜು!
ಬೇರೆ ಜಿಲ್ಲೆಗಳಿಗೆ ಮಾದರಿಯಾಗುವ ಉದ್ದೇಶದಿಂದ ನಿರ್ಮಿಸಲಾಗಿದ್ದ ನಗರದ ಖಾಸಗಿ ಬಸ್ ನಿಲ್ದಾಣ ಈಗ ಶಿವಮೊಗ್ಗದ ಮಾನ ಹರಾಜು ಹಾಕುತ್ತಿದೆ. ಪ್ರಯಾಣಿಕರಿಗೆ ಉಪಯುಕ್ತ ಆಗಬೇಕಿದ್ದ ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರವಾಗಿದೆ.
ಪ್ರಯಾಣಿಕರಿಗಿಂತ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳ ಪ್ರವೇಶ ಹೆಚ್ಚಾಗಿದೆ. ಕತ್ತಲಾಗುತ್ತಿದ್ದಂತೆ ಕುಡುಕರ ಕಾಟ, ಆಶ್ರಯ ಅರಸಿ ಬರುವ ಭಿಕ್ಷುಕರ ಕೂಗಾಟ, ಪುಂಡರ ಪುಂಡಾಟಕ್ಕೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ.
ಶಿವಮೊಗ್ಗದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ...ಈ ಬಾರಿ ಶಿವಮೊಗ್ಗದಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?
ಬಸ್ ನಿಲ್ದಾಣದ ಒಳಹೊಕ್ಕರೆ ಸಾಕು ಭಿಕ್ಷುಕರು, ಅಸ್ವಸ್ಥರು ಎಲ್ಲೆಂದರಲ್ಲಿ ಗಲೀಜು ಮಾಡುತ್ತಾ, ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಅವರವರಲ್ಲೇ ಗಲಾಟೆ ಮಾಡುವುದು, ದಾರಿ ಹೋಕರಿಗೆ ಬಯ್ಯುವುದು ಇಲ್ಲಿ ಸರ್ವೆ ಸಾಮಾನ್ಯ. ಅನೈತಿಕ ವ್ಯವಹಾರಗಳಿಗೆ ಇಲ್ಲಿ ಕೊರತೆ ಇಲ್ಲ. ಇಷ್ಟೆಲ್ಲ ಅವ್ಯವಸ್ಥೆಗಳ ಆಗರವಾಗಿರುವ ಬಸ್ ನಿಲ್ದಾಣ ತನ್ನನ್ನು ಕಾಪಾಡುವಂತೆ ಸಾರ್ವಜನಿಕರು, ಪ್ರಯಾಣಿಕರು ಸಂಬಂಧಿಸಿದ ಅಧಿಕಾರಿಗಳ ಬಳಿ ನಿತ್ಯ ಬೇಡಿಕೊಳ್ಳುವಂತಾಗಿದೆ.