ಬೆಂಗಳೂರು: ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನಾಪ್ ಹಾಗೂ ಮರ್ಡರ್ ಪ್ರಕರಣ, ಮೃತನ ಸಂಬಂಧಿ ಅರೆಸ್ಟ್

Published : Mar 10, 2026, 03:38 PM IST
Anekal real estate agent murder

ಸಾರಾಂಶ

ಆನೇಕಲ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅವರ ಶವ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಈ ಸುಪಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತನ ಸಂಬಂಧಿ ಹಾಗೂ ಬ್ಯುಸಿನೆಸ್ ಪಾರ್ಟ್ನರ್ ಮೋಹನ್ ಬಾಬುವನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬೆಂಗಳೂರು: ಆನೇಕಲ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಮೋಹನ್ ಬಾಬುವನ್ನು ಬಂಧಿಸಿ ಮಂಗಳವಾರ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದರು. ಬಳಿಕ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೇ ವೇಳೆ ಹತ್ಯೆಯಾದ ವ್ಯಕ್ತಿಯ ಮೃತದೇಹವನ್ನು ಕುಟುಂಬಸ್ಥರು ಊರಿಗೆ ತರಲಾಗುತ್ತಿದ್ದರಿಂದ ಗ್ರಾಮದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿ ಆಸ್ಪತ್ರೆಗೆ

ಅಪಹರಣ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೋಹನ್ ಬಾಬುವನ್ನು ಪೊಲೀಸರು ಕೆಎಸ್ಆರ್‌ಪಿ ವಾಹನದಲ್ಲಿ ಕಟ್ಟು ನಿಟ್ಟಿನ ಭದ್ರತೆಯೊಂದಿಗೆ ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಆತನನ್ನು ಆನೇಕಲ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ನಂತರ ಆರೋಪಿಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ರೆಡ್ಡಿ ಅವರ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಆಸ್ಪತ್ರೆ ಹಾಗೂ ನ್ಯಾಯಾಲಯದ ಸುತ್ತಮುತ್ತ ಕಠಿಣ ಬಂದೋಬಸ್ತ್ ಕೈಗೊಂಡಿತ್ತು.

ಒಂದೆಡೆ ಆರೋಪಿಯ ವಿಚಾರಣೆ,ಇನ್ನೊಂದೆಡೆ ಮೃತದೇಹ ಗ್ರಾಮಕ್ಕೆ

ಇದೇ ವೇಳೆ ಹತ್ಯೆಗೀಡಾದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅಲಿಯಾಸ್ ಗೋಪಿ ಅವರ ಮೃತದೇಹವನ್ನು ಕುಟುಂಬಸ್ಥರು ಹೊನ್ನಕಳಸಾಪುರ ಗ್ರಾಮಕ್ಕೆ ತರಲಾಗುತ್ತಿತ್ತು. ಇದರಿಂದ ಗ್ರಾಮದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮದಲ್ಲಿಯೂ ಹೆಚ್ಚುವರಿ ಭದ್ರತೆ ಒದಗಿಸಿದ್ದರು.

ಘಟನೆ ಹಿನ್ನೆಲೆ

ಈ ಪ್ರಕರಣದಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅವರ ಶವ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಕೇರನಪಲ್ಲಿ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗೋಪಾಲ್ ಅವರ ಸಂಬಂಧಿಕರೇ ಸುಪಾರಿ ನೀಡಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಪಿಲ್ಲಮ್ಮ ಹಾಗೂ ಪತ್ನಿ ಸ್ವಾತಿ ಆರೋಪಿಸಿದ್ದರು.

ಮೃತ ಗೋಪಾಲ್ (38) ಆನೇಕಲ್ ತಾಲೂಕಿನ ಕಸಬಾ ಹೊನ್ನಕಳಸಾಪುರ ಗ್ರಾಮದ ನಿವಾಸಿಯಾಗಿದ್ದು, ಅವರ ಎದುರು ಮನೆಯಲ್ಲಿ ವಾಸಿಸುತ್ತಿದ್ದ ದೂರದ ಸಂಬಂಧಿ ಹಾಗೂ ಬಿಸಿನೆಸ್ ಪಾರ್ಟ್ನರ್ ಮೋಹನ್ ಬಾಬು ಎಂಬಾತನೇ ಕೊಲೆ ಸಂಚು ರೂಪಿಸಿ ಸುಪಾರಿ ನೀಡಿ ತನ್ನ ಮಗನನ್ನು ಹತ್ಯೆ ಮಾಡಿಸಿದ್ದಾನೆ ಎಂದು ಮೃತನ ತಾಯಿ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು

ಅಪಘಾತದಂತೆ ನಾಟಕ ಮಾಡಿ ಅಪಹರಣ

ಮಾರ್ಚ್ 7ರಂದು ಸಂಜೆ ಸುಮಾರು 7.30ರ ವೇಳೆಗೆ ಕರ್ಪೂರು ಗೇಟ್ ಬಳಿ ಗೋಪಾಲ್ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ ಮೂವರು ದುಷ್ಕರ್ಮಿಗಳು ಟಾಟಾ ಏಸ್ ವಾಹನದಿಂದ ಅವರ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದಂತೆ ನಾಟಕವಾಡಿದ್ದಾರೆ. ಬಳಿಕ ಗೋಪಾಲ್ ಅವರ ಮುಖಕ್ಕೆ ಸ್ಕಾರ್ಫ್ ಹಾಕಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿಕೊಂಡು ಹೋಗಿದ್ದರು.

ಈ ಕುರಿತು ಕುಟುಂಬಸ್ಥರು ತಕ್ಷಣವೇ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಅವರು ಆನೇಕಲ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಆರೋಪಿಗಳನ್ನು ಪತ್ತೆಹಚ್ಚಲು 9 ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ಏಳು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ತಮಿಳುನಾಡಿನಲ್ಲಿ ಶವ ಪತ್ತೆ

ಪೊಲೀಸರ ಒಂದು ವಿಶೇಷ ತಂಡ ತಮಿಳುನಾಡಿಗೆ ತೆರಳಿ ಅಪಹರಣಕಾರರು ಹಾಗೂ ಗೋಪಾಲ್ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಡೆಂಕಣಿಕೋಟೆ ಸಮೀಪದ ಪ್ರದೇಶದಲ್ಲಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿತ್ತು. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು.

ಕುಟುಂಬಸ್ಥರ ಆಕ್ರೋಶ

ಗೋಪಾಲ್ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಆನೇಕಲ್ ಪೊಲೀಸ್ ಠಾಣೆ ಮುಂದೆ ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಜಮಾಯಿಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಮಾತನಾಡಿದರು. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿ ಗೃಹ ಸಚಿವರ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು.

PREV
Read more Articles on
click me!

Recommended Stories

ಮಲ್ಲಮ್ಮನಿಗೆ ಟಿಕೆಟ್ ಮಷಿನ್‌ನಿಂದ ಹೊಡೆದ ಕಂಡಕ್ಟರ್; ಬಸ್ಸಿನಲ್ಲಿ ಸೀಟಿಲ್ಲವೆಂದು ಕೆಳಗೆ ಕುಳಿತಿದ್ದಕ್ಕೆ ಹಲ್ಲೆ!
Bengaluru: ಜಕ್ಕೂರು ವಿಲ್ಲಾ ಪಾರ್ಟಿ; ಗೋವಾದಿಂದ ಎಕ್ಸ್‌ಟೆಸಿ ಮಾತ್ರೆ ತರ್ತಿದ್ರು ನಿಖಿಲ್-ಡಿಕ್ಸನ್