
ರಾಮನಗರ: ಪ್ಲಾಸ್ಟಿಕ್ ಮುಕ್ತ ನಗರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ರಾಮನಗರ ನಗರಸಭೆ ಇದೀಗ ಬಟ್ಟೆ ಕೈಚೀಲ ನೀಡುವ ಯಂತ್ರಗಳನ್ನು ಅಳವಡಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ವ್ಯಾಪಾರ ವಹಿವಾಟು ಹಾಗೂ ಜನನಿಬಿಡ ಸ್ಥಳಗಳಲ್ಲಿ ಎನಿ ಟೈಮ್ ಕ್ಲಾತ್ ಬ್ಯಾಗ್ ವೆಂಡಿಂಗ್ ಮಷಿನ್ ಅನ್ನು ಅಳವಡಿಸುತ್ತಿದೆ. ಎಟಿಎಂ ಮಷಿನ್‌ನಲ್ಲಿ ಹಣ ತೆಗೆದುಕೊಳ್ಳುವ ಮಾದರಿಯಲ್ಲೇ ಇದರಿಂದ ಬಟ್ಟೆಯ ಚೀಲ ತೆಗೆದುಕೊಳ್ಳಬಹುದು. ಈ ಯಂತ್ರದಲ್ಲಿ 10 ರುಪಾಯಿ ನಾಣ್ಯ ಹಾಕಿದರೆ ಒಂದು ಬಟ್ಟೆ ಚೀಲ ಬರುತ್ತದೆ.
ಪ್ರಾಯೋಗಿಕವಾಗಿ ರಾಮನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಳವಡಿಸಿರುವ ಬಟ್ಟೆಯ ಕೈಚೀಲ ನೀಡುವ ಯಂತ್ರಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸೋಮವಾರ ಚಾಲನೆ ನೀಡಿದ್ದಾರೆ. ಇದು ಯಶಸ್ವಿಯಾದರೆ ನಗರದಲ್ಲಿ ಹೆಚ್ಚಾಗಿ ವ್ಯಾಪಾರ ವಹಿವಾಟು ನಡೆಯುವ 10ರಿಂದ 12 ಸ್ಥಳಗಳಲ್ಲಿ ಅಳವಡಿಸಲು ನಗರಸಭೆ ಚಿಂತನೆ ನಡೆಸಿದೆ.
ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಸ್ಥಳೀಯ ಸಂಸ್ಥೆಗಳು ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸುತ್ತಿವೆ. ಆದರೂ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಇದಕ್ಕೆ ಪರ್ಯಾಯವಾಗಿ ಬಟ್ಟೆಯಿಂದ ತಯಾರಿಸಿದ ಕೈ ಚೀಲಗಳನ್ನು ಬಳಸುವ ಮನಸ್ಥಿತಿ ಬೆಳೆಸಲು ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹಾಗೂ ಅಧಿಕಾರಿಗಳು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದಕ್ಕಾಗಿ ವಿನೂತನ ಪ್ರಯೋಗವಾಗಿ ‘ಕ್ಲಾತ್ ಬ್ಯಾಗ್ ವೆಂಡಿಂಗ್ ಮಷಿನ್''''(ಎಟಿಎಂ ಮಾದರಿ) ನಗರಸಭೆ ವತಿಯಿಂದ ಅಳವಡಿಸಲಾಗುತ್ತಿದೆ.
ಹುಬ್ಬಳ್ಳಿಯ ಶ್ರೀ ಇಂಡಸ್ಟ್ರೀಸ್ ತಯಾರಿಸಿರುವ ‘ಕ್ಲಾತ್ ಬ್ಯಾಗ್ ವೆಂಡಿಂಗ್ ಮಷಿನ್’ ಇದಾಗಿದ್ದು, ಒಂದು ಮಿಷಿನ್‌ಗೆ 1.90 ಲಕ್ಷ ರುಪಾಯಿ ವೆಚ್ಚ ತಗಲುತ್ತದೆ. ಈ ಕಂಪನಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆ, ಹುಬ್ಬಳ್ಳಿ - ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆ, ಕಾರವಾರ ನಗರಸಭೆ, ಹಾವೇರಿ ಜಿಲ್ಲೆಯ ಸವಣೂರು ಪುರಸಭೆ ಸೇರಿದಂತೆ ಹಲವೆಡೆ ಮಷಿನ್‌ಗಳನ್ನು ಅಳವಡಿಸಿದೆ.
ಈ ಯಂತ್ರದಲ್ಲಿ ಯುಪಿಐ ಪಾವತಿ ವ್ಯವಸ್ಥೆಯೂ ಇದೆ. 10 ರುಪಾಯಿ ಹಾಕಿದರೆ ಬಟ್ಟೆ ಬ್ಯಾಗ್ ಸಿಗುತ್ತದೆ. 2 ರುಪಾಯಿ ಮುಖ ಬೆಲೆಯ 5 ನಾಣ್ಯ, 5 ರುಪಾಯಿ ಮುಖ ಬೆಲೆಯ 2 ನಾಣ್ಯ, 10 ರುಪಾಯಿ ಮುಖ ಬೆಲೆ 1 ನಾಣ್ಯ ಹಾಕಿದರೆ ಒಂದು ಪರಿಸರ ಸ್ನೇಹಿ ಮರು ಬಳಕೆಯ ಬಟ್ಟೆ ಬ್ಯಾಗ್ ಸಿಗಲಿದೆ.
ಒಂದು ಬಾರಿ ಎಟಿಎಂನಲ್ಲಿ 100 ಕೈ ಚೀಲಗಳನ್ನು ಲೋಡ್ ಮಾಡಬಹುದಾಗಿದೆ. ಈ ಬಟ್ಟೆ ಬ್ಯಾಗ್‌ನಲ್ಲಿ 10 ಕೆಜಿ ತೂಕದಷ್ಟು ಹಣ್ಣು, ತರಕಾರಿ, ದಿನಸಿ ಪದಾರ್ಥಗಳನ್ನು ಒಯ್ಯಬಹುದಾಗಿದೆ. ವೆಂಡಿಂಗ್ ಮಷಿನ್ ನಿರ್ವಹಿಸಲು ಮತ್ತು ಬಟ್ಟೆ ಬ್ಯಾಗ್‌ಗಳನ್ನು ತಯಾರಿಸಿ ನೀಡಲು ಮಹಿಳಾ ಸ್ವಸಹಾಯ ಸಂಘಗಳನ್ನು ಬಳಸಿಕೊಳ್ಳಲು ನಗರಸಭೆ ಚಿಂತನೆ ನಡೆಸಿದೆ.
ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ ಹೇಳಿಕೆ
ಪ್ಲಾಸ್ಟಿಕ್ ಮುಕ್ತ ಸ್ವಚ್ಛ ರಾಮನಗರವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದೇವೆ. ಸರ್ಕಾರ ಪ್ಲಾಸ್ಟಿಕ್ ಅನ್ನು ಬ್ಯಾನ್ ಮಾಡಿದ್ದರೂ ಜನರು ಮಾತ್ರ ಬದಲಾಗುತ್ತಿಲ್ಲ. ಹೀಗಾಗಿ ನಗರಸಭೆ ಪರ್ಯಾಯ ಮಾರ್ಗವಾಗಿ ವೆಂಡಿಂಗ್ ಮಷಿನ್ ಪರಿಚಯಿಸುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ಇದನ್ನುಅಳವಡಿಸುತ್ತೇವೆ. ವರ್ತಕರು ಬಟ್ಟೆ ಬ್ಯಾಗ್ ಬಳಸುವಂತೆ ಗ್ರಾಹಕರಿಗೆ ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ಬಳಸಿದವರಿಗೆ ದಂಡ ವಿಧಿಸುವುದಲ್ಲದೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ.
ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ ಹೇಳಿಕೆ
ಪ್ಲಾಸ್ಟಿಕ್ ಬಳಕೆ ಇಡೀ ಜೀವ ಸಂಕುಲಕ್ಕೆ ಹಾನಿಕಾರಕ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಮತ್ತು ಮರು ಬಳಕೆ ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ‘ಕ್ಲಾತ್ ಬ್ಯಾಗ್ ವೆಂಡಿಂಗ್ ಯಂತ್ರ’ ಅಳವಡಿಸಲಾಗಿದೆ. ಜನ ಇದನ್ನು ಸದ್ಬಳಸಿಕೊಂಡು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು.
ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್
ಸುಬ್ರಹ್ಮಣ್ಯ, ಎಇಇ, ಪರಿಸರ ವಿಭಾಗ, ನಗರಸಭೆ, ರಾಮನಗರ
ನಗರದಲ್ಲಿ ಪ್ಲಾಸ್ಟಿಕ್ ಮಾರಾಟದ ವಿರುದ್ಧ ದಾಳಿ ನಡೆಸಿ ದಂಡ ವಿಧಿಸುತ್ತಿದ್ದೇವೆ. ಅಲ್ಲದೆ, ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಗಳ ಕುರಿತು ಅರಿವು ಮೂಡಿಸುವ ಜೊತೆಗೆ 8 ಸಾವಿರ ಮಹಿಳೆಯರಿಗೆ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಲಾಗಿದೆ. ದಂಡ ಮತ್ತು ಕೇಸು ಹಾಕುವುದು ಮಾತ್ರವಲ್ಲದೆ ಜನರಿಗೆ ಕಡಿಮೆ ಬೆಲೆಯಲ್ಲಿ ಬಟ್ಟೆ ಬ್ಯಾಗ್ ದೊರಕುವಂತೆ ಮಾಡಿದ್ದೇವೆ.
ಇದನ್ನೂ ಓದಿ: ಪ್ರತಿಷ್ಠಿತ ಶಾಲೆಗೂ ಮಂಡಿಯೂರಿಸಿದ ಜಲಮಂಡಳಿ: ₹12 ಕೋಟಿ ಶುಲ್ಕ ಪಾವತಿಸುವಂತೆ ಜೈನ್ ಶಾಲೆಗೆ ಹೈಕೋರ್ಟ್ ತಾಕೀತು!