
ಕಾರವಾರ (ಫೆ.14): ಇಲ್ಲಿನ ದೇವಗಡ ದ್ವೀಪದ ಬಳಿ ಶ್ರೀಂ ಫಿಶ್ ಪತ್ತೆಯಾಗಿದೆ. ಇದು ಹವಳದ ಬಂಡೆಗಳಲ್ಲಿ, ಸಮುದ್ರ ಕಳೆಯಲ್ಲಿ ಹೆಚ್ಚು ವಾಸಿಸುತ್ತವೆ.
ವೈಜ್ಞಾನಿಕವಾಗಿ ಅಯೋಲಿಸ್ಕಸ್ ಪಂಕ್ಚುಲಟಸ್ ಎಂದು ಕರೆಯುವ ಈ ಮೀನು ಸಮುದ್ರ ಕುದುರೆ (ಸೀ ಹಾರ್ಸ್) ಪ್ರಬೇಧಕ್ಕೆ ಸೇರಿದೆ. ಭಾರತದ ಪಶ್ಚಿಮ ಕರಾವಳಿ, ಆಫ್ರಿಕಾ ಖಂಡ, ಕೆಂಪು ಸಮುದ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣ ಸಿಗುತ್ತದೆ. ಆದರೆ ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಇದೇ ಮೊದಲ ಬಾರಿಗೆ ಕಂಡುಬಂದಿದೆ.
ಮೀನುಗಾರಿಕಾ ಬೋಟ್‌ಗೆ ಮೀನು ಡಿಕ್ಕಿ, ನೋಡಿದರೆ ಆಶ್ವರ್ಯ..! ಈ ಮೀನು ಅಂತಿಂಥದ್ದಲ್ಲ..! ..
ಸಮುದ್ರದಲ್ಲಿ 40 ಮೀ. ಕೆಳಗಿನವರೆಗೂ ಇರುತ್ತದೆ. ತಲೆ ಕೆಳಗಾಗಿ ಈಜುವುದು ಶ್ರೀಂ ಫಿಶ್‌ನ ವಿಶೇಷವಾಗಿದೆ. ರೆಕ್ಕೆ ಮುಳ್ಳುಗಳಿಂದ ಕೂಡಿರುತ್ತದೆ. 10ರಿಂದ 15 ಸೆಮೀವರೆಗೆ ಮಾತ್ರ ಉದ್ದವಿರುತ್ತದೆ. ತಿನ್ನಲು ಯೋಗ್ಯವಲ್ಲ. ತಲೆಕೆಳಗಾಗಿ ಈಜುವುದರಿಂದ ನೋಡಲು ಅಂದವಾಗಿ ಕಾಣುತ್ತದೆ. ಹೀಗಾಗಿ ಅಕ್ವೇರಿಯಂನಲ್ಲಿ ಇಡಲು ಹೆಚ್ಚಿನವರು ಇಷ್ಟಪಡುತ್ತಾರೆ.
ದೇವಗಡ ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಜನಾರ್ಧನ ಹರಿಕಂತ್ರ ಮಾಲಿಕತ್ವದ ಶ್ರೀಧನಲಕ್ಷ್ಮಿ ಬೋಟ್‌ನ ಬಲೆಗೆ 3-4 ಮೀನುಗಳು ಬಿದ್ದಿವೆ. ಶೆಟ್ಲಿ ಮೀನಿನ ಮರಿ, ಏಡಿ ಮರಿ, ಕ್ರಿಮಿಗಳನ್ನು ತಿಂದು ಬದುಕುತ್ತದೆ. ದೇವಗಡ ದ್ವೀಪದ ಸುತ್ತಮುತ್ತ ಹವಳದ ಚಿಕ್ಕ ಚಿಕ್ಕ ದಿಬ್ಬಗಳು ಇರುವುದರಿಂದ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಇದೇ ಮೊದಲ ಬಾರಿಗೆ ಶ್ರೀಂಫಿಶ್ ಕಂಡುಬಂದಿದೆ. ತಿನ್ನಲು ಯೋಗ್ಯವಲ್ಲ. ಆದರೆ ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ. ಅಕ್ವೇರಿಯಂನಲ್ಲಿ ಹೆಚ್ಚಾಗಿ ಇಡುತ್ತಾರೆ. ಮುಖ ಕೆಳಗೆ ಮಾಡಿ ಈಜುವುದು ಇದರ ವಿಶೇಷವಾಗಿದೆ.
ಡಾ. ಶಿವಕಮಾರ ಹರಗಿ, ಸಾಗರ ವಿಜ್ಞಾನಿ