‘ದಾನ ನಾಶ ಮಾಡಿದರೆ ಅಪಾರ ಪಾಪ’ ಕ್ರಿ.ಶ 800 ರ ಅಪರೂಪದ ಶಾಸನ ಪತ್ತೆ: ಕರಾವಳಿ ಇತಿಹಾಸಕ್ಕೆ ಸಿಕ್ಕಿತು ಹೊಸ ಬೆಳಕು!

Published : Aug 11, 2026, 03:13 PM IST
Kadageri inscription

ಸಾರಾಂಶ

ಹೊನ್ನಾವರದ ಕಡಗೇರಿ ಗ್ರಾಮದಲ್ಲಿ ಪತ್ತೆಯಾದ ಕ್ರಿ.ಶ 800ರ ಶಾಸನವು ಕರಾವಳಿ ಕರ್ನಾಟಕದ ಆರಂಭಿಕ ಕನ್ನಡ ಲಿಪಿ, ಹಳೆಗನ್ನಡ ಭಾಷೆ, ಮತ್ತು ದೇವಾಲಯದ ಆಡಳಿತದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಶಾಸನವು ದಾನ ವ್ಯವಸ್ಥೆ, ಕೃಷಿ ಆದಾಯ ಮತ್ತು ಅಂದಿನ ಸಾಮಾಜಿಕ ನಿಯಮಗಳನ್ನು ತಿಳಿಸುವ ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡಗೇರಿ ಗ್ರಾಮದ ವರಾಹವಿಷ್ಣುಮೂರ್ತಿ (Varahavishnumurthy Temple) ದೇವಾಲಯದ ಎದುರಿಗಿರುವ ಶಾಸನಶಿಲೆಯು ಕ್ರಿಶ ಸುಮಾರು 800ರ ಕಾಲದ್ದಾಗಿದ್ದು, (800 AD Halegannada inscription) ಕರಾವಳಿ ಕರ್ನಾಟಕದ ಆರಂಭಿಕ ಕನ್ನಡ ಲಿಪಿ (Kannada script evolution), ಹಳೆಗನ್ನಡ ಭಾಷೆ, ದೇವಾಲಯದ ಆಡಳಿತ, ಕೃಷಿ ಆದಾಯ ಹಾಗೂ ಧರ್ಮದಾನದ ವ್ಯವಸ್ಥೆಯನ್ನು ತಿಳಿಸುವ ಅಪರೂಪದ ದಾಖಲೆಯಾಗಿದೆ ಎಂದು ಅಂಕೋಲಾದ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ತಿಳಿಸಿದ್ದಾರೆ.

ದಾನವ್ಯವಸ್ಥೆಯ ಸ್ವರೂಪ ಸ್ಪಷ್ಟ

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಾಸನವನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಹಾಗೂ ಅದರ ಛಾಯಾಚಿತ್ರಗಳನ್ನು ಹಲವು ಬಾರಿ ಅವಲೋಕಿಸಿ ಪ್ರೊ. ಜಿ.ಕೆ. ದೇವರಾಜ ಸ್ವಾಮಿ ಅವರ ಜೊತೆಸೇರಿ ಸಿದ್ಧಪಡಿಸಿದ ಪಾಠದ ಆಧಾರದ ಮೇಲೆ ಲಿಪಿ, ಭಾಷೆ, ಶಿಲ್ಪ ಮತ್ತು ವಿಷಯ ವಸ್ತುಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗಿದೆ. ಈ ಎಲ್ಲ ಸಾಕ್ಷ್ಯಗಳನ್ನು ಪರಸ್ಪರ ಹೋಲಿಸಿದಾಗ ಶಾಸನದ ಕಾಲ, ಅದರ ಧಾರ್ಮಿಕ ಉದ್ದೇಶ ಹಾಗೂ ದಾನವ್ಯವಸ್ಥೆಯ ಸ್ವರೂಪ ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಕಪಿಲೆ ಗೋವುಗಳನ್ನು ದಾನ ಮಾಡಿದ ಪುಣ್ಯ

ಶಾಸನದ ಫಲಶ್ರುತಿಯಲ್ಲಿ ದಾನವನ್ನು ಕಾಯುವವರಿಗೆ ಸಾವಿರ ಕಪಿಲೆ ಗೋವುಗಳನ್ನು ದಾನ ಮಾಡಿದ ಪುಣ್ಯ ದೊರೆಯುತ್ತದೆ; ದಾನವನ್ನು ಹಾಳುಮಾಡುವವರಿಗೆ ಗೋವುಗಳನ್ನು ಕದ್ದ ಪಾಪ ತಗಲುತ್ತದೆ ಎಂದು ಹೇಳಲಾಗಿದೆ. ಇದು ಸಾಮಾನ್ಯ ನೀತಿವಾಕ್ಯವಲ್ಲ. ದಾನದ ಆದಾಯವನ್ನು ಬೇರೆಡೆಗೆ ತಿರುಗಿಸುವುದು, ನಿಗದಿತ ಸೇವೆಯನ್ನು ನಿಲ್ಲಿಸುವುದು ಅಥವಾ ಲಿಖಿತ ನಿಯಮ ಬದಲಿಸುವುದರ ವಿರುದ್ಧ ನೀಡಿದ ಕಠಿಣ ಎಚ್ಚರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ದಾನಶಾಸನವಲ್ಲ, ಆರಂಭಿಕ ಕನ್ನಡ ಲಿಪಿಯ ವಿಕಾಸ

ಕಡಗೇರಿ ಶಾಸನವು (Kadageri inscription) ಕೇವಲ ಒಂದು ದೇವಾಲಯದ ದಾನಶಾಸನವಲ್ಲ. ಆರಂಭಿಕ ಕನ್ನಡ ಲಿಪಿಯ ವಿಕಾಸ, ಹಳೆಗನ್ನಡದ ವ್ಯಾಕರಣ, ಕರಾವಳಿಯ ಕೃಷಿ ಅಳತೆಗಳು, ಬೆಳೆಪಾಲು, ಭೂಮಿ ಮತ್ತು ಹಣದ ದಾನ, ದೇವಾಲಯದ ನಿತ್ಯಸೇವೆ, ಸ್ವಾಧ್ಯಾಯ, ಸ್ಥಳೀಯ ಅಧಿಕಾರಿಗಳು ಹಾಗೂ ಪಟ್ಟೆಗಾರರ ಆಡಳಿತ ವನ್ನು ಒಂದೇ ದಾಖಲೆಯ ಮೂಲಕ ತಿಳಿಸುತ್ತದೆ. ಮೊದಲ ಸಹಸ್ರಮಾನದ ಉತ್ತರ ಕನ್ನಡ (uttara kannada) ಜಿಲ್ಲೆಯ ಇತಿಹಾಸವನ್ನು ಕಟ್ಟುವಲ್ಲಿ ಈ ಶಾಸನ ಪ್ರಮುಖ ಆಧಾರವಾಗಿದೆ ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ.

PREV
Read more Articles on
click me!

Recommended Stories

ರೇಣುಕಾಸ್ವಾಮಿ ಕೇಸ್: ಸಾಕ್ಷಿಗೆ ಬೆದರಿಕೆ ಪ್ರಕರಣದಲ್ಲಿ FSLನಿಂದ ಸ್ಫೋಟಕ ಸತ್ಯ, ಪ್ರಭಾವಿ ಮಹಿಳೆಯ ಹೆಸರು ಬೆಳಕಿಗೆ!
ಬೆಂಗಳೂರು ಕಂಠೀರವ ಸ್ಟುಡಿಯೋ ಬಳಿ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು!