
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆ ಮುಂದುವರಿದಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ಕೋರ್ಟ್ ಆವರಣದಲ್ಲೇ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಸಂದೀಪ್ ನೀಡಿದ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ನಟ ದರ್ಶನ್ ಕುಟುಂಬಕ್ಕೆ ಅತ್ಯಾಪ್ತನಾಗಿದ್ದುಕೊಂಡು ಸಾಕ್ಷಿಗೆ ಬೆದರಿಕೆ ಹಾಕಿದ್ದ ಪುನೀತ್, ಸುಹಾಸ್ ಹಾಗೂ ವೇಣು ಎಂಬ ಮೂವರನ್ನು ಬಂಧಿಸಿದ್ದರು. ಪುನೀತ್ ತನ್ನ ತಂಡದ ಮೂಲಕ ಸಾಕ್ಷಿ ಸಂದೀಪ್ ಅವರನ್ನು ಕಿಡ್ನಾಪ್ ಮಾಡಿ ಜೀವ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು.
ಸಂಶಯಾಸ್ಪದ ಕೃತ್ಯ ನಡೆದ ಸಮಯದಲ್ಲಿ ವಾಟ್ಸಾಪ್ ಕಾನ್ಫರೆನ್ಸ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿತ್ತು. FSL ವರದಿಯ ಆಧಾರದ ಮೇಲೆ, ಈ ಕಾನ್ಫರೆನ್ಸ್ ಕಾಲ್‌ನಲ್ಲಿ ಕಿರಣ್ ಮತ್ತು ಗೌರವ್ ಶೆಟ್ಟಿ ಎಂಬಿಬ್ಬರು ಸಕ್ರಿಯರಾಗಿದ್ದುದು ಪತ್ತೆಯಾಗಿದೆ. ಇವರಿಬ್ಬರೂ ಕಾಲ್‌ನಲ್ಲಿದ್ದುಕೊಂಡೇ ಪುನೀತ್ ಹಾಗೂ ಆತನ ತಂಡಕ್ಕೆ ಸಾಕ್ಷಿಯನ್ನು ಬೆದರಿಸುವ ಕುರಿತು ಮಾರ್ಗದರ್ಶನ ನೀಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಇಡೀ ಜಾಲದ ಹಿಂದೆ ಓರ್ವ ಪ್ರಭಾವಿ ಮಹಿಳೆ ಇರುವುದು ತನಿಖೆಯಲ್ಲಿ ಕಂಡುಬಂದಿದೆ. ಬೆದರಿಕೆ ಕೃತ್ಯಕ್ಕೂ ಮುನ್ನ ಪುನೀತ್‌ಗೆ ಈ ಪ್ರಭಾವಿ ಮಹಿಳೆಯಿಂದ ಕರೆ ಬಂದಿದ್ದು, ಗೌರವ್ ಶೆಟ್ಟಿ ಹೇಳಿದಂತೆ ನಡೆದುಕೊ ಎಂದು ಆಕೆಯೇ ಸೂಚನೆ ನೀಡಿದ್ದಳು ಎಂಬ ಮಾಹಿತಿ ಎಫ್‌ಎಸ್‌ಎಲ್ ವರದಿಯಿಂದ ಬಯಲಾಗಿದೆ. ಈ ಮಹಿಳೆಯೇ ಗೌರವ್ ಶೆಟ್ಟಿ, ಕಿರಣ್ ಹಾಗೂ ಪುನೀತ್ ಪಡೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಸಾಕ್ಷಿಗಳಿಗೆ ಬೆದರಿಕೆ ಹಾಕಿಸುತ್ತಿದ್ದಳು ಎಂಬುದು ಪೊಲೀಸ್ ತನಿಖೆಯಿಂದ ಧೃಡಪಟ್ಟಿದೆ.
ಪ್ರಕರಣದಲ್ಲಿ ಕಿರಣ್ ಹಾಗೂ ಗೌರವ್ ಶೆಟ್ಟಿ ಕೈವಾಡ ಸ್ಪಷ್ಟವಾಗಿರುವುದರಿಂದ ಅವರಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲು ಹಾಗೂ ಕಾನೂನು ಕ್ರಮ ಜರುಗಿಸಲು ಕಾಮಾಕ್ಷಿಪಾಳ್ಯ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ತಾಂತ್ರಿಕ ವರದಿ ಬರಬೇಕಿದ್ದು, ಆ ವರದಿ ಸಿಕ್ಕ ಬಳಿಕ ಈ ಪ್ರಕರಣದ ಹಿಂದಿರುವ ಪ್ರಭಾವಿ ಮಹಿಳೆ ಯಾರು ಹಾಗೂ ಆಕೆಯ ನಿಜವಾದ ಪಾತ್ರವೇನು ಎಂಬ ಸಂಪೂರ್ಣ ಸತ್ಯ ಹೊರಬರಲಿದೆ.