ಮಲ್ಪೆ ಬೀಚ್‌ನಲ್ಲಿ ಅಪರೂಪದ ಸ್ಪಾನರ್ ಏಡಿ ಬಲೆಗೆ ಬಿದ್ದಿದ್ದು, ಈ ಏಡಿ 1 ಕೆಜಿಯಷ್ಟು ತೂಗುತ್ತದೆ. ಇದರ ಗಾತ್ರ, ಬಣ್ಣ ಮತ್ತು ದೇಹ ರಚನೆಯೇ ವಿಭಿನ್ನ ಮತ್ತು ಆಕರ್ಷಕ.
ಉಡುಪಿ(ಜ.29): ಅಪರೂಪದ ಕಪ್ಪೆ ಏಡಿ ಅಥವಾ ಸ್ಪಾನರ್ ಏಡಿ ಮಲ್ಪೆಯ ಮೀನುಗಾರರ ಬಲೆಗೆ ಬಿದ್ದಿದ್ದು, ಅದರ ಗಾತ್ರ ಮತ್ತು ಬಣ್ಣಗಳಿಂದಾಗಿ ಮಂಗಳವಾರ ಮಲ್ಪೆ ಬಂದರಿನಲ್ಲಿ ಅದು ಬಹಳ ಕುತೂಹಲಕ್ಕೆ ಕಾರಣವಾಯಿತು.
ನೋಡುವುದಕ್ಕೆ ಕಪ್ಪೆಯಂತೆ ಕಾಣುವುದರಿಂದ ಮತ್ತು ಅದರ ಮುಂಗಾಲುಗಳು ಸ್ಪಾನರ್‌ನಂತೆ ಕಾಣುವುದರಿಂದ ಅದನ್ನು ಆ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಸ್ವಾದಿಷ್ಟಆಹಾರವಾಗಿ ಬಳಕೆಯಾಗುತ್ತದೆ. ಮೀನುಗಾರ ಪ್ರಶಾಂತ್ ಕುಂದರ್ ಅವರು ಈ ಏಡಿಯ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.
ಏಡಿಗಳಿಂದ ಡ್ಯಾಂ ಒಡೀತು ಎಂದ ಸಚಿವರ ಮನೆ ಮುಂದೆ ಏಡಿ ಸುರಿದು ಪ್ರತಿಭಟನೆ!
ಈ ಹಿಂದೆಯೂ ಮಲ್ಪೆ ಮೀನುಗಾರರಿಗೆ ಈ ಏಡಿ ಬಲೆಗೆ ಬಿದ್ದದ್ದಿದೆ, ಆದರೆ ಬೇರೆ ಏಡಿಗಳಿಗೆ ಹೋಲಿಸಿದರೆ ಇದು ಅಪರೂಪ. ಆದರೆ ಈ ಬಾರಿ ಸಿಕ್ಕ ಏಡಿ ಗಾತ್ರದಲ್ಲಿ ದೊಡ್ಡದಿತ್ತು ಎಂದು ಮೀನುಗಾರರು ತಿಳಿಸಿದ್ದಾರೆ.
ಈ ಏಡಿಯ ವೈಜ್ಞಾನಿಕ ಹೆಸರು ರನಿನಾ ರನಿನಾ. ಆಫ್ರಿಕಾ ಮತ್ತು ಹವಾಯಿ ದ್ವೀಪ, ಹಾಗೆಯೇ ಗ್ರೇಟ್ ಬ್ಯಾರಿಯರ್ ರೀಫ್‌ಗಳಲ್ಲಿ ಸಾಮಾನ್ಯವಾಗಿ ಸಿಗುವ ಏಡಿ ಇದಾಗಿದ್ದು, ಕರ್ನಾಟಕದ ಕಡಲತೀರಕ್ಕೆ ಅಪರೂಪಕ್ಕೆ ಕಾಣಸಿಗುತ್ತದೆ.
ಸಮುದ್ರದ ಮರಳು ಇರುವ ತಳದಲ್ಲಿ 100 ಮೀ. ಆಳದವರೆಗೆ ಜೀವಿಸುತ್ತದೆ. ಏಳರಿಂದ ಒಂಭತ್ತು ವರ್ಷಗಳವರೆಗೆ ಇದರ ಜೀವಿತಾವಧಿಯಾಗಿದ್ದು 400- 900 ಗ್ರಾಂ ತೂಕ ಹೊಂದಿರುತ್ತದೆ. ಸಿಗಡಿ, ಕಪ್ಪೆಚಿಪ್ಪು ಮುಂತಾದ ಮೀನುಗಳನ್ನು ತಿನ್ನುವ ಈ ಏಡಿಗೆ ಆಸ್ಪ್ರೇಲಿಯಾದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಇವು ಸಹಜವಾಗಿ ಸಿಗಡಿ ಟ್ರಾಲಿಂಗ್ ಮೀನುಗಾರಿಕೆಯ ಸಮಯದಲ್ಲಿ ರಾತ್ರಿ ವೇಳೆಯಲ್ಲಿ ಕಂಡುಬರುತ್ತವೆ. 2006ರಲ್ಲಿ ಪಂಬನ್ ಕಡಲ ತೀರದಲ್ಲಿ ದೊರಕಿದ ಮಾಹಿತಿ ಉಲ್ಲೇಖವಿದೆ.