'ಗೂಟದ ಕಾರು ಬೇಕೆನ್ನುವವರಿಗೆ ಸಚಿವ ಸ್ಥಾನ ಕೊಡಲೇಬೇಡಿ'

By Kannadaprabha NewsFirst Published Jan 29, 2020, 7:32 AM IST
Highlights

ವಿಧಾನಸೌಧದಲ್ಲೇ ಕೂರುವವರಿಗೆ ಸಚಿವ ಸ್ಥಾನ ಬೇಡ: ಯತ್ನಾಳ್‌| ಸಚಿವ ಸ್ಥಾನಕ್ಕಾಗಿ ಲಾಬಿ ನಡೆಯುತ್ತಿದೆ. ಸಚಿವ ಸ್ಥಾನಕ್ಕೆ ಲಾಬಿ ನಡೆಸಬಾರದು| ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಂದು ವೇಳೆ ನಾನು ಆಕಾಂಕ್ಷಿಯಾಗಿದ್ದರೆ ಈ ರೀತಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ|

ಹುಬ್ಬಳ್ಳಿ(ಜ.29): ವಿಧಾನಸೌಧದಲ್ಲಿ ಕುಳಿತುಕೊಳ್ಳುವವರಿಗೆ, ಗೂಟದ ಕಾರು ಬೇಕೆನ್ನುವವರಿಗೆ ಸಚಿವ ಸ್ಥಾನ ಕೊಡಬೇಡಿ. ಕೆಲಸ ಮಾಡುವ ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದು ಆಗ್ರಹಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಸಚಿವ ಸಂಪುಟವನ್ನು ಶುಕ್ರವಾರದೊಳಗೆ ವಿಸ್ತರಿಸಬೇಕು. ಇದಕ್ಕಾಗಿ ಕೆಲ ಹಿರಿಯರು ತ್ಯಾಗ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

"

ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಯುತ್ತಿದೆ. ಸಚಿವ ಸ್ಥಾನಕ್ಕೆ ಲಾಬಿ ನಡೆಸಬಾರದು. ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಂದು ವೇಳೆ ನಾನು ಆಕಾಂಕ್ಷಿಯಾಗಿದ್ದರೆ ಈ ರೀತಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ಕೂಡ ಹಿರಿಯ ಶಾಸಕ. ನಾನು ತ್ಯಾಗ ಮಾಡಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕೆಲ ಹಿರಿಯರು ತ್ಯಾಗ ಮನೋಭಾವ ಪ್ರದರ್ಶಿಸಬೇಕು. ಮೊದಲಿಗೆ ಬೇರೆ ಪಕ್ಷದಿಂದ ಬಂದವರಿಗೆ ಸಚಿವ ಸ್ಥಾನ ಸಿಗುವಂತಾಗಬೇಕು ಎಂದರು.

ಎಚ್‌ಡಿಕೆ ಸೃಷ್ಟಿಸಿದ ಪೌಡರ್‌:

ಈ ಮಿಣಿ ಮಿಣಿ ಪೌಡರ್‌ ಎಲ್ಲಿತ್ತೋ? ಏನೋ? ನಾನಂತೂ ಈವರೆಗೂ ನೋಡಿಲ್ಲ. ಇದು ಕುಮಾರಸ್ವಾಮಿ ಸೃಷ್ಟಿಸಿದ ಪೌಡರ್‌ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜೆಪಿಯವರು ಮಾತನಾಡಿದರೆ ವಿಕೃತಿ ಮನಸಿನವರು ಎಂದು ಹೇಳ್ತಾರೆ. ಕುಮಾರಸ್ವಾಮಿ ಅವರದ್ದು ಸುಕೃತಿ ಮನಸೇ ಎಂದು ಪ್ರಶ್ನಿಸಿದ ಅವರು, ಹಾಗೆ ನೋಡಿದರೆ ಅವರದೇ ವಿಕೃತಿ ಮನಸು. ಬರೀ ಅವರ ಸಿ.ಡಿ. ಬಿಡುಗಡೆ ಮಾಡ್ತೇನೆ. ಇವರ ಸಿ.ಡಿ. ಬಿಡುಗಡೆ ಮಾಡ್ತೇನೆ ಅಂತಾ ಹೇಳುತ್ತಾ ಇರುತ್ತಾರೆ. ಇದೇನು ಸುಕೃತಿ ಮನಸಿನವರು ಹೇಳುವ ಮಾತಾ? ಎಂದು ಪ್ರಶ್ನಿಸಿದ ಅವರು, ನಮ್ಮ ಬಳಿಯೂ ಸಿ.ಡಿ.ಗಳಿವೆ. ಕುಮಾರಸ್ವಾಮಿ ಏನೇನು ಮಾಡ್ತಾರೆ ಎಂಬುದು ನಮಗೂ ಗೊತ್ತಿದೆ. ನಮಗೂ ಸಿ.ಡಿ. ಬಿಡುಗಡೆ ಮಾಡೋಕೆ ಬರುತ್ತೆ ಎಂದು ಎಚ್ಚರಿಕೆ ನೀಡಿದರು.

ವಿದೇಶಿ ಹಣ:

ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೇನಾಮಿ ಹಣ ಬರುತ್ತಿದೆ ಎಂಬ ಮಾಹಿತಿ ಇದೆ. ಇದು ಆತಂಕಕಾರಿ. ಈ ಬಗ್ಗೆ ತನಿಖೆಯಾಗಬೇಕು ಎಂದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಯಾವ ನಾಗರಿಕನಿಗೂ ತೊಂದರೆಯಿಲ್ಲ. ಆದರೆ, ವಿನಾಕಾರಣ ಗುಲ್ಲು ಹಬ್ಬಿಸುತ್ತಿದ್ದಾರಷ್ಟೇ. ಪಾಕಿಸ್ತಾನ, ಬಾಂಗ್ಲಾ, ಅಷ್ಘಾನಿಸ್ತಾನಗಳಿಂದ ಬಂದ ಅಲ್ಪಸಂಖ್ಯಾತರಿಗೆ ಅನುಕೂಲವಾಗುತ್ತದೆ ಎಂದರು.
 

click me!