ಕೊಡಗಿನಲ್ಲಿ ಜೋರು ಕಾಕಡ ಏಡಿ ಸಾರು

Crab special in kodagu
Highlights

ಏಡಿಬೇಟೆಯ ಯುವಕರ ತಂಡ ಕೋಳಿಯ ಬೋಟಿಯ ಮೂಲಕ ಏಡಿ ಹಿಡಿಯುತ್ತಾರೆ. ಮರದ ತುಂಡಿನಲ್ಲಿ ಕೋಳಿಯ ಬೋಟಿಯನ್ನು ಬಿಗಿಯಾಗಿ ತಂತಿಯಲ್ಲಿ ಕಟ್ಟಲಾಗುತ್ತದೆ. ಹೊಳೆಯ ಬದಿಗೆ ಆ ಮರದ ತುಂಡನ್ನು ತಮಗೆ ಕಾಣುವಂತೆ ಬಿಡುತ್ತಾರೆ.ವಾಸನೆಯನ್ನು ಗ್ರಹಿಸಿ ಕೆಲವೇ ಕ್ಷಣಗಳಲ್ಲಿ ಏಡಿಗಳು ಬರುತ್ತದೆ. ಹತ್ತಾರು ಏಡಿಗಳು ಆಹಾರ ತಿನ್ನಲು ಬಂದಿರುತ್ತದೆ.

ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹಳ್ಳ ಕೊಳ್ಳಗಳು ತುಂಬಿರುವುದರಿಂದ ಏಡಿಗಳು ಕಾಣ ಸಿಗುವುದು ಸಾಮಾನ್ಯ. ಭತ್ತದ ಗದ್ದೆಯಲ್ಲಿ, ಹಳ್ಳಕೊಳ್ಳಗಳಲ್ಲಿ ಸಿಗುವ ಕಾಕಡ ಏಡಿ ಮಳೆಗಾಲದ ರುಚಿಕರ ಖಾದ್ಯ. ಏಡಿಗಳನ್ನು ಸುಟ್ಟು, ಫ್ರೈ ಮಾಡಿ ತಿನ್ನುವುದು ಇಲ್ಲಿನ ಗ್ರಾಮೀಣ ಜನರ ಹವ್ಯಾಸ. ಇದು ಮಳೆಗಾಲದಲ್ಲಿ ದೇಹದ ಉಷ್ಣತೆಯನ್ನು ಕಾಪಾಡುತ್ತದೆ.

ಏಡಿಯಲ್ಲಿ ಔಷಧೀಯ ಗುಣಗಳಿರುವುದರಿಂದ ಶೀತ, ನೆಗಡಿ ಮುಂತಾದ ಖಾಯಿಲೆ ವಾಸಿಯಾಗುತ್ತದೆ. ಕೋಳಿಬೋಟಿಯಲ್ಲಿ ಏಡಿ ಬೇಟೆ ಏಡಿಬೇಟೆಯ ಯುವಕರ ತಂಡ ಕೋಳಿಯ ಬೋಟಿಯ ಮೂಲಕ ಏಡಿ ಹಿಡಿಯುತ್ತಾರೆ. ಮರದ ತುಂಡಿನಲ್ಲಿ ಕೋಳಿಯ ಬೋಟಿಯನ್ನು ಬಿಗಿಯಾಗಿ ತಂತಿಯಲ್ಲಿ ಕಟ್ಟಲಾಗುತ್ತದೆ. ಹೊಳೆಯ ಬದಿಗೆ ಆ ಮರದ ತುಂಡನ್ನು ತಮಗೆ ಕಾಣುವಂತೆ ಬಿಡುತ್ತಾರೆ.ವಾಸನೆಯನ್ನು ಗ್ರಹಿಸಿ ಕೆಲವೇ ಕ್ಷಣಗಳಲ್ಲಿ ಏಡಿಗಳು ಬರುತ್ತದೆ. ಹತ್ತಾರು ಏಡಿಗಳು ಆಹಾರ ತಿನ್ನಲು ಬಂದಿರುತ್ತದೆ. ನಂತರ ಮರದ ತುಂಡನ್ನು ಮೆಲ್ಲನೆ ಎತ್ತಲಾಗುತ್ತದೆ.

ಈ ವೇಳೆ ಏಡಿಗಳು ಬೋಟಿಯನ್ನು ತಿನ್ನುತ್ತಿರುತ್ತವೆ. ಆಗ ಬೇಟೆಗಾರರು ಮೆಲ್ಲನೆ ಏಡಿಯನ್ನು ಒಂದೊಂದಾಗಿ ಹಿಡಿಯುತ್ತಾರೆ. ಈ ವೇಳೆ ಏಡಿಗಳು ತಪ್ಪಿಸಿಕೊಂಡರೂ ಮತ್ತೆ ಅದೇ ಸ್ಥಳಕ್ಕೆ ಬಂದಿರುತ್ತವೆ.

ದಂಡೆಯಲ್ಲೇ ಅಡುಗೆ 

ಹೀಗೆ ಹಿಡಿದ ಏಡಿಗಳನ್ನು ಹೊಳೆ, ನದಿ ದಂಡೆಯಲ್ಲೇ ಫ್ರೈಮಾಡಿ ತಿನ್ನುತ್ತಾರೆ. ಮುಂಚಿತವಾಗಿಯೇ ಏಡಿ ಫ್ರೈ ಮಾಡಲು ಉಪ್ಪು, ಖಾರವನ್ನು ತಂದು ಸಿದ್ಧಪಡಿಸಲಾಗಿರುತ್ತದೆ. ನಂತರ ಬೆಂಕಿ ಹಾಕಿ ಪಾತ್ರೆಯಲ್ಲಿ ಅದನ್ನು ಬೇಯಿಸಲಾಗುತ್ತದೆ. ಕೆಲವೊಬ್ಬರು ಬೆಂಕಿಯಲ್ಲಿ ಹಾಗೆ ಸುಟ್ಟು ತಿನ್ನುತ್ತಾರೆ.

ಗದ್ದೆಗಳಲ್ಲೂ ಬಣ್ಣದ ಏಡಿ

ಕೊಡಗು ಜಿಲ್ಲೆಯಲ್ಲಿನ ಭತ್ತದ ಗದ್ದೆಗಳಲ್ಲಿ ಬಣ್ಣದ ಏಡಿ ಸಿಗುತ್ತದೆ. ಈ ಏಡಿ ಗಾತ್ರದಲ್ಲಿ ತೀರಾ ಪುಟ್ಟದಾಗಿದ್ದು ಇದಕ್ಕೆ ಬೇಡಿಕೆ ಹೆಚ್ಚು.ಬಿಲದೊಳಗೆ ಕೈಹಾಕಿ ಸುಲಭವಾಗಿ ಇದನ್ನು ಹಿಡಿಯಬಹುದು. ಮಕ್ಕಳೂ ಹಿಡಿದು ಸುಟ್ಟು ತಿನ್ನುತ್ತಾರೆ. ರಾಸಾಯನಿಕ ಗೊಬ್ಬರ ಹಾಕುವುದರಿಂದ, ಭತ್ತದಗದ್ದೆಯಲ್ಲಿ ಶುಂಠಿ ಬೆಳೆಯುವುದರಿಂದ ಏಡಿಗಳ ಸಂತತಿ ಕ್ಷೀಣಿಸುತ್ತಿದೆ.

ಹೆಚ್ಚಿನ ಬೆಲೆಗೆ ಮಾರಾಟ
ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಹಿಡಿದು ತಂದ ಜೀವಂತ ಏಡಿಗಳನ್ನು ಮಡಿಕೇರಿ ಸೇರಿದಂತೆ ವಿವಿದೆಡೆ ಮಾರುತ್ತಾರೆ. ಕೆ.ಜಿಗೆ 250 ರುಗಳಷ್ಟು ಬೆಲೆ ಇದೆ. ಹೊಳೆ ಮೀನು ಭರ್ಜರಿ ಬೇಟೆ  ಏಡಿಯಂತೆ ಮಳೆಗಾಲದಲ್ಲಿ ಹೊಳೆ ಹಾಗೂ ನದಿಗಳಲ್ಲಿ ಮೀನಿನ ಬೇಟೆ ಭರ್ಜರಿಯಾಗಿ ನಡೆಯುತ್ತದೆ. ಎರೆಹುಳುವನ್ನು ಬಳಸಿ ಗಾಳದ ಮೂಲಕ ಮೀನನ್ನು ಹಿಡಿಯಲಾಗುತ್ತದೆ. ಹೆಚ್ಚು ಮಳೆಯಾದ ಸಂದರ್ಭ ನದಿ ಹಾಗೂ ಹೊಳೆ ಸಮೀಪದ ಗದ್ದೆಗಳಲ್ಲಿ ಮೀನುಗಳು ಸಾಮಾನ್ಯವಾಗಿ ಕಾಣಸಿಗುತ್ತದೆ. ಇದರಿಂದ ಗದ್ದೆಯಲ್ಲೇ ಮೀನು ಬೇಟೆ ಮಾಡಲಾಗುತ್ತದೆ. 

-ವಿಘ್ಣೇಶ್ ಎಂ ಭೂತನಕಾಡು 

loader