Kolar : ಮಾಜಿ ಸ್ಪೀಕರ್‌ ಕೈ ಮುಖಂಡ ರಮೇಶ್‌ ಕುಮಾರ್‌ ಬೇಸರ

By Kannadaprabha NewsFirst Published Nov 4, 2021, 3:00 PM IST
Highlights
  • ಕೋಲಾರ- ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್ ಹತ್ತು ವರ್ಷಗಳ ಕಾಲ ಬಾಗಿಲು ಬಂದ್
  • ವಿನಾ ಕಾರಣ ಕೋಲಾರ- ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್ ಬಗ್ಗೆ ಆರೋಪ
  •   ಮಾಜಿ ಸ್ಪೀಕರ್‌ ಕೈ ಮುಖಂಡ ರಮೇಶ್‌ ಕುಮಾರ್‌ ಬೇಸರ

ಶ್ರೀನಿವಾಸಪುರ(ನ.04):  ಕೋಲಾರ- ಚಿಕ್ಕಬಳ್ಳಾಪುರ (Kolar - chikkaballapura) ಸಹಕಾರಿ ಬ್ಯಾಂಕಿಗೆ (Bank) ಹತ್ತು ವರ್ಷಗಳ ಕಾಲ ಬಾಗಿಲಿಗೆ ಮುಳ್ಳು ಹಾಕಿದಾಗ ಅದರ ಬಗ್ಗೆ ಕಿಂಚಿತ್ತು ಯೋಚನೆ ಮಾಡದವರು ವಿನಾ ಕಾರಣ ಅದರ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. ಯಾರು ಎಷ್ಟೇ ಆರೋಪಗಳನ್ನು ಮಾಡಿದರೂ ಡಿ.ಸಿ.ಸಿ. ಬ್ಯಾಂಕ್‌ (DCC Bank) ರಥ ಇದ್ದಂಗೆ ಅದರ ಉತ್ಸವ ಮೂರ್ತಿಗಳು ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಮತ್ತು ರೈತರು ನಿರಂತರವಾಗಿ ಪ್ರತಿವರ್ಷ ರಥೋತ್ಸವವನ್ನು ಮುಂದುವರೆಸಿ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ (Ramesh Kumar) ತಿಳಿಸಿದರು.

ಪಟ್ಟಣದ ಬಾಲಕಿಯರ ಕಾಲೇಜು (College) ಆವರಣದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಮತ್ತು ಶೂನ್ಯ ಬಡ್ಡಿಯಲ್ಲಿ ರೈತರಿಗೆ ಸಾಲ (farm loan) ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಸಾಲ ಮರುಪಾವತಿ ಮಾಡಿ ಹೊಸ ಸಾಲ ನೀಡಲು ತಡವಾಗಿದ್ದಕ್ಕೆ ಕ್ಷಮೆಯಾಚನೆ ಮಾಡಿದ ಶಾಸಕರು, ಸೋಮಯಾಜಲಪಲ್ಲಿ, ಗೌನಿಪಲ್ಲಿ, ರಾಯಲ್ಪಾಡು, ಯಲ್ದೂರು ಸೊಸೈಟಿಗಳ ವ್ಯಾಪ್ತಿಗೆ ಬರುವ 175 ಸಂಘಗಳ 1700 ಕುಟುಂಬಗಳಿಗೆ ಮತ್ತು ಶೂನ್ಯ ಬಡ್ಡಿಯಲ್ಲಿ ರೈತರಿಗೆ 1300 ಕುಟುಂಬಗಳಿಗೆ 22 ಕೋಟಿ ರು.ಗಳ ಸಾಲವನ್ನು ಮಂಜೂರು ಮಾಡಲಾಗಿದೆ. ಬ್ಯಾಂಕ್‌ ರಜೆ (Bank holiday) ಇರುವ ಕಾರಣ ಎ.ಟಿ.ಎಂ. ಮೂಲಕ ಹಣವನ್ನು (money) ಪಡೆದುಕೊಳ್ಳಬಹುದು ದೀಪಾವಳಿ ಹಬ್ಬದ (Deepavali) ದಿವಸ ಸಂತೋಷವಾಗಿ ಎಲ್ಲರೂ ಹಬ್ಬವನ್ನು ಆಚರಣೆ ಮಾಡಿಕೊಳ್ಳುವ ದೃಷ್ಟಿಯಿಂದ ಸಾಲವನ್ನು ನೀಡಲಾಗುತ್ತಿದೆ ಎಂದರು.

ಕೆಲವರಿಗೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಟೀಕೆ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ. ಈ ತಾಲೂಕಿನಲ್ಲಿ ಪ್ರಾಜೆಕ್ಟ್ ಯೋಜನೆಯಲ್ಲಿ 18 ಸಾವಿರ ಮನೆಗಳನ್ನು ಹಾಗೂ ಶೂನ್ಯ ಬಡ್ಡಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಣೆ ಯೋಜನೆ ಜಾರಿಗೆ ತಂದಾಗ ಟೀಕೆ ಮಾಡಿದರು. 25 ಸಾವಿರದಿಂದ 50 ಸಾವಿರದವರೆಗೆ ಏರಿಕೆ ಮಾಡಲಾಯಿತು. ಇದು ಮುಂದಿನ ದಿನಗಳಲ್ಲಿ 1 ಲಕ್ಷಕ್ಕೆ ಏರಿಕೆಯಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಸ್ತ್ರೀ ಶಕ್ತಿ ಸಂಘಗಳವರಿಗೆ 1 ರಿಂದ 1.50 ಲಕ್ಷ ರು.ಗಳ ಹಾಗೂ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಈಗ ನೀಡುತ್ತಿರುವ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡೇ ತೀರುತ್ತೇನೆ ಎಂಬ ಆಶ್ವಾಸನೆಯನ್ನು ನೀಡಿದರು.

ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಮಾತನಾಡಿ, ಡಿ.ಸಿ.ಸಿ. ಬ್ಯಾಂಕ್‌ ವಿಚಾರವಾಗಿ ನನ್ನ ಬಗ್ಗೆ ನೂರು ಬಾರಿ ಮಾತನಾಡಲಿ ನನಗೆ ಬೇಜಾರಿಲ್ಲ ವಿನಾಃ ಕಾರಣ ಪ್ರತಿದಿನ ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ನಾನು ಮಾಡುತ್ತಿರುವ ತಪ್ಪೇನು ಎಂಬುದರ ಬಗ್ಗೆ ಸ್ತ್ರೀ ಶಕ್ತಿ ಸಂಘದ ಸದಸ್ಯರೆ ಉತ್ತರ ನೀಡಲಿ. ಇಡಿ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಎ.ಟಿ.ಎಂ. ಕಾರ್ಡ್‌ (ATM Card) ನೀಡಿರುವುದು ಕೋಲಾರ ಬ್ಯಾಂಕಿನಲ್ಲಿ ಮಾತ್ರ. ನಿಮ್ಮ ಸಾಲದ ಹಣವನ್ನು ನಿಮ್ಮ ಖಾತೆಗೆ ಹಾಕುತ್ತಿದ್ದರೂ ನಾನು ಭ್ರಷ್ಟಎಂದು ಆರೋಪ ಮಾಡುತ್ತಿದ್ದಾರೆ ಎಂದು ಸವಾಲು ಹಾಕಿದರು.

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿ.ಸಿ.ಸಿ. ಬ್ಯಾಂಕ್‌ (DCC Bank) ನಿರ್ದೇಶಕರಾದ ವೆಂಕಟರೆಡ್ಡಿ, ಎಸ್‌.ವಿ. ಸುಧಾಕರ್‌, ಪಿ.ಎಲ್‌.ಡಿ. ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ಕೋಚಿಮುಲ್‌ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಮಂಜುನಾಥರೆಡ್ಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ರೆಡ್ಡಿ, ಅಕ್ಬರ್‌ ಷರೀಫ್‌, ಬಿ.ಜಿ. ಸೈಯ್ಯದ್‌ ಖಾದರ್‌, ಕೃಷ್ಣಾರೆಡ್ಡಿ, ಕೆ.ಕೆ. ಮಂಜು, ಅನೀಸ್‌ ಅಹಮದ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗನಾಳ ಸೋಮಣ್ಣ ಇದ್ದರು.

ತಪ್ಪು ಮಾಡಿಲ್ಲ ಎಂದರೆ ಮಾತನಾಡುವವರಿಗೆ ಹೆದರಬೇಕಾಗಿಲ್ಲ. ಮಾತನಾಡುವವರು ಇದ್ದರೆ ವ್ಯವಸ್ಥೆ ಸರಿ ಇರುತ್ತದೆ. ತಪ್ಪು ಮಾಡದೆ ಧೈರ್ಯವಾಗಿ ಹೆದರದೆ ಕೆಲಸ ಮಾಡಿ.

-ಎನ್‌.ಜಿ. ಬ್ಯಾಟಪ್ಪ, ಕೋಚಿಮುಲ್‌ ಮಾಜಿ ಅಧ್ಯಕ್ಷ.

ಕಣ್ಣೀರಿಟ್ಟರಮೇಶ್‌ ಕುಮಾರ್‌:  ಸಾಲ ವಿತರಣೆ ಕಾರ್ಯಕ್ರಮದಲ್ಲಿ ಒಂದು ವಾರಗಳ ಹಿಂದೆ ಕಾರ್ಯಕ್ರಮ ನಡೆಯಬೇಕಾಗಿತ್ತು. ನನ್ನ ಪತ್ನಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ತಡವಾಯಿತು. ಸಾರ್ವಜನಿಕ ಜೀವನದಲ್ಲಿ ಎಂದು ಕಾಣಿಸಿಕೊಂಡವಳಲ್ಲ. ಶಸ್ತ್ರ ಚಿಕಿತ್ಸೆಗೆ ಹೋಗುವ ಮುನ್ನ ನನ್ನ ಕೈಹಿಡಿದು ಹತ್ತು ಜನಕ್ಕೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಿ ಭ್ರಷ್ಟಾಚಾರಕ್ಕೆ ಸಹಾಯ ಮಾಡಬೇಡಿ. ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಬೇಡಿ ಎಂದು ಸಲಹೆ ಮಾಡಿದ ವಿಷಯವನ್ನು ತಿಳಿಸುತ್ತಾ ಗದ್ಗರಿತರಾದರು. ಆಗ ಸಭೆಯಲ್ಲಿ ನೆರೆದಿದ್ದ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಮೌನಕ್ಕೆ ಶರಣಾಗಿ ಕಣ್ಣೀರಿಟ್ಟರು.

click me!