Belagavi Rain Update : ತಗ್ಗಿದ ಮಳೆ... ಆದರೂ ತಪ್ಪದ ಪ್ರವಾಹ ಭೀತಿ... ಏಕೆ ಗೊತ್ತಾ?

By Ravi Nayak  |  First Published Jul 17, 2022, 5:05 PM IST

• ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಮುಂದುವದಿದ ಮಳೆ

• ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯ ಬಹುತೇಕ ಭರ್ತಿ

• ಘಟಪ್ರಭಾ, ಮಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಳ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಜು.17) : ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಅಬ್ಬರಿಸಿ ಬೊಬ್ಬರೆಯುತ್ತಿದ್ದ ಮಳೆರಾಯ ಇಂದು ತುಸು ಬಿಡುವು ಕೊಟ್ಟಿದೆ. ಕಳೆದ ರಾತ್ರಿ ಬೆಳಗಾವಿ ನಗರದಲ್ಲಿ ಸುರಿದ ಮಳೆಯಿಂದ ಕೆಲವೊಂದಿಷ್ಟು ರಸ್ತೆಗಳು ಜಲಾವೃತಗೊಂಡಿದ್ದವು. ಬೆಳಗಾವಿ‌ಯ ಓಂ ನಗರ, ಉಜ್ವಲ ನಗರ, ಗಾಂಧಿನಗರ ಬಳಿಯ ಬೆಳಗಾವಿ ಬಾಗಲಕೋಟ ರಸ್ತೆ ಸೇರಿ ಕೆಲವೆಡೆ ನೀರು ನಿಂತು ತೊಂದರೆ ಉಂಟಾಗಿತ್ತು. ಬಳಿಕ ಎಚ್ಚೆತ್ತು ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಸಿಬ್ಬಂದಿ ಒಳಚರಂಡಿ ಶುಚಿಗೊಳಿಸಿದರು‌‌. ಬೆಳಗಾವಿ ನಗರದಲ್ಲಿ ಬೆಳಗ್ಗೆಯಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಆದ್ರೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದೆ.

Tap to resize

Latest Videos

ರಕ್ಕಸಕೊಪ್ಪ ಜಲಾಶಯದಿಂದ ಮಾರ್ಕಂಡೇಯ ನದಿಗೆ ನೀರು ಬಿಡುಗಡೆ:

ಮಹಾರಾಷ್ಟ್ರ(Maharashtra)ದ ಪಶ್ಚಿಮಘಟ್ಟ(Western Ghats) ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಬೆಳಗಾವಿ (Belgavi) ಜಿಲ್ಲೆಯ ನದಿಗಳು(Rivers) ಮೈದುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ‌.‌ ಇದೇ ರೀತಿ ಇನ್ನೂ ಹದಿನೈದು ದಿನಗಳ ಕಾಲ ಮಳೆ ಮುಂದುವರೆದರೆ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ. ಸದ್ಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ‌. ಅರ್ಧ ಟಿಎಂಸಿ ಸಾಮರ್ಥ್ಯದ 2475 ಅಡಿಯ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು ಮುಂಜಾಗ್ರತಾ ಕ್ರಮವಾಗಿ ರಕ್ಕಸಕೊಪ್ಪ ಜಲಾಶಯದ 6 ಗೇಟ್‌ಗಳ ಪೈಕಿ ಮೂರು ಗೇಟ್‌ಗಳಿದ ಅಲ್ಪ ಪ್ರಮಾಣದಲ್ಲಿ ನೀರನ್ನು ಮಾರ್ಕಂಡೇಯ ನದಿಗೆ ಹರಿಬಿಡಲಾಗುತ್ತಿದೆ‌. ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಕಳೆದ ಎರಡು ವಾರಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಇಂದು‌ ತುಸು ಬಿಡುವು ಕೊಟ್ಟಿತ್ತು. ಮಾರ್ಕಂಡೇಯ ನದಿ ನೀರು ಮೈದುಂಬಿ ಹರಿಯುತ್ತಿದ್ದು ಬೆಳಗಾವಿ ತಾಲೂಕಿನ ಅಂಬೇವಾಡಿ, ಅಳತಗಾ, ಕಂಗ್ರಾಳಿ ಕೆ.ಹೆಚ್. ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದೆ‌‌‌.

ಖಾನಾಪುರ ತಾಲೂಕಿನಲ್ಲಿ ಮನೆಗೋಡೆ ಕುಸಿತ, ಹಬ್ಬಾನಟ್ಟಿ ಮಾರುತಿ ದೇಗುಲ ಮುಳುಗಡೆ:

ಇನ್ನು ಖಾನಾಪುರ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗುತ್ತಿದ್ದು ಮಲಪ್ರಭಾ ನದಿಗೆ 17,150 ಕ್ಯೂಸೆಕ್ ಒಳಹರಿವು ಇದೆ. ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಬಳಿಯ ಸ್ವಯಂಭೂ ಮಾರುತಿ ದೇವಸ್ಥಾನ ಮುಳುಗಡೆ ಹಂತಕ್ಕೆ ತಲುಪಿದೆ‌.  ಖಾನಾಪುರ ತಾಲೂಕಿನಲ್ಲಿ ನಿರಂತರ ಮಳೆಯಿಂದ ಸುರಪುರ-ಕೇರವಾಡ ಗ್ರಾಮದಲ್ಲಿ ಗಂಗವ್ವ ಪಿರೋಜಿ ಗಡ್ಕರಿ ಅವರಿಗೆ ಸೇರಿದ ಮನೆ ಗೋಡೆ ಕುಸಿದಿದೆ.‌ ಅದೃಷ್ಟವಶಾತ್ ಮನೆಯಲ್ಲಿದ್ದ ಗಡ್ಕರಿ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾನಾಪುರ ಕ್ಷೇತ್ರದ ನದಿ ತೀರದ ಗ್ರಾಮಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಖಾನಾಪುರ ತಾಲೂಕಿನ ಮಂತುರ್ಗಾ ಬಳಿ ಹಾಲಾತ್ರಿ ಹಳ್ಳ ಹರಿದು ಸೇತುವೆ ಮುಳುಗಡೆಯಾಗಿದ್ದು ಸಿಂಧನೂರು - ಹೆಮ್ಮಡಗಾ ರಸ್ತೆ ಮೇಲೆ ನೀರು ಹರಿಯುತ್ತಿದೆ. ಹೆಮ್ಮಡಗಾ ಅರಣ್ಯ ವಲಯ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಕಾಡಂಚಿನ ಗ್ರಾಮಗಳಲ್ಲಿ ಸೇತುವೆ ದುರಸ್ತಿ ಬಗ್ಗೆ ಅರಣ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.ಇದನ್ನೂ ಓದಿ: ಬೆಳಗಾವಿಯಲ್ಲಿ ಮುಂದುವರಿದ ವರುಣಾರ್ಭಟ: 13 ಸೇತುವೆಗಳು ಮುಳುಗಡೆ

ಮೂಡಲಗಿ ತಾಲೂಕಿನಲ್ಲಿ ಕೆಳಹಂತದ ಸೇತುವೆಗಳು ಮುಳುಗಡೆ:

ಇನ್ನೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಘಟಪ್ರಭಾ ನದಿ ಒಳಹರಿವು ಪ್ರಮಾಣ ಹೆಚ್ಚಳವಾಗಿದೆ. ಘಟಪ್ರಭಾ ನದಿಗೆ 28,791 ಕ್ಯೂಸೆಕ್ ಒಳಹರಿವು ಇದ್ದು ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದ ಬಳಿ ಸೇತುವೆ ಮುಳುಗಡೆಯಾಗಿದೆ. ಮುಳುಗಡೆಯಾದ ಸೇತುವೆ  ಬಳಿ ಯುವಕರು ತಮ್ಮ ತಮ್ಮ ಬೈಕ್‌ಗಳನ್ನು  ವಾಶ್ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪುಟ್ಟ ಮಕ್ಕಳನ್ನು ಸೇತುವೆ ಬಳಿ ಕರೆತಂದ ಕೆಲ ಬೈಕ್ ಸವಾರರು ಜೀವಭಯವಿಲ್ಲದೇ ಮುಳಗುಡೆಯಾದ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ‌. ಈಗಾಗಲೇ ಮೂಡಲಗಿ ತಾಲೂಕಿನಲ್ಲಿ ಅವರಾದಿ - ಮೂಡಲಗಿ, ಅವರಾದಿ - ಮಹಾಲಿಂಗಪುರ, ಸುಣಧೋಳಿ - ಮೂಡಲಗಿ ಸೇರಿ ಹಲವು ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಮುಳುಗಡೆಯಾದ ಸೇತುವೆ ಮೇಲೆ ಜನಸಂಚಾರ ನಿಷೇಧಿಸುವ ನಿಟ್ಟಿನಲ್ಲಿ ತಾಲೂಕು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಕಮಲದಿನ್ನಿ ನಿವಾಸಿ ಶಿವರೆಡ್ಡಿ ಹುಚರೆಡ್ಡಿ ಮನವಿ ಮಾಡಿದ್ದಾರೆ.

ಗೋಕಾಕ್ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು :

ಇನ್ನು ಇಂದು ಭಾನುವಾರ ಹಿನ್ನೆಲೆ ಬೆಳಗಾವಿ ಜಿಲ್ಲೆ ಗೋಕಾಕ ಜಲಪಾತ ವೀಕ್ಷಣೆಗೆ ತಂಡೋಪತಂಡವಾಗಿ ಜನರು ಆಗಮಿಸಿದ್ರು. ಘಟಪ್ರಭಾ ನದಿ‌ ನೀರು ಹರಿವು ಹೆಚ್ಚಳ ಹಿನ್ನೆಲೆ ಬಂಡೆಗಲ್ಲುಗಳ ಮೇಲಿಂದ 171 ಅಡಿ ಆಳಕ್ಕೆ ನೀರು ಧುಮ್ಮುಕ್ಕುವ ಜಲವೈಭವ ನೋಡಲು ಜನರು ಕಿಕ್ಕಿರಿದು ಸೇರಿದ್ರು.‌ ಜಲಪಾತ ಬಳಿ ಯಾರೂ ತೆರಳದಂತೆ ಗೋಕಾಕ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ರು‌. ಇದನ್ನೂ ಓದಿ: ಸೋರುತ್ತಿರುವ ಶಾಲೆ : ಆತಂಕದಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿರುವ ಶಿಕ್ಷಕರು

ಸದ್ಯ ಬೆಳಗಾವಿಯಲ್ಲಿ ಮಳೆಯ ಪ್ರಮಾಣ ತಗ್ಗಿದರೂ ಸಹ‌ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ನದಿಪಾತ್ರದ ಜನರ ನಿದ್ದೆಗೆಡಿಸಿದೆ. ಇದೇ ರೀತಿ ಇನ್ನೂ ಎರಡು ವಾರ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯಾದ್ರೆ ಪ್ರವಾಹ ಭೀತಿ ಎದುರಾಗಲಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.

click me!