ಮಳೆ ಏರುಪೇರು; ತಲೆಕೆಳಗಾದ ರೈತರ ಲೆಕ್ಕಾಚಾರ!

By Ravi NayakFirst Published Jul 24, 2022, 5:45 PM IST
Highlights

ಮಳೆಯ ಪ್ರಮಾಣದಲ್ಲಿ  ಏರುಪೇರು; ತಲೆಕೆಳಗಾದ ರೈತರ ಲೆಕ್ಕಾಚಾರ-ಭತ್ತ ,ಅಡಿಕೆ ಕಾಳುಮೆಣಸು ಬೆಳೆಗಾರರ ಸಂಕಷ್ಟ

ವರದಿ-ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜು.24) : ಈ ಬಾರಿ ಸುರಿದ ವ್ಯಾಪಕ ಮಳೆಯಿಂದಾಗಿ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಭತ್ತ ಬೆಳೆಯುವ ರೈತರ ಜೊತೆಗೆ ತೋಟಗಾರಿಕಾ ಬೆಳೆಗಳನ್ನು ಬೆಳೆಸುವವರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಅತಿಯಾದ ಮಳೆಗೆ ಅಂದಾಜು 300 ಹೆಕ್ಟರ್ ನಷ್ಟು ಭತ್ತ ಬೆಳೆ ನಾಶವಾಗಿದೆ. ಅದಲ್ಲದೆ ಅಡಿಕೆ, ಕಾಳುಮೆಣಸಿಗೂ ಕೂಡ ಕೊಳೆರೋಗ ಬಾಧಿಸುತ್ತಿದೆ ಉಡುಪಿ(Udupi) ಜಿಲ್ಲೆಯಲ್ಲಿ ಈ ಬಾರಿ ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಮಳೆ(Rain) ಸುರಿದಿದೆ. ಮಳೆ ತಡವಾಗಿ ಆರಂಭವಾದ ಕಾರಣ ಭತ್ತದ ನಾಟಿ ಕಾರ್ಯ ವಿಳಂಬವಾಗಿತ್ತು. ಭತ್ತದ ನಾಟಿ ಆರಂಭಿಸುತ್ತಿದ್ದಂತೆ ಧಾರಾಕಾರ ಸುರಿದ ಮಳೆಗೆ, ಲಕ್ಷಾಂತರ ರೂಪಾಯಿಯ ಕೃಷಿ ನಷ್ಟ ಸಂಭವಿಸಿದೆ. ಇಲಾಖೆಯಿಂದ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ಕೇವಲ 35 ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದರೂ, ನಷ್ಟದ ಪ್ರಮಾಣ ದುಪಟ್ಟಾಗಿರುವ ಸಾಧ್ಯತೆ ಇದೆ.

Karwar: ರೈತರಿಗೆ 'ಸೈನಿಕ' ಹುಳಗಳ ಕಾಟ: ಸಂಕಷ್ಟದಲ್ಲಿ ಅನ್ನದಾತ..!

ಕೆಲವೆಡೆ ಕೃಷಿ ಭೂಮಿ ಮುಳುಗಡೆಯಾಗಿದ್ದರೆ, ಇನ್ನು ಅನೇಕ ಕಡೆಗಳಲ್ಲಿ ಭತ್ತದ ಸಸಿ ನೀರಿಗೆ ಕೊಚ್ಚಿ ಹೋಗಿದೆ. ಸಾಕಷ್ಟು ಕಡೆ ನಾಟಿಗೆ ತಯಾರಿಸಿಟ್ಟಿದ್ದ ನೇಜಿ ಕೂಡ ಉಪಯೋಗಕ್ಕೆ ಇಲ್ಲದಂತೆ ಹಾಳಾಗಿದೆ. ಅಪಾರ ಪ್ರಮಾಣದಲ್ಲಿ ಭತ್ತದ ಸಸಿಗಳು ಕೊಳೆತು ಹೋಗಿವೆ.

ಎನ್ ಡಿ ಆರ್ ಎಫ್  ಗೈಡ್ ಲೈನ್(NDRF Guidelines) ಪ್ರಕಾರ ಪ್ರತಿ ಹೆಕ್ಟೇರ್(hecter) ಗೆ ಕೇಂದ್ರ ಸರ್ಕಾರ(central government)ದಿಂದ 6800, ಮತ್ತು ರಾಜ್ಯ ಸರ್ಕಾರ(State Government)ದಿಂದಲೂ 6800 ಹೀಗೆ ಒಟ್ಟು 13600 ರೂ. ಪರಿಹಾರ ನೀಡುವುದಕ್ಕೆ ಅವಕಾಶವಿದೆ. ಆದರೆ ರೈತರಿಗೆ ಆಗಿರುವ ನಷ್ಟದ ಪ್ರಮಾಣ ಜಾಸ್ತಿ ಇರುವುದರಿಂದ ಪ್ರತಿ ಎಕರೆಗೆ ಕನಿಷ್ಠ 20 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಭಾರತೀಯ ಕಿಸಾನ ಸಂಘ ಮತ್ತು ಜಿಲ್ಲಾ ಕೃಷಿಕರ ಸಂಘ ಒತ್ತಾಯಿಸಿದೆ.

Vijayanagara: ಇಲ್ಲಿನ ರೈತರಿಗೆ ಅಕಾಲಿಕ ಮಳೆಯೇ ಆಸರೆ..

ಈ ಬಾರಿ ಜಿಲ್ಲೆಯಲ್ಲಿ 38,000 ಹೆಕ್ಟರ್ ನಷ್ಟು ಭತ್ತದ ಕೃಷಿ ನಾಟಿ ಆಗಬೇಕಿತ್ತು, ಆದರೆ ನಿರಂತರ ಮಳೆಯಿಂದಾಗಿ ನಾಟಿಯ ಪ್ರಮಾಣ ಕೂಡ ಇಳಿಮುಖವಾಗಿದೆ ಈಗಾಗಲೇ ಸಮಯ ಮೀರಿರುವುದರಿಂದ ಇನ್ನು ಬೀಜ ಬಿತ್ತಿ , ನಾಟಿ ಮಾಡುವುದು ಅಸಾಧ್ಯ ಹಾಗಾಗಿ ಪರಿಹಾರಧನ ಹೆಚ್ಚಿಸಬೇಕು ಎಂದು ರೈತರು ಕೇಳುತ್ತಿದ್ದಾರೆ.

ಇನ್ನು ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೂ ಸಮಸ್ಯೆಯಾಗಿದೆ. ಮಳೆಯಿಂದಾಗಿ ಔಷಧ ಸಿಂಪಡಿಸದೆ ಕೊಳೆರೋಗ ಪ್ರಾರಂಭವಾಗಿದೆ. ಅತಿವೃಷ್ಟಿಯಿಂದ ಅಡಿಕೆ ಉದುರುತ್ತಿದ್ದರೆ , ಗೇರು ಬೆಳೆಗೂ ಹಾನಿಯಾಗಿದೆ.

ವಾಣಿಜ್ಯ ಬೆಳೆಗಳ ನಷ್ಟ ಅಂದಾಜಿಸಲು ಈಗಾಗಲೇ ತೋಟಗಾರಿಕಾ ಇಲಾಖೆ ವಿಜ್ಞಾನಿಗಳು ತಂಡದೊಂದಿಗೆ ಸರ್ವೆ ಕಾರ್ಯ ನಡೆಸುತ್ತಿದೆ. ರೈತರು ತಮ್ಮ ಕೃಷಿ ಹಾನಿಯ ಬಗ್ಗೆ ಸೂಕ್ತ ದಾಖಲೆಗಳನ್ನು ಸಹಿತ ಅರ್ಜಿ ಸಲ್ಲಿಸಬಹುದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

click me!