ಅಫಜಲ್ಪುರಕ್ಕೂ ಅಭಿವೃದ್ಧಿಗೂ ಎಣ್ಣೆ ಸೀಗೆಕಾಯಿ ನಂಟು ಕೋಟಿ ಕೋಟಿ ರೂ ಅನುದಾನ ಬಂದರೂ ಅಭಿವೃದ್ಧಿ ಮಾತ್ರ ಶೂನ್ಯ! ಪುರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಹಿಡಿಶಾಪ
ಚವಡಾಪುರ ಜು.24: ಸಾಮಾನ್ಯವಾಗಿ ತಾಲೂಕು ಕೇಂದ್ರಗಳಲ್ಲಿ ಗುಣಮಟ್ಟದ ರಸ್ತೆ, ಬೀದಿ ದೀಪ, ಪಾದಾಚಾರಿ ಮಾರ್ಗಗಳು, ನೀರು, ನೆರಳಿನ ವ್ಯವಸ್ಥೆ, ಉತ್ತಮ ಚರಂಡಿ ವ್ಯವಸ್ಥೆ ಇರಲೇಬೇಕು. ಆದರೆ ಅಫಜಲ್ಪುರ ಅನ್ನೋ ಹಾಳೂರಲ್ಲಿ ಇವುಗಳಿಗೆ ತದ್ವಿರುದ್ಧವಾಗಿ ಚರಂಡಿ, ಮಳೆ ನೀರು ರಸ್ತೆ ಮೇಲೆ ಹರಿಯುತ್ತಿರುತ್ತದೆ. ನಲ್ಲಿ ನೀರು ಜನರ ಮನೆಗಳಿಗೆ ಸರಬರಾಜು ಆಗುವ ಬದಲಾಗಿ ಚರಂಡಿಯಲ್ಲಿ ದಿನವಿಡಿ ಹರಿಯುತ್ತಿರುತ್ತದೆ. ಮುಖ್ಯ ರಸ್ತೆಗಳಲ್ಲಿ ರಾತ್ರಿ ಹೊತ್ತು ವಿದ್ಯುತ್ ದೀಪಗಳು ಬೆಳಕು ನೀಡುವುದಿಲ್ಲ ಬದಲಾಗಿ ಅನೇಕ ಕಡೆಗಳಲ್ಲಿ ಹಗಲಿನಲ್ಲೂ ವಿದ್ಯುತ್ ದೀಪಗಳು ಉರಿಯುತ್ತಿರುತ್ತವೆ. ಜನಸಾಮಾನ್ಯರು ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋದರೂ ಕೆಸರು ಗದ್ದೆಯಂತಿರುವ ರಸ್ತೆ, ಕಚೇರಿಗಳ ಆವರಣಗಳನ್ನು ದಾಟಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಅನುದಾನ ಬಂದು ವಿವಿಧ ಅಭಿವೃದ್ದಿ ಕೆಲಸಗಳ ಹೆಸರಿನಲ್ಲಿ ಖರ್ಚು ಕೂಡ ಆಗುತ್ತದೆ. ಆದರೆ ವಾಸ್ತವದಲ್ಲಿ ಅಭಿವೃದ್ದಿ ಎನ್ನುವುದು ಕನ್ನಡಿಯೊಳಗಿನ ಗಂಟಿನಂತಾಗಿದೆ. ಹೀಗಾಗಿ ಅಫಜಲ್ಪುರಕ್ಕೂ ಮತ್ತು ಅಭಿವೃದ್ದಿಗೂ ಯಾವಾಗಲೂ ಎಣ್ಣೆ ಸೀಗೆಕಾಯಿ ನಂಟಿನಂತಾಗಿದೆ.
ಅಭಿವೃದ್ಧಿಯಾಗದ ಪಟ್ಟಣ:
undefined
ಪಟ್ಟಣದಲ್ಲಿ ಚರಂಡಿ, ಸಿಸಿ ರಸ್ತೆಗಳು, ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಸರ್ಕಾರದಿಂದ ಕೋಟಿ ಕೋಟಿ ಅನುದಾನ ಬರುತ್ತಿದೆ. ಬಂದ ಅನುದಾನದಲ್ಲಿ ತರಹೇವಾರಿ ಅಭಿವೃದ್ದಿ ಕೆಲಸಗಳ ಹೆಸರಿನಲ್ಲಿ ಕ್ರೀಯಾ ಯೋಜನೆ ರೂಪಿಸಲಾಗುತ್ತದೆ. ವಾಸ್ತವದಲ್ಲಿ ಕಾಗದಲ್ಲಿರುವ ಕ್ರೀಯಾಯೋಜನೆಯ ಕಾಮಗಾರಿಗಳು ಪಟ್ಟಣದ ಜನರ ಉಪಯೋಗಕ್ಕೆ ಬರುವುದಿಲ್ಲ. ಬದಲಾಗಿ ಜೆ.ಇ, ಮುಖ್ಯಾಧಿಕಾರಿ, ಪುರಸಭೆ ಸದಸ್ಯರು ಇಲ್ಲವೇ ಕೆಲವು ಪ್ರಭಾವಿ ರಾಜಕಾರಣಿಗಳ ಜೇಬಿಗೆ ಆಹಾರವಾಗುತ್ತಿವೆ. ಹೀಗಾದಾಗ ಅಫಜಲ್ಪುರ ಅಭಿವೃದ್ದಿಯಾಗೋದು ಯಾವಾಗ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.
Karnataka Politics: ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯ: ಸಲೀಂ ಅಹ್ಮದ್
ಅಮೃತ ನಗರೋತ್ಥಾನ ಯೋಜನೆ ಒಂದರಲ್ಲೇ ಕಳೆದ 2012-13ರಲ್ಲಿ 5 ಕೋಟಿ, 2015-16ರಲ್ಲಿ 5 ಕೋಟಿ, 2017-18ರಲ್ಲಿ 7.5 ಕೋಟಿ ಹಣ ಅಫಜಲ್ಪುರಕ್ಕೆ ಬಂದಿದೆ. ಅಲ್ಲದೆ 2015-16ನೇ ಸಾಲಿನ 14ನೇ ಹಣಕಾಸು ಯೋಜನೆ ಅಡಿಯಲ್ಲಿ 74 ಲಕ್ಷ, 2016-17ನೇ ಸಾಲಿನಲ್ಲಿ 105.7 ಲಕ್ಷ, 2017-18ರಲ್ಲಿ 121.4 ಲಕ್ಷ, 2018-19ರಲ್ಲಿ 138.4 ಲಕ್ಷ, 2019-20ರಲ್ಲಿ 186 ಲಕ್ಷ ಅನುದಾನ ಬಿಡುಗಡೆಯಾಗಿದೆ. 2021-22ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ 42 ಲಕ್ಷ, ಮುಕ್ತ ನಿಧಿಯಲ್ಲಿ 56 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿಯಲ್ಲಿ 37 ಲಕ್ಷ, ಎಸ್‌ಸಿಎಸ್‌ಪಿ ಯೋಜನೆಯಲ್ಲಿ 11 ಲಕ್ಷ, ಟಿಎಸ್‌ಪಿ ಯೋಜನೆಯಲ್ಲಿ 4 ಲಕ್ಷ ಹೀಗೆ ಅಫಜಲ್ಪುರ ಪುರಸಭೆಗೆ ಕಳೆದ 2013ರಿಂದ ಇಲ್ಲಿಯವರೆಗೆ ಕೋಟ್ಯಾಂತರ ರೂಪಾಯಿ ಅನುದಾನ ನೀರಿನಂತೆ ಹರಿದು ಬಂದಿದೆ.
ಪುರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಹಿಡಿಶಾಪ:
ಅಫಜಲ್ಪುರ ಎಂದರೆ ಸರ್ವಋುತು ಸಮಸ್ಯೆಯ ಊರು ಎಂಬಂತಾಗಿದೆ. ಬೆಸಿಗೆ ಮತ್ತು ಚಳಿಗಾಲದಲ್ಲಿ ವಿಪರೀತ ಧೂಳಿನ ಸಮಸ್ಯೆ ಇದ್ದರೆ, ಮಳೆಗಾಲದಲ್ಲಿ ಎಲ್ಲಿ ನೋಡಿದರು ಕೊಚ್ಚೆ, ರಾಡಿ, ಮಳೆ ನೀರು, ಚರಂಡಿ ನೀರು ಒಟ್ಟಾಗಿ ಮುಖ್ಯ ರಸ್ತೆಗಳ ಮೇಲೆ ಹರಿದಾಡಿ ಸಾಂಕ್ರಾಮಿಕ ರೋಗದ ತಾಣವಾಗಿ ಅಫಜಲ್ಪುರ ಮಾರ್ಪಟ್ಟಿದೆ. ಇಷ್ಟೆಲ್ಲಾ ಸಮಸ್ಯೆಗಳು ಉಲ್ಬಣವಾಗಿದ್ದರೂ ಸಹ ಪುರಸಭೆಯವರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಇವರಿಗೆ ಯಾರು ಕೇಳುವವರಿಲ್ಲದಂತಾಗಿದ್ದಕ್ಕೆ ದಪ್ಪ ಚರ್ಮದ ಅಧಿಕಾರಿಗಳು ಪಟ್ಟಣದ ಸಮಸ್ಯೆಗಳ ನಿವಾರಣೆಗೆ ಮುಂದಾಗುತ್ತಿಲ್ಲ. ಪುರಸಭೆಯವರ ಈ ನಿರ್ಲಕ್ಷ್ಯ ಮತ್ತು ಅಸಡ್ಡೆಯ ಧೋರಣೆಗೆ ಪಟ್ಟಣದ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಭ್ರಷ್ಟರ ಬೆನ್ನಿಗೆ ನಿಂತ ರಾಜ್ಯ ಸರ್ಕಾರ, ಚಿತ್ರೀಕರಣ ನಿಷೇಧಿಸಿ ಆದೇಶ!
ಸರ್ಕಾರದಿಂದ ಬರುವ ಕೋಟ ಕೋಟಿ ಅನುದಾನ ಕೆಲವು ಪುಢಾರಿಗಳು ಹಾಗೂ ಅಧಿಕಾರಿಗಳು ಸೇರಿ ಲೂಟಿ ಮಾಡುತ್ತಿದ್ದಾರೆ. ಕ್ರೀಯಾಯೋಜನೆಗಳು ಕಾಗದಕ್ಕೆ ಸೀಮಿತವಾಗಿದ್ದು ಸಮಸ್ಯೆಗಳು ಸರ್ವಕಾಲಕ್ಕೂ ಇದ್ದಂತೆ ಇವೆ. ಪುರಸಭೆಯವರ ಭ್ರಷ್ಟಾಚಾರಕ್ಕೆ ಮೂಗುದಾರ ಹಾಕದ ಹೊರತು ಅಫಜಲ್ಪುರ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಕಾಣಲು ಸಾಧ್ಯವಿಲ್ಲ.
- ಸುರೇಶ ಅವಟೆ, ವಕೀಲರು, ಪಟ್ಟಣದ ನಿವಾಸಿ
ಎಲ್ಲಿ ನೋಡಿದರೂ ಗಲೀಜು, ಕಸ ಯಾವುದೋ ರಾಡಿ ಯಾವುದೋ ತಿಳಿವಲ್ದು. ನಮ್ ಕೈಯಾಗ್ ಬಾರಗಿ ಅಷ್ಟೇ ಕೊಟ್ಟಾರ್, ಮತ್ತೇನು ಸೌಲತ್ ಕೊಟ್ಟಿಲ್ಲ, ಮಳಿಗಾಲದಾಗಂತು ಕಸ ಹೊಡಿಲಾಕ್ ಆಗಾಂಗಿಲ್ಲ, ಏನ್ ಮಾಡಾದ್ರಿ ನಮ್ಮ ಕೆಲಸ ನಾವು ಮಾಡಬೇಕಲಾ, ದಿನಾ ಅದೇ ರಾಡ್ಯಾಗ್ ತಿರಗ್ಯಾಡಿ ಹೇಸಿಕಿ ಬಂದಂಗ್ ಆಗ್ತದ್, ಗಲೀಜ್ ನೋಡಿ ಮೈ ನಡುಗಿದಂಗ್ ಆಗ್ತದ್, ನಮ್ ಗೋಳ ಯಾರು ಕೇಳಾಂಗಿಲ್ಲ
- ಪುರಸಭೆ ಪೌರಕಾರ್ಮಿಕರ ಅಳಲು