Balipa Narayana Bhagavatha: ಯಕ್ಷಗಾನ ಲೀನ ಬಲಿಪ ನಾರಾಯಣ ಭಾಗವತರು: ಪ್ರಧಾನಿ, ಸಿಎಂ ಸಂತಾಪ

By Kannadaprabha NewsFirst Published Feb 18, 2023, 12:02 PM IST
Highlights

ಗುರುವಾರ ಸಂಜೆ ನಿಧನ ಹೊಂದಿದ ತೆಂಕು ತಿಟ್ಟಿನ ಭಾಗವತಿಕೆಯ ಭೀಷ್ಮ, ಬಲಿಪ ನಾರಾಯಣ ಭಾಗವತ ಅಂತ್ಯಕ್ರಿಯೆ ಅವರ ಮಾರೂರಿನ ನೂಯಿಯ ನಿವಾಸದ ನಿವೇಶನದಲ್ಲಿ ತಡರಾತ್ರಿ ನಡೆಯಿತು.

ಮೂಡುಬಿದಿರೆ (ಫೆ.18) : ಗುರುವಾರ ಸಂಜೆ ನಿಧನ ಹೊಂದಿದ ತೆಂಕು ತಿಟ್ಟಿನ ಭಾಗವತಿಕೆಯ ಭೀಷ್ಮ, ಬಲಿಪ ನಾರಾಯಣ ಭಾಗವತ ಅಂತ್ಯಕ್ರಿಯೆ ಅವರ ಮಾರೂರಿನ ನೂಯಿಯ ನಿವಾಸದ ನಿವೇಶನದಲ್ಲಿ ತಡರಾತ್ರಿ ನಡೆಯಿತು.

ಬಲಿಪರ ಪುತ್ರರಾದ ಮಾಧವ ಬಲಿಪ(Madhav Ballipa), ಕಟೀಲು ಮೇಳದ ಭಾಗವತ ಶಿವಶಂಕರ ಬಲಿಪ(Shivashankar balipa) ಸಹಿತ ಕೃಷಿಕ ಶಶಿಧರ ಬಲಿಪ ಅವರು ಶುಕ್ರವಾರ ಮುಂಜಾವ 3.15ರ ವೇಳೆಗೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಬಲಿಪ ಕುಟುಂಬದ ಬಂಧುವರ್ಗದವರು, ಅಭಿಮಾನಿಗಳು ಯಕ್ಷರಂಗದ ಮಹಾಸಾಧಕನಿಗೆ ಇಹಲೋಕದಿಂದ ಭಾವಪೂರ್ಣ ವಿದಾಯ ಕೋರಿದರು. ಕರಾಡ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ನಡೆಸಲಾಗಿದ್ದು ಸರಳವಾಗಿ ಅಂತ್ಯಕ್ರಿಯೆಗಳು ನಡೆದವು.

Latest Videos

ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ವಿಧಿವಶ

ತಡರಾತ್ರಿಯೇ ಅಂತ್ಯಕ್ರಿಯೆ ಮಾಡುವ ನಿರ್ಧಾರವಾದ ಕಾರಣ ದೂರ, ಪರವೂರಲ್ಲಿದ್ದವರಿಗೆ ಅಂತಿಮ ದರ್ಶನ ಪಡೆಯಲು ಅಸಾಧ್ಯವಾಯಿತು. ಮೇಳದ ಕಲಾವಿದರು, ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣ ಆಸ್ರಣ್ಣ, ಕಮಲಾ ದೇವಿಪ್ರಸಾದ್‌ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್‌ ಶೆಟ್ಟಿ, ರಾಮ ಭಟ್‌ ಕಾರ್ಕಳ, ಭಾಗವತರಾದ ಪಟ್ಲ ಸತೀಶ್‌ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್‌, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಸುಣ್ಣಂಬಳ ವಿಶ್ವೇಶ್ವರ ಭಟ್‌, ಗಣೇಶ ಶೆಟ್ಟಿಕನ್ನಡಿಕಟ್ಟೆ, ವಾಸುದೇವ ರಂಗಾ ಭಟ್‌, ಉಜಿರೆ ಅಶೋಕ್‌ ಭಟ್‌, ಕಲಾಪೋಷಕ ಕೆ.ಶ್ರೀಪತಿ ಭಟ್‌, ಸಹಿತ ನೂರಾರು ಮಂದಿ ಬಲಿಕರ ನಿವಾಸಕ್ಕೆ ತೆರಳಿ ಬಲಿಪರಿಗೆ ಅಂತಿಮ ನಮನ, ಶ್ರದ್ಧಾಂಜಲಿ ಸಲ್ಲಿಸಿದರು.

ಸ್ಮರಣೀಯ ಬಲಿಪ ಭವನ: ಬಲಿಪರ ಸಾಧನೆಯನ್ನು ಪರಿಗಣಿಸಿ ನೂರಾರು ಪ್ರತಿಷ್ಠಿತ ಗೌರವಗಳು ಸಂದಿವೆ. ಸಾವಿರಾರು ಕಡೆಗಳಲ್ಲಿ ಸಂಮಾನಿಸಿದ್ದಾರೆ . ತೀರಾ ಇತ್ತೀಚಿನವರೆಗೂ ಅವರ ಅಭಿಮಾನಿಗಳು, ಯಕ್ಷ ಸಂಘಟನೆಗಳು ಅವರ ನಿವಾಸಕ್ಕೆ ತೆರಳಿ ಗೌರವಿಸಿವೆ. ಈ ಸಂಮಾನ ಪತ್ರಗಳೆಲ್ಲವನ್ನೂ ಬಲಿಪರಿಗೆ 75 ಸಂವತ್ಸರ ಪೂರ್ತಿಯಾದ ಸಂದರ್ಭದಲ್ಲಿ, ಅವರ ಅಭಿಮಾನಿಗಳು ಮನೆಯಂಗಳದ ಬಳಿ ನಿರ್ಮಿಸಿದ ಬಲಿಪ ಭವನ ಬಲಿಪರ ಗೌರವ ಸ್ಮರಣಿಕೆಗಳಿಂದ ತುಂಬಿ ತುಳುಕಿದೆ.

ಇತ್ತೀಚಿಗೆ ಉಡುಪಿ(Udupi)ಯಲ್ಲಿ ನಡೆದ ಯಕ್ಷಗಾನ ಸಮ್ಮೇಳನ(Yakshagana Sammelan)ದಲ್ಲಿ ಬಲಿಪರಿಗೆ ಸಮ್ಮಾನವಿತ್ತಾದರೂ ಅವರ ಪರವಾಗಿ ಶಿವಶಂಕರ ಬಲಿಪರು ಗೌರವ ಸ್ವೀಕರಿಸಿದ್ದರು. ಇತ್ತೀಚಿನವರೆಗೂ ಬಲಿಪರು ಇದೇ ಭವನದಲ್ಲಿ ತಮ್ಮನ್ನು ಭೇಟಿಯಾದವರ ಜತೆ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು ಮುಂದೆ ಪುತ್ರ ಶಿವಶಂಕರ ಬಲಿಪ ಈ ಭವನದಲ್ಲಿ ತಮ್ಮ ಪುತ್ರ ಭವಿಷ್ಯ ಬಲಿಪ ಸೇರಿದಂತೆ ಆಸಕ್ತ ಯುವ ಪೀಳಿಗೆಗೆ ಭಾಗವತಿಕೆಯ ತರಗತಿಗಳನ್ನು ನಡೆಸುವ ಕನಸಿದೆ ಎಂದು ‘ಕನ್ನಡಪ್ರಭ’ದೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಯಕ್ಷಗಾನ ಭಾಗವತ ಬಲಿಪ ನಾರಾಯಣ ವಿಧಿವಶ

ಬಲಿಪ ಭಾಗವತರ ನಿಧನಕ್ಕೆ ಪ್ರಧಾನಿ, ಸಿಎಂ ಟ್ವೀಟ್‌ ಸಂತಾಪ

ಮಂಗಳೂರು: ತೆಂಕುತಿಟ್ಟಿನ ಯಕ್ಷರಂಗದ ಭೀಷ್ಮ ಎಂದೇ ಖ್ಯಾತರಾದ ಬಲಿಪ ನಾರಾಯಣ ಭಾಗವತರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಬಲಿಪ ನಾರಾಯಣ ಭಾಗವತರು ವಿಶ್ವದ ಸಂಸ್ಕೃತಿಯ ಹೆಗ್ಗುರುತಾಗಿದ್ದರು. ಯಕ್ಷರಂಗದ ಸಮರ್ಥ ಭಾಗವತರಾಗಿ ತನ್ನದೇ ಛಾಪು ಮೂಡಿಸಿದ್ದರು. ಅವರ ಸಾಧನೆ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಅವರ ಕುಟುಂಬಕ್ಕೆ ಶಾಂತಿ ಸಿಗಲಿ, ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

ಯಕ್ಷ​ಗಾ​ನದ ಡಾಟಾ ಬ್ಯಾಂಕ್‌ ಆಗ​ಬೇ​ಕಿ​ದೆ: ಸಚಿವ ಸುನಿ​ಲ್‌

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್‌ನಲ್ಲಿ, ಬಲಿಪ ನಾರಾಯಣ ಭಾಗವತರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ತಮ್ಮ ಕಂಚಿನ ಕಂಠದ ಬಲಿಪ ಶೈಲಿಯ ಹಾಡುಗಾರಿಕೆಗೆ ಪ್ರಸಿದ್ಧರಾಗಿದ್ದ ಭಾಗವತರ ನಿಧನದಿಂದ ಯಕ್ಷ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಓಂ ಶಾಂತಿಃ ಎಂದಿದ್ದಾರೆ.

click me!