ಮಂತ್ರಾಲಯ: ಬರೋಬ್ಬರಿ 6 ತಿಂಗಳ ಬಳಿಕ ಭಕ್ತರಿಗೆ ರಾಯರ ದರ್ಶನ ಭಾಗ್ಯ..!

By Suvarna NewsFirst Published Oct 2, 2020, 3:59 PM IST
Highlights

ಕೊರೋನಾ ಹಾವಳಿ, ಲಾಕ್‌ಡೌನ್‌ನಿಂದ ಕಳೆದ ಆರು ತಿಂಗಳಿಂದ ಬಂದ್ ಮಾಡಲಾಗಿದ್ದ ರಾಯರ ಮಠ| ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿರುವ ರಾಘವೇಂದ್ರ ಮಠ| ಇಷ್ಟು ದಿನ ಕೇವಲ ಮಠದ ಅಧಿಕಾರಿ ಸಿಬ್ಬಂದಿ ಮತ್ತು ಗಣ್ಯರಿಗೆ ಮಾತ್ರ ಮಠದಲ್ಲಿ ಪ್ರವೇಶವಿತ್ತು| ಇದೀಗ ಸಾಮಾನ್ಯ ಜನರು ಕೂಡ ರಾಯರ ದರ್ಶನಕ್ಕೆ ಮಠಕ್ಕೆ ಬರಬಹುದಾಗಿದೆ| 

ರಾಯಚೂರು(ಅ.02): ಮಹಾಮಾರಿ ಕೊರೋನಾ ವೈರಸ್‌ ಹಾವಳಿ ಹಿನ್ನೆಲೆಯಲ್ಲಿ ಬರೋಬ್ಬರಿ ಆರು ತಿಂಗಳ ಬಳಿಕ ಸಾರ್ವಜನಿಕರಿಗೆ ರಾಯರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜನರ ಪ್ರವೇಶಕ್ಕೆ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಇಂದು(ಶುಕ್ರವಾರ) ಚಾಲನೆ ನೀಡಿದ್ದಾರೆ. 

ಮಠದ ಮುಖದ್ವಾರ ತೆಗೆದು, ಸಾಮಾನ್ಯ ಜನರ ಸರದಿ ಸಾಲಿನಲ್ಲಿ ಬಂದು ರಾಯರ ದರ್ಶನ ಪಡೆದ ಸ್ವಾಮಿಗಳು ಆ ಮೂಲಕ ಜನರ ದರ್ಶನಕ್ಕೆ ಚಾಲನೆ ನೀಡಿದ್ದಾರೆ.

ಮಂತ್ರಾಲಯ : ವಿದ್ಯಾರ್ಥಿಯ ಪಾನಿಪುರಿ ಆಸೆ ಈಡೇರಿಸಿದ ಸುಬುಧೇಂದ್ರ ಶ್ರೀ

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸುಬುಧೇಂದ್ರ ತೀರ್ಥರು, ಧಾರ್ಮಿಕ ಕೇಂದ್ರಗಳ ಪ್ರವೇಶಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಸಹ ಭಕ್ತರ ಅನುಕೂಲಕ್ಕಾಗಿ ಮಠವನ್ನು ಇಷ್ಟು ದಿನ ಬಂದ್ ಮಾಡಲಾಗಿತ್ತು. ಮಠದಿಂದ ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಮಠದೊಳಗೆ ಜನರ ಪ್ರವೇಶ, ರಾಯರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ. 

ಇಷ್ಟು ದಿನ ಕೇವಲ ಮಠದ ಅಧಿಕಾರಿ ಸಿಬ್ಬಂದಿ ಮತ್ತು ಗಣ್ಯರಿಗೆ ಮಾತ್ರ ಮಠದಲ್ಲಿ ಪ್ರವೇಶವಿತ್ತು. ಇದೀಗ ಸಾಮಾನ್ಯ ಜನರು ರಾಯರ ದರ್ಶನಕ್ಕೆ ಮಠಕ್ಕೆ ಬರಬಹುದಾಗಿದೆ ಎಂದು ಹೇಳಿದ್ದಾರೆ. 
 

click me!