ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪಿಗೆ ವಿದ್ಯಾತ್ಮತೀರ್ಥ ತೀರ್ಥ ಶ್ರೀಗಳ ಸ್ವಾಗತ| ತಡವಾದರೂ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಈ ತೀರ್ಪು ಸಾಕ್ಷಿ ಎಂದ ಶ್ರೀಗಳು| ಓಂಕಾರದ ಧ್ವನಿಯಿಂದ ದೈವಿಶಕ್ತಿ ಆವಿರ್ಭವಿಸಿದ್ದರಿಂದಲೇ ಮಸೀದಿ ಧ್ವಂಸಗೊಂಡಿತು|
ಕಲಬುರಗಿ(ಅ.02): ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದನ್ನು ಪ್ರಯಾಗ ಮಾಧ್ವ ಮಠದ ಪೀಠಾಧಿಪತಿ ವಿದ್ಯಾತ್ಮತೀರ್ಥ ಶ್ರೀಪಾದಂಗಳವರು ಸ್ವಾಗತಿಸಿದ್ದಾರೆ.
ಅಧಿಕಮಾಸ ಪ್ರಯುಕ್ತ ಕಳೆದ ಹಲವು ದಿನಗಳಿಂದ ನಗರದ ಜಯತೀರ್ಥ ವಿದ್ಯಾರ್ಥಿ ನಿಲಯದ ಕೃಷ್ಣ ಮಂದಿರದಲ್ಲಿ ತಂಗಿರುವ ಶ್ರೀಗಳು ತೀರ್ಪಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ಬಾಬ್ರಿ ಮಸೀದಿ ಧ್ವಂಸ ಖಂಡಿತವಾಗಿಯೂ ಪೂರ್ವನಿಯೋಜಿತ ಕೃತ್ಯವಲ್ಲ. ಹಾಗೆ ದೊಡ್ಡ ಮಸೀದಿಯನ್ನು ಕೆಡವಲಾಗದು. ನೂರು ಕೋಟಿಗೂ ಮಿಕ್ಕಿ ಭಾರತೀಯರು, ಹಿಂದೂಗಳ ಆಸೆ-ಆಕಾಂಕ್ಷೆಯಂತೆ ಪವಾಡ ಸದೃಶ ರೀತಿಯಲ್ಲಿ ಧ್ವಂಸಗೊಂಡಿತು. 1992ರ ಡಿ.6ರಂದು ಬೆಳಿಗ್ಗೆ 11ಕ್ಕೆ ಹಿಂದೂಗಳು ಎಲ್ಲಿಯೇ ಇರಲಿ, ಹೇಗೆಯೇ ಇರಲಿ ಓಂಕಾರ ಮಂತ್ರ ಹೇಳಬೇಕೆಂಬ ಸೂಚನೆಯಿತ್ತು. ಅದರಂತೆ ಓಂಕಾರದ ಧ್ವನಿಯಿಂದ ದೈವಿಶಕ್ತಿ ಆವಿರ್ಭವಿಸಿದ್ದರಿಂದಲೇ ಮಸೀದಿ ಧ್ವಂಸಗೊಂಡಿತು. ಈಗ ನ್ಯಾಯಾಲಯ ಸುದೀರ್ಘ ತನಿಖೆ, ವಿಚಾರಣೆ ಮೂಲಕ ಪೂರ್ವನಿಯೋಜಿತವಲ್ಲ ಎಂದು ಸ್ಪಷ್ಟ ಅಭಿಪ್ರಾಯ ನೀಡಿರುವುದರಿಂದ ಎಲ್ಲರೂ ಸಂತಸಪಡುವಂತಾಗಿದೆ ಎಂದು ಹೇಳಿದರು.
ಕೊರೊನಾ ಸೋಂಕು : ಕಣ್ಣೀರು ಹಾಕಿದ ಮಾಜಿ ಸಚಿವ
ಅಂದು ಕರಸೇವಕರಲ್ಲಿ ಯಾವುದೇ ಪರಿಕರ, ಸಾಧನ-ಸಲಕರಣೆಗಳಿರಲಿಲ್ಲ. ಯಾರೂ ಮಸೀದಿಯನ್ನು ಧ್ವಂಸಗೊಳಿಸಬೇಕು ಎಂದುಕೊಂಡಿರಲಿಲ್ಲ. ಕೇವಲ ದೈವಿಶಕ್ತಿಯ ಸಂಕಲ್ಪ, ಮಾನವ ಬಲದಿಂದ ನೆಲಸಮಗೊಂಡಿತು. ಬಿಜೆಪಿ ಮುಖಂಡರಾದ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ, ಸಾಧ್ವಿ ರಿತಾಂಬರ, ವಿನಯ ಕಟಿಯಾರ್, ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಕಲ್ಯಾಣಸಿಂಗ್ ಅವರಂಥ ದಿಗ್ಗಜರನ್ನು ನ್ಯಾಯಾಲಯವೇ ಆರೋಪಮುಕ್ತರನ್ನಾಗಿಸಿ ಖುಲಾಸೆಗೊಳಿಸಿ ಉತ್ತಮ ತೀರ್ಪು ನೀಡಿದೆ. ಸ್ವಲ್ಪ ತಡವಾದರೂ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಈ ತೀರ್ಪು ಸಾಕ್ಷಿ ಎಂದರು.