ಶಕ್ತಿ ಯೋಜನೆ ಎಫೆಕ್ಟ್‌, ಮಾರ್ಚ್ ಅಂತ್ಯಕ್ಕೆ 5,800 ಬಸ್ ಖರೀದಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

By Kannadaprabha News  |  First Published Jan 26, 2024, 10:23 PM IST

ಶಕ್ತಿ ಯೊಜನೆ ಪರಿಣಾಮ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸಾರಿಗೆ ಬಸ್ ಒದಗಿಸುವ ದೃಷ್ಠಿಯಿಂದ ಬರುವ ಮಾರ್ಚ್ ಅಂತ್ಯಕ್ಕೆ ರಾಜ್ಯದ ನಾಲ್ಕು ನಿಗಮಗಳಿಗೆ 5,800 ಬಸ್ ಖರೀದಿಸಲಾಗುತ್ತಿದೆ ಎಂದು ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 


ಕಲಬುರಗಿ (ಜ.26): ಶಕ್ತಿ ಯೊಜನೆ ಪರಿಣಾಮ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸಾರಿಗೆ ಬಸ್ ಒದಗಿಸುವ ದೃಷ್ಠಿಯಿಂದ ಬರುವ ಮಾರ್ಚ್ ಅಂತ್ಯಕ್ಕೆ ರಾಜ್ಯದ ನಾಲ್ಕು ನಿಗಮಗಳಿಗೆ 5,800 ಬಸ್ ಖರೀದಿಸಲಾಗುತ್ತಿದೆ ಎಂದು ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಗುರುವಾರ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಕೆ.ಕೆ.ಆರ್.ಡಿ.ಬಿ.ಯ ₹20 ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಕೋಟೆ ಮಾದರಿ ನಗರ ಸಾರಿಗೆ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಶಕ್ತಿ ಯೋಜನೆ ಜಾರಿ ಮುನ್ನ ರಾಜ್ಯದಲ್ಲಿ ಪ್ರತಿ ದಿನ 84 ಲಕ್ಷ ಜನ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ನಂತರ 1.10 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಕುರಿತು ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು. ಈಗ ಯೋಜನೆ ಜಾರಿಯಾಗಿದೆ. ಕಳೆದ 8 ತಿಂಗಳ ಅವಧಿಯಲ್ಲಿ 139 ಕೋಟಿ ಜನ ಸಂಚಾರ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಇದಾಗಿದೆ ಎಂದು ಬಣ್ಣಿಸಿದರು. ಕೆ.ಕೆ.ಆರ್.ಟಿ.ಸಿ. ಸಂಸ್ಥೆಗೆ ಈಗಾಗಲೆ 630 ಬಸ್ ನೀಡಲಾಗಿದೆ. ಮುಂದಿನ ದಿನದಲ್ಲಿ ಮತ್ತೆ 485 ಬಸ್ ನೀಡಲಾಗುವುದು. ರಾಜ್ಯದಲ್ಲಿ 2016ರ ನಂತರ 13,888 ಜನ ನಿವೃತ್ತಿಯಾಗಿದ್ದು, ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆದಿರಲಿಲ್ಲ. 

Latest Videos

undefined

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಕೆಡಿಪಿ ಸಭೆ: ಸಚಿವ ಜಮೀರ್‌ ಅಹ್ಮದ್‌

ನಮ್ಮ ಸರ್ಕಾರ ಬಂದ ಕೂಡಲೆ ನೇಮಕಾತಿಗೆ ಚಾಲನೆ ನೀಡಿದ್ದೇವೆ. 9 ಸಾವಿರ ಸಿಬ್ಬಂದಿ ನೇಮಕಕ್ಕೆ ಸಿ.ಎಂ. ಒಪ್ಪಿಗೆ ನೀಡಿದ್ದಾರೆ. ಇದರಲ್ಲಿ ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ 1,680 ನೇಮಕಾತಿ ಸೇರಿವೆ. 500 ಜನರಿಗೆ ಅನುಕಂಪ ಮೇಲೆ ಉದ್ಯೋಗ ನೀಡಲಾಗಿದೆ ಎಂದರು. ಕೆ.ಎಸ್.ಆರ್.ಟಿ.ಸಿ ಮತ್ತು ಕೆ.ಕೆ.ಆರ್.ಟಿ.ಸಿ. ಸಂಸ್ಥೆಯಲ್ಲಿನ ಸಾರಿಗೆ ನೌಕರರು ಅಪಘಾತದಲ್ಲಿ ಮರಣ ಹೊಂದಿದಲ್ಲಿ ₹1 ಕೋಟಿ ಜೀವ ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದು, ಇದು ದೇಶದಲ್ಲಿಯೆ ಮಾದರಿಯಾಗಿದೆ. ಒಂದೆಡೆ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಬೇಕು. ಇನ್ನೊಂದೆಡೆ ಕಾರ್ಮಿಕರ ಹಿತವು ಕಾಯಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ ಎಂದರು.

ಇತ್ತೀಚೆಗೆ ನಡೆದ ಮಂಡಳಿ ಸಭೆಯಲ್ಲಿ ಈಶಾನ್ಯ ಭಾಗದ ಜಿಲ್ಲೆಗಳು ಬೆಂಗಳೂರಿಗೆ 600 ಕಿ.ಮೀ. ದೂರದಲ್ಲಿರುವ ಕಾರಣ ಮತ್ತು ಓಡಾಟ ಹೆಚ್ಚಿರುವುದರಿಂದ ವೋಲ್ವೋ, ಎ.ಸಿ. ಬಸ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸುವಂತೆ ಎಂ.ಡಿ. ಅವರಿಗೆ ಸೂಚನೆ ನೀಡಿದ್ದೇನೆ. ಪರಿಣಾಮ ಇಂದಿಲ್ಲಿ ಎ.ಸಿ./ ನಾನ್ ಎ.ಸಿ. ಸ್ಲೀಪರ್ ಬಸ್‍ಗಳಿಗೆ ಚಾಲನೆ ನೀಡಿದ್ದೇವೆ ಎಂದರು.

ಸ್ಯಾಟಲೈಟ್‌ ಬಸ್‌ ನಿಲ್ದಾಣ: ಕಲಬುರಗಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ಹೊರವಲಯದ ನಾಲ್ಕು ದಿಕ್ಕಿನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಪ್ರಸ್ತಾವನೆಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನಿವೇಶನ ನೀಡಿದಲ್ಲಿ ಸ್ಯಾಟ್‍ಲೈಟ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಕಲಬುರಗಿ ಮಹಾನಗರ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿನಿತ್ಯ 1,200 ಬಸ್ ನಿರಂತರ ಕಾರ್ಯಾಚರಣೆ ಮಾಡುತ್ತಿವೆ. 

ಪರಿಣಾಮ ನಗರದಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಪರಿಸರ ಮಾಲಿನ್ಯ ಹೆಚ್ಚಿದೆ. ಇದನ್ನು ತಡೆಯಲು ಕಲಬುರಗಿ ನಗರದ ನಾಲ್ಕು ರಿಂಗ್ ರಸ್ತೆಯಲ್ಲಿ ಅಂದರೆ ಜೇವರ್ಗಿ ರಸ್ತೆ, ಹುಮನಾಬಾದ ರಸ್ತೆ, ಆಳಂದ ರಸ್ತೆ, ಸೇಡಂ ರಸ್ತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದರಿಂದ ವೇದಿಕೆಯಲ್ಲೇ ಸಾರಿಗೆ ಸಚಿವರು ಶಾಸಕರ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಹಿಂದೆ ತಾವು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾಗಿದ್ದಾಗ 5 ಕೋಟಿ ರು. ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡಿದೆ. ಮುಂದೆ ಮಂಡಳಿಯಿಂದ ಉಳಿದ ₹15 ಕೋಟಿ ನೀಡಿ ಸುಸಜ್ಜಿತ ಬಸ್ ನಿಲ್ದಾಣ ಪೂರ್ಣಗೊಳಿಸಲಾಗಿದೆ. 

ಲೋಕಸಭೆ ಸಂದರ್ಭದಲ್ಲಿ ಶೆಟ್ಟರ್‌ ಮತ್ತೆ ಬಿಜೆಪಿ ಸೇರಿದ ಬೆಳವಣಿಗೆ ಸರಿಯಲ್ಲ: ಜನಾರ್ದನ ಪೂಜಾರಿ

ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ನಿರ್ಮಾಣದಿಂದ ವಿವಿಧ ಗ್ರಾಮೀಣ ಭಾಗದಿಂದ ನಗರಕ್ಕೆ ಓಡಾಡುವ ಹಳ್ಳಿ ಜನರಿಗೆ ತುಂಬಾ ಅನುಕೂಲವಾಗಿದೆ ಎಂದರು. ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, ಮಂಡಳಿಯಿಂದಲೆ ₹20 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಕೆ.ಕೆ.ಆರ್.ಟಿ.ಸಿ ಸಂಸ್ಥೆಗೆ 120 ಬಸ್ ಖರೀದಿಗೆ ಮಂಡಳಿಯಿಂದ ₹50 ಕೋಟಿ ನೀಡಲಾಗುವುದು. ಇತ್ತೀಚೆಗೆ ಮಂಡಳಿಯಲ್ಲಿ ಒಂದು ನಿರ್ಣಯ ತೆಗೆದುಕೊಂಡಿದ್ದು ಶೇ.1/3 ಭಾಗ ಮಂಡಳಿ ಅನುದಾನ ನೀಡಿದರೆ, ಉಳಿದ 2/3 ಭಾಗ ಸಂಬಂಧಪಟ್ಟ ಇಲಾಖೆ ನೀಡಬೇಕು. ಹೀಗಾಗಿ ಬಸ್ ಖರೀದಿಗೆ ಉಳಿದ ಹಣ ಸರ್ಕಾರ ನೀಡಬೇಕೆಂದು ಸಚಿವ ರಾಮಲಿಂಗಾರೆಡ್ಡಿಗೆ ಅವರಿಗೆ ಕೋರಿಕೊಂಡರು.

click me!