ಸೋಮರಡ್ಡಿ ಅಳವಂಡಿ
ಕೊಪ್ಪಳ (ಅ.30) : ಕೊಪ್ಪಳ ಜಿಲ್ಲೆಯ ಮಾರ್ಗವಾಗಿ ಸಾಗುವ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಇನ್ನು ಜಾರಿಯಾಗುವ ಮುನ್ನವೇ ಅಪಸ್ವರ ಎದ್ದಿದೆ. ಊರಿಲ್ಲದ ಜಾಗದಲ್ಲಿ ಹೆದ್ದಾರಿ ಸಾಗುವಂತೆ ಮಾಡುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಮಾಡುವುದೇ ಜನರ ಅನುಕೂಲಕ್ಕಾಗಿ. ಆದರೆ, ಅದೇ ಹೆದ್ದಾರಿ ಯಾವುದೇ ಊರು ಸಂಪರ್ಕ ಇಲ್ಲದಂತೆ ಕೊಪ್ಪಳ ತಾಲೂಕಿನಲ್ಲಿ ಸಾಗುವುದಾದರೆ ಅದರಿಂದ ಯಾರಿಗೆ ಅನುಕೂಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಅನೇಕರು.
undefined
ಕೊಪ್ಪಳ ಮಾರ್ಗವಾಗಿ ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ!
ಪುಣೆ ಮತ್ತು ಬೆಂಗಳೂರು ಜನರಿಗೆ ಮಾತ್ರ ಅನುಕೂಲ ಕಲ್ಪಿಸುವುದಕ್ಕಾಗಿಯೇ ಈ ಹೆದ್ದಾರಿಯನ್ನು ನಿರ್ಮಾಣ ಮಾಡುವುದಾದರೆ ಕೊಪ್ಪಳ ಜಿಲ್ಲೆಯ ರೈತರು ಯಾಕೆ ಭೂಮಿ ನೀಡಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಸುಮಾರು 100 ಕಿಲೋಮೀಟರ್ ಅಂತರ ಕಡಿಮೆಯಾಗುತ್ತದೆ ಮತ್ತು ಸಮಯದ ಉಳಿತಾಯವೂ ಆಗುತ್ತದೆ. ಇದಕ್ಕಿಂತ ಹೆಚ್ಚಾಗಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವುದರಿಂದ ನಾಲ್ಕಾರು ಕಿಲೋಮೀಟರ್ ಅಂತರದಲ್ಲಿಯೇ ಇದ್ದರೂ ಸಂಪರ್ಕಕ್ಕೆ ನೂರಾರು ಕಿಲೋಮೀಟರ್ ಸುತ್ತಾಡಬೇಕಾದ ಹತ್ತಾರು ಗ್ರಾಮಗಳು, ನಾಲ್ಕಾರು ತಾಲೂಕು ಕೇಂದ್ರಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ಇನ್ಮುಂದೆ ಕೇವಲ ನಾಲ್ಕಾರು ಕಿಲೋಮೀಟರ್ ಸೇತುವೆಯ ಮೇಲೆ ಸಾಗಿದರೆ ಅವರಿಗೆ ಸಂಪರ್ಕ ಸಾಧ್ಯವಾಗುತ್ತದೆ.
ಆದರೆ, ಈಗ ಪುಣೆ-ಬೆಂಗಳೂರು ಹೆದ್ದಾರಿ ಹೊಸ ರಸ್ತೆಯನ್ನೇ ನಿರ್ಮಾಣ ಮಾಡಲಾಗುತ್ತಿದ್ದು, ಕೊಪ್ಪಳ ತಾಲೂಕಿನಲ್ಲಿ ಊರು, ಹೋಬಳಿಗಳ ಸಂಪರ್ಕ ಇಲ್ಲದಿರುವ ಕಡೆಯೇ ಅದು ಹಾದು ಹೋಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಯಲಬುರ್ಗಾ ತಾಲೂಕಿನ ತಳಕ್ ಗ್ರಾಮದ ಬಳಿಯ ಅಡವಿಹಳ್ಳಿಯಿಂದ ನೇರವಾಗಿ ಮತ್ತೂರು ಗ್ರಾಮದ ಬಳಿ ತುಂಗಭದ್ರಾ ನದಿಯ ಮಾರ್ಗವಾಗಿ ಸಾಗುತ್ತದೆ. ಈ ನಡುವೆ ಯಾವೊಂದು ಗ್ರಾಮ, ಹೋಬಳಿಗಳು ಸಂಪರ್ಕ ಇಲ್ಲ. ಇದರಿಂದ ಸ್ಥಳೀಯರಿಗೆ ಯಾವುದೇ ಅನುಕೂಲವಾಗುವುದಿಲ್ಲ.
ಹೆದ್ದಾರಿ ನಿರ್ಮಾಣದಲ್ಲಿ ಒಂಚೂರು ಮಾರ್ಪಾಡು ಮಾಡಿದರೆ ಹತ್ತಾರು ಗ್ರಾಮಗಳನ್ನು ಸಂಪರ್ಕಿಸಿ ಹಾದು ಹೋಗುವಂತೆ ಮಾಡಬಹುದು. ಇದರಿಂದ ಸ್ಥಳೀಯವಾಗಿ ರಸ್ತೆ ಮಾರ್ಗದ ಅನುಕೂಲ ದೊರೆಯುತ್ತದೆ.
ಕವಲೂರು, ಬೆಟಗೇರಿ ಹಾಗೂ ಅಳವಂಡಿ ಮಾರ್ಗವಾಗಿ ನಿರ್ಮಾಣ ಮಾಡಿದರೆ ತಾಲೂಕಿನಲ್ಲಿ ಸಾಕಷ್ಟುಅನುಕೂಲವಾಗುತ್ತದೆ ಅಥವಾ ಈಗಾಗಲೇ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಬಳಕೆ ಮಾಡಿಕೊಂಡು ಹಲಿಗೇರಿ ಮಾರ್ಗವಾಗಿ ಹಿರೇಸಿಂದೋಗಿ, ಕಾತರಕಿ ಗ್ರಾಮದ ಮಾರ್ಗವಾಗಿಯಾದರೂ ಸಾಗಿದರೆ ಉತ್ತಮ. ಅದರಿಂದ ಜಿಲ್ಲಾ ಕೇಂದ್ರ ಕೊಪ್ಪಳಕ್ಕೂ ಅನುಕೂಲವಾಗುತ್ತದೆ.
ಹೆದ್ದಾರಿಗಳನ್ನು ನಿರ್ಮಾಣ ಮಾಡುವುದೇ ಜನರಿಗೆ ಮತ್ತು ಗ್ರಾಮಗಳಿಗೆ ಅನುಕೂಲವಾಗಲಿ ಎಂದು. ಆದರೆ, ಪುಣೆ-ಬೆಂಗಳೂರು ಹೆದ್ದಾರಿ ಮಾತ್ರ ಕೊಪ್ಪಳ ತಾಲೂಕಿನಲ್ಲಿ ಯಾವುದೇ ಗ್ರಾಮಗಳು, ಹೋಬಳಿಗಳ ಸಂಪರ್ಕ ಇಲ್ಲದೆ ಸಾಗುತ್ತಿರುವಂತೆ ನಿರ್ಮಾಣ ಮಾಡಲು ಯೋಜನೆ ರೂಪಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ ಸೇರ್ಪಡೆ:
ಪುಣೆ-ಬೆಂಗಳೂರು ರಸ್ತೆ ನಿರ್ಮಾಣ ಯೋಜನೆ ಈ ಹಿಂದೆ ವಿಜಯಪುರ, ಬಾಗಲಕೋಟೆ, ಕೊಪ್ಪಳ ಮಾರ್ಗವಾಗಿ ಸಂಚರಿಸುವಂತೆ ಇತ್ತು. ಆದರೆ ಸಚಿವರೊಬ್ಬರು ಪ್ರಭಾವ ಬೀರಿ ಗದಗ ಜಿಲ್ಲೆ ಮಾರ್ಗವಾಗಿ ಸಂಚರಿಸುವಂತೆ ಮಾಡಿದ್ದಾರೆ. ಗದಗ ಜಿಲ್ಲೆಯನ್ನು ಸೇರ್ಪಡೆ ಮಾಡಿರುವುದಕ್ಕೆ ವಿರೋಧ ಇಲ್ಲ. ಆದರೆ, ಅಲ್ಲಿ ಗ್ರಾಮಗಳು ಸೇರಿದಂತೆ ಕೊಪ್ಪಳ ಜಿಲ್ಲೆಯ ಜನರ ಅನುಕೂಲಕ್ಕಾಗಿಯೂ ಒಂದಿಷ್ಟುಮಾರ್ಪಾಡು ಮಾಡುವಂತೆ ಆಗಬೇಕು ಎನ್ನುವುದು ಸ್ಥಳೀಯರ ಮನವಿ.
ನಿಮ್ಮ ಸೇವೆಯಲ್ಲಿ ಭಾರತೀಯ ರೈಲ್ವೆ.. ಪ್ರಯಾಣಿಕರಿಗೆ ಉಚಿತ ಸ್ನಾನ..!
ರಸ್ತೆಗಳನ್ನು ನಿರ್ಮಾಣ ಮಾಡುವುದೇ ಜನರ ಅನುಕೂಲಕ್ಕಾಗಿ. ಹೀಗಾಗಿ ಹಾದು ಹೋಗುವ ಮಾರ್ಗದಲ್ಲಿ ಸುತ್ತಮುತ್ತಲ ಗ್ರಾಮಗಳಿಗೆ ಸಂಪರ್ಕ ನೀಡಿದರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದರೆ, ಪುಣೆ-ಬೆಂಗಳೂರು ರಸ್ತೆ ನಿರ್ಮಾಣ ಕೊಪ್ಪಳ ತಾಲೂಕಿನಲ್ಲಿ ಊರಿಲ್ಲದ ಜಾಗದಲ್ಲಿ ಸಾಗುತ್ತಿರುವುದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧವಿದೆ.
ರಾಘವೇಂದ್ರ ಹಿಟ್ನಾಳ ಶಾಸಕರು, ಕೊಪ್ಪಳ
ಈಗಾಗಲೇ ನಾವು ರಸ್ತೆ ಮಾರ್ಗದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಪುಣೆ-ಬೆಂಗಳೂರು ಮಾರ್ಗವನ್ನು ಮಾರ್ಪಾಡು ಮಾಡಿ, ಗ್ರಾಮಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ.
ವೀರೇಶ ಸಜ್ಜನ ತಾಪಂ ಮಾಜಿ ಸದಸ್ಯರು