ಚನ್ನಪಟ್ಟಣ ಕ್ಷೇತ್ರ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚನ್ನಪಟ್ಟಣ (ಜೂ.04): ಚನ್ನಪಟ್ಟಣ ಕ್ಷೇತ್ರ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚನ್ನಪಟ್ಟಣದ ವಿರೂಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರಯ್ಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಮೃತಪಟ್ಟಿದ್ದಾರೆ. ಈ ವಿಚಾರ ತಿಳಿದು ಬಹಳ ದುಃಖವಾಗಿದೆ. ಈ ದಾಳಿ ಆಘಾತ ತಂದಿದೆ. ಆನೆ ದಾಳಿಯಿಂದ ಅಸುನೀಗಿರುವ ರೈತ ವೀರಭದ್ರಯ್ಯ ಆತ್ಮಕ್ಕೆ ಚಿರಶಾಂತಿ ಸಿಗಲಿ. ರೈತನ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ವೈಜ್ಞಾನಿಕ ಬೇಲಿ ನಿರ್ಮಿಸಿ: ಕಾಡಂಚಿನ ಗ್ರಾಮಗಳಲ್ಲಿರುವ ರೈತರು ಆತಂಕದಲ್ಲಿ ಬದುಕುವಂತಾಗಿದೆ. ವೈಜ್ಞಾನಿಕ ಬೇಲಿ ನಿರ್ಮಾಣವೇ ಇದಕ್ಕೆ ಪರಿಹಾರ. ಅರಣ್ಯ ಸಂರಕ್ಷಣೆ ಜತೆಗೆ ಕಾಡಿನ ಅಕ್ಕಪಕ್ಕದ ಜಮೀನುಗಳ ರೈತರ ಹಿತವೂ ಮುಖ್ಯ. ವೈಜ್ಞಾನಿಕ ಬೇಲಿ ನಿರ್ಮಾಣಕ್ಕೆ ನಾನು ಅನೇಕ ಸಲ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಈ ಬಗ್ಗೆ ಇನ್ನೂ ವಿಳಂಬ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಗ್ಯಾರಂಟಿಗೆ ಲಂಚ ಕೇಳಿದರೆ ಒದ್ದು ಒಳಗಾಕ್ತೀವಿ: ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ
ಚನ್ನಪಟ್ಟಣ ಮಾತ್ರವಲ್ಲದೆ, ರಾಮನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರ ಮೇಲೆ ಕಾಡುಪ್ರಾಣಿಗಳ ದಾಳಿ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಬೇಕು. ಸಚಿವರು ಈಗಾಗಲೇ ತಿಳಿಸಿರುವಂತೆ, ಕೂಡಲೇ ನೊಂದ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ಹಸ್ತಾಂತರಿಸಬೇಕು. ಕಾಡಂಚಿನಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ವಹಿಸಿ ಜನರ ಮೇಲೆ ಕಾಡುಪ್ರಾಣಿಗಳ ದಾಳಿ ಆಗದಂತೆ ಶಾಶ್ವತವಾಗಿ ತಡೆಯುವ ಎಲ್ಲಾ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಡಾನೆ ದಾಳಿಗೆ ತೋಟದ ಕಾವಲುಗಾರ ಬಲಿ: ಕಬ್ಬಾಳಿನಲ್ಲಿ ಆನೆ ದಾಳಿಗೆ ತೋಟ ಕಾಯುತ್ತಿದ್ದ ಕಾವಲುಗಾರ ಬಲಿಯಾದ ಘಟನೆ ಮಾಸುವ ಮುನ್ನವೇ, ಕಾಡಾನೆ ದಾಳಿಗೆ ಸಿಲುಕಿ ಮಾವಿನ ತೋಟದಲ್ಲಿ ಕಾವಲು ಕಾಯುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ವಿರೂಪಸಂದ್ರದಲ್ಲಿ ಶನಿವಾರ ಮುಂಜಾನೆ ನಡೆದಿದೆ. ವೀರಭದ್ರಯ್ಯ(33) ಕಾಡಾನೆ ದಾಳಿಯಿಂದ ಮೃತ ವ್ಯಕ್ತಿ. ವೀರಭದ್ರಯ್ಯಕನಕಪುರ ತಾಲೂಕಿನ ಮುತ್ತುರಾಯನದೊಡ್ಡಿ ಗ್ರಾಮದ ಮೂಲದವರು.
ಚನ್ನಪಟ್ಟಣದ ವಿರೂಪಸಂದ್ರದ ಲೋಕೇಶ್ ಅವರಿಗೆ ಸೇರಿದ ಮಾವಿನ ತೋಟದಲ್ಲಿ ಕಾವಲು ಕಾಯುತ್ತಿದ್ದರು. ಈತ ಎಂದಿನಂತೆ ಶನಿವಾರ ಮುಂಜಾನೆ ತೋಟದಲ್ಲಿ ಸುತ್ತಾಡುವಾಗ ಬೇಲಿ ಮರೆಯಲ್ಲಿದ್ದ ಒಂಟಿ ಸಲಗ ಏಕಾಏಕಿ ಮಾಡಿದ ದಾಳಿಯಲ್ಲಿ ವೀರಭದ್ರಯ್ಯ ಕೆಳಗೆ ಬಿದ್ದಾಗ ತಲೆ ಮೇಲೆ ತುಳಿದು ನುಜ್ಜುಗುಜ್ಜು ಮಾಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಕ್ಕೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರೈತರ ಆಕ್ರೋಶ: 4 ದಿನಗಳ ಹಿಂದಷ್ಟೇ ಸಾತನೂರಿನ ಕಬ್ಬಾಳಿನಲ್ಲಿ ಕಾಡಾನೆ ದಾಳಿಗೆ ಮಾವಿನ ತೋಟ ಕಾಯುತ್ತಿದ್ದ ಕಾವಲುಗಾರ ಮೃತಪಟ್ಟಕಹಿ ಘಟನೆ ಮಾಸುವ ಮುನ್ನವೆ ವಿರೂಪಸಂದ್ರ ಗ್ರಾಮದಲ್ಲೂ ಇದೇ ರೀತಿ ದುರ್ಘಟನೆ ಮರುಕಳಿಸಿದೆ. ಈ ಭಾಗದಲ್ಲಿ ಪದೇಪದೆ ಆನೆಗಳ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಆನೆದಾಳಿ ತಡೆಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಆನೆ ದಾಳಿಯಿಂದ ನಮ್ಮ ಬೆಳೆ ನಾಶವಾಗುವ ಜತೆಗೆ ಅಮೂಲ್ಯ ಪ್ರಾಣಹಾನಿಯೂ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗೃಹಲಕ್ಷ್ಮೀಗಾಗಿ ಅತ್ತೆ-ಸೊಸೆ ನಡುವೆ ಪೈಪೋಟಿ: ರೇಷನ್ ಕಾರ್ಡಿಗಾಗಿ ಕುಟುಂಬಗಳು ಇಬ್ಭಾಗ
15 ಲಕ್ಷ ಪರಿಹಾರ ಘೋಷಣೆ: ಈ ವೇಳೆ ಗ್ರಾಮಸ್ಥರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ವೀರಭದ್ರಯ್ಯ ಸಾವಿಗೆ ವಿಷಾದ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ 15 ಲಕ್ಷ ರು. ಪರಿಹಾರ ದೊರೆಯಲಿದೆ. ಇದಲ್ಲದೇ ಪ್ರತಿ ತಿಂಗಳ ಕುಟುಂಬ ನಿರ್ವಹಣೆಗೆಂದು ಅವರ ಅವಲಂಬಿತರಿಗೆ 2 ವರ್ಷ ತಿಂಗಳಿಗೆ 2 ಸಾವಿರ ನೀಡಲಾಗುವುದು ಎಂದು ತಿಳಿಸಿದರು.