ತುಮಕೂರು: ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ

By Kannadaprabha NewsFirst Published Aug 9, 2019, 7:58 AM IST
Highlights

ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ತುಮಕೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕುಣಿಗಲ್ ತಾಲೂಕಿನಲ್ಲಿ ಅಕ್ರಮವಾಗಿ ಹಲವರು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತುಮಕೂರು(ಆ.09): ಕುಣಿಗಲ್‌ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಅಂಬೇಡ್ಕರ್‌ ಸೇನೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗ ಹೋಬಳಿ ವ್ಯಾಪ್ತಿಯ ಹೊಸೂರು ಮತ್ತು ಜಾಲಧರೆಪಾಳ್ಯ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಕಲ್ಲು ಗಣಿ ಮಾಫಿಯಾ ತಲೆ ಎತ್ತಿದ್ದು ಕೆಲವು ವಸೂಲಿಕೋರರಿಗೆ ಅನುಕೂಲವಾಗುತ್ತಿದ್ದು, ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ ತಪ್ಪಿಲ್ಲ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಎಚ್‌.ಜಿ.ರಮೇಶ್‌ ಆರೋಪಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು, ನದಿಗಿಳಿದು ರೈತರ ಪ್ರತಿಭಟನೆ

ಗುರುವಾರ ಅಂಬೇಡ್ಕರ್‌ ಸೇನೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹಲವಾರು ಸಂಘ-ಸಂಸ್ಥೆಗಳು ಸೇರಿದಂತೆ ಕೆಲವು ಪತ್ರಿಕೆಗಳ ಹೆಸರಿನಲ್ಲೂ ನಿರಂತರವಾಗಿ ಕಲ್ಲು ಗಣಿಗಾರಿಕೆಯ ಮೇಲೆ ಒತ್ತಡ ತಂದು ಹಣ ಪಡೆದು ಹೋಗುತ್ತಿದ್ದಾರೆ. ಸ್ಥಳೀಯ ವಾಸಿಗಳಿಗೆ ಆಗುತ್ತಿರುವ ನೋವು ಮತ್ತು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ತಕ್ಷಣ ಇಂತಹ ದಂಧೆಗಳಿಗೆ ಅವಕಾಶ ನೀಡದೇ ಕ್ರಮ ವಹಿಸಿ ಗಣಿಗಾರಿಕೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಹಸೀಲ್ದಾರ್‌ ವಿಶ್ವನಾಥ್‌ ಕಲ್ಲುಗಣಿಗಾರಿಕೆ ನಡೆಯುವ ಸ್ಥಳ ಮತ್ತು ಅವರು ಪಡೆದಿರುವ ದಾಖಲಾತಿಗಳನ್ನು ಪರಿಶೀಲಿಸಿ ಮುಂದಿನ 15 ದಿನಗಳಲ್ಲಿ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜು, ಎಚ್‌.ರಾಘವೇಂದ್ರ ಸೇರಿದಂತೆ ಇತರರು ಇದ್ದರು.

ಬೆಂಗಳೂರು: 370 ರದ್ದು ವಿರೋಧಿಸಿ ಬೀದಿಗಿಳಿದ ಪ್ರಗತಿಪರರು

click me!